ಸಮಕಾಲೀನ ವಕ್ತಾರ, ಪರಂಪರೆ ವ್ಯಕ್ತಿ ಕುವೆಂಪು
ಕ.ಪ್ರ.ವಾರ್ತೆ ಮೈಸೂರು ಅ. 25
ರಾಷ್ಟ್ರಕವಿ ಕುವೆಂಪು ಅವರು ಸಮಕಾಲೀನ ವಕ್ತಾರ ಹಾಗೂ ಪರಂಪರೆಯ ವ್ಯಕ್ತಿ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಂ.ಪ. ನಾಗರಾಜಯ್ಯ ಹೇಳಿದರು.
ಮೈಸೂರು ವಿವಿಯ ಕುವೆಂಪು ಕಾವ್ಯಾಧ್ಯಯನ ಪೀಠ, ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿರುವ ಕುವೆಂಪು ಮತ್ತು ಪರಂಪರೆ ಎಂಬ ಎರಡು ದಿನಗಳ ವಿಚಾರ ಸಂಕಿರಣ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯ ಪರಂಪರೆ ಸೃಷ್ಟಿಸುವ ಮೂಲಕ ಹೊಸ ಸಾಹಿತ್ಯ ಹುಟ್ಟು ಹಾಕಿದ ಕುವೆಂಪು ಅವರು, ಜನರ ಪ್ರತಿನಿಧಿಯಾಗಿ ಉಳಿದ ಸಮಕಾಲೀನ ವಕ್ತಾರರು. ಅವರು ಹೊಸ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕುವುದರ ಜತೆಗೆ ತಾವೇ ಪರಂಪರೆ ವ್ಯಕ್ತಿಯಾಗಿ ಬೆಳೆದರು. ಮುಂದೊಂದು ದಿನ ನಾನು ಪರಂಪರೆಯ ವ್ಯಕ್ತಿಯಾಗುತ್ತೇನೆ ಎಂದು ಅವರು ಭಾವಿಸಿರಲಿಲ್ಲ ಎಂದರು.
ಉತ್ಕೃಷ್ಟ ಕಾದಂಬರಿ ಪ್ರವೇಶವಾಗದ ಸಂದರ್ಭದಲ್ಲಿ ಶ್ರೇಷ್ಠ ಕಾದಂಬರಿಗಳನ್ನು ಕೊಟ್ಟ ಕುವೆಂಪು ಅವರು, ಖಂಡಕಾವ್ಯ, ಭಾವಗೀತೆ, ನಾಟಕಗಳನ್ನು ರಚಿಸಿದ ಪರಿ ಅದ್ಭುತ. ಅವರ ನಾಟಕಗಳಲ್ಲಿ ಪೌರಾಣಿಕ ಸ್ಪರ್ಶವಿತ್ತು. ಇಪ್ಪತ್ತನೇ ಶತಮಾನದ ಸಾರಸ್ವತ ಲೋಕದ ಒಬ್ಬ ದೃಷ್ಟರರಾಗಿ, ಸೃಷ್ಟರರಾಗಿ ಹಾಗೂ ವಕ್ತಾರರಾಗಿ ಹೊಸ ಪರಂಪರೆ ಹಾಕಿಕೊಟ್ಟ ಮಹಾಕವಿ ಎಂದು ತಿಳಿಸಿದರು.
ಕುವೆಂಪು ಭಿನ್ನ: ನವೋದಯ ಕಾಲದ ಪ್ರಾತಿನಿಧಿಕ ಕವಿಗಳಾಗಿದ್ದ ಬೇಂದ್ರೆ, ಡಿವಿಜಿ, ಪುತಿನ ಹಾಗೂ ಅಡಿಗರು ಇವರಿಗಿಂತ ಕುವೆಂಪು ಭಿನ್ನವಾಗಿ ನಿಲ್ಲುತ್ತಾರೆ. ಅವರು ದೃಷ್ಟರರಾಗಿ ಹಾಗೂ ಸೃಷ್ಟರರಾಗಿ ಮಾತ್ರ ಸಾಹಿತ್ಯ ನೀಡಿದವರು. ಆದರೆ ಕುವೆಂಪುನಂತೆ ಸಾಮಾಜಿಕ ವಕ್ತಾರರಾಗಿ ನಿಲ್ಲಲ್ಲು ಸಾಧ್ಯವಾಗಿಲ್ಲ ಎಂದರು.
ಭಿನ್ನ ಕಾಲದ ಜತೆಗೆ ನಿರಂತರ ಪಯಣ ಆರಂಭಿಸಿದ ಕುವೆಂಪು ಅವರಿಗೆ ದೊಡ್ಡ ಗುರು ಪರಂಪರೆ ಇತ್ತು. ಬಿಎಂಶ್ರೀ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯ ಲೋಕ ಪ್ರವೇಶಿಸಿದರೆ, ಕುವೆಂಪು ಅವರು ಕನ್ನಡದಲ್ಲಿ ಓದಿ ಇಂಗ್ಲಿಷ್ ಸಾಹಿತ್ಯ ರಚಿಸಿದವರು ಎಂದು ತಿಳಿಸಿದರು.
ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕಾವ್ಯಾಧ್ಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಇದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಸ್ವಾಗತಿಸಿದರು. ಎಂ. ಯೋಗೀಶ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

