ಕಾಡು ರಕ್ಷಣೆಯಲ್ಲಿ ಆದಿವಾಸಿ ಕೊಡುಗೆ ಅಪಾರ
ಕ.ಪ್ರ.ವಾರ್ತೆ ಹುಣಸೂರು ಸೆ. 1
ಅರಣ್ಯ ಹಾಗೂ ವನ್ಯಜೀವನ ಸಂರಕ್ಷಣೆಯಲ್ಲಿ ಅಪಾರ ಕೊಡುಗೆ ನೀಡಿರುವ ಆದಿವಾಸಿಗಳ ಬದುಕನ್ನು ಹಸನಾಗಿಸುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಬೆ. ಬೋರಲಿಂಗಯ್ಯ ವಿಷಾದಿಸಿದರು.
ಪಟ್ಟಣದ ಡೀಡ್ ಸಂಸ್ಥೆಯ ಆವರಣದಲ್ಲಿ ಭಾನುವಾರ ನಡೆದ 35ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಗಳು ಅದಿವಾಸಿಗಳ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಅನುದಾನ ವ್ಯಯ ಮಾಡುತ್ತಿವೆ. ಇಂದಿಗೂ ಹಾಡಿಗಳ ಜನರ ಬದುಕು ಹಸನಾಗಿಲ್ಲ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಎಲ್ಲರ ಪಾತ್ರ ಅಗತ್ಯವಾಗಿದೆ ಎಂದರು.
ಆದಿವಾಸಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ಪ್ರಾರಂಭಿಸಿ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಬಿರ್ಸಾಮುಂಡಾ ಹಾಗೂ ಧರ್ಮ ಪ್ರಚಾರಕ್ಕೆಂದು ಬ್ರಿಟನ್ನಿಂದ ಬಂದಿದ್ದ ಪಾದ್ರಿ ವರಿಯರ್ ವೆಲವೆನ್ ಎಂಬವರು ಆದಿವಾಸಿಗಳ ಸಾಂಸ್ಕೃತಿಕ ಬದುಕು, ಸಾಧನೆ ಕಂಡು ದೇಶಕ್ಕೆ ತೆರಳದೆ ಇಲ್ಲೇ ಉಳಿದು, ನಮ್ಮ ಸಂಸ್ಕೃತಿಗೆ ತನ್ನ ದೇಶದ ವಿರುದ್ಧವೇ ಎದುರು ನಿಂತ ಮಾದರಿ ನಮ್ಮ ಮುಂದಿದೆ ಎಂದ ಅವರು, ಆದಿವಾಸಿಗಳ ಅತಂತ್ರ ಸ್ಥಿತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವರಿಕೆ ಮಾಡಿಕೊಡುವ ಮೂಲಕ ಆದಿವಾಸಿಗಳ ಬದುಕು ರಕ್ಷಿಸುವ ಹೊಸ ಯೋಜನೆ ರೂಪಿಸಬೇಕಿದೆ. ಈ ಬಗ್ಗೆ ಸಮಾನ ಮನಸ್ಕರು ಮುಖ್ಯಮಂತ್ರಿಗಳನ್ನು ಜಾಗೃತಗೊಳಿಸಬೇಕಿದೆ ಎಂದು ತಿಳಿಸಿದರು.
ಸಂಚಿಕೆ ಹೊರತರಬೇಕು: ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಆಡಂಬರ ಜೀವನ ನಡೆಸದ ಗಿರಿಜನರು ಕಾಡು- ಮೇಡು ಪ್ರೀತಿಸುವ, ನಾಟಿ ಔಷಧ ಆದಿವಾಸಿಗಳ ಸಂಸ್ಕೃತಿ, ಪರಂಪರೆ, ಮುಗ್ಧತೆ ಅನನ್ಯವಾದುದು. ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಧನೆಗೈದಿರುವ ಆದಿವಾಸಿಗಳವರ ಆತ್ಮಕಥೆ ಪ್ರಕಟಿಸುವ, ಸಂಚಿಕೆ ಹೊರತರುವ ಅವಶ್ಯವಿದೆ. ಅವರ ಆಹಾರ ಪದ್ಧತಿ ಗ್ರಾಮೀಣ ಔತಣ ಹೆಸರಿನಲ್ಲಿ ಪರಿಚಯಿಸಬೇಕು ಎಂದರು.
ಪ್ರೊ.ಎಚ್. ಗೋವಿಂದಯ್ಯ, ಡೀಡ್ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್ ಅವರು ಆದಿವಾಸಿ ಹೋರಾಟಗಾರರನ್ನು ಸನ್ಮಾನಿಸಿದರು.
ನಿವೃತ್ತ ಅಧಿಕಾರಿ ಕೆ.ಎಂ. ಚಂದ್ರೇಗೌಡ ಆದಿವಾಸಿಗಳ ಅಭಿವೃದ್ಧಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು. ಡೀಡ್ ಸಂಸ್ಥೆ ಅಧ್ಯಕ್ಷ ಎಸ್.ಎಲ್. ನಿಂಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

