ಬಿಜೆಪಿ, ಕೆಜೆಪಿ, ಜೆಡಿಎಸ್ ಒಂದಾದ್ರೂ 18 ಸ್ಥಾನ ಬರಲ್ಲ
ಕ.ಪ್ರ.ವಾರ್ತೆ ಮೈಸೂರು ಸೆ. 16
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿಯು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದು ದೊಡ್ಡ ಪರಿವರ್ತನೆಗೆ ನಾಂದಿಯಾಗಲಿದೆ ಎಂಬುದು ಕೇವಲ ಭ್ರಮೆ ಎಂದು ಕಾಂಗ್ರೆಸ್ ಸಂಸದ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೋದಿ ಅವರು ಪ್ರಧಾನಿ ಆಗೋದ್ರು ಎಂದು ಆರ್ಎಸ್ಎಸ್ ಹಾಗೂ ಬಿಜೆಪಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸುತ್ತಿವೆ ಎಂದು ಕಿಡಿಕಾರಿದರು.
ವಿಶ್ವದ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಇಲ್ಲಿ ಎಲ್ಲಾ ಜಾತಿ, ಜನಾಂಗ, ಧರ್ಮಗಳ ಸುಖ, ಶಾಂತಿ ಬಯಸಬೇಕು. ಆದರೆ ಮೋದಿ ಮುಂದಿನ ಪ್ರಧಾನಿಯಾಗುತ್ತಾರೆ ಎಂಬುದು ವಸ್ತು ಸ್ಥಿತಿಗೆ ವಿರೋಧವಾದುದು. ಬಿಜೆಪಿಯು ವಾಸ್ತವತೆಯ ಬಗ್ಗೆ ಚರ್ಚೆ ಮಾಡಬೇಕು. 1999ರ ಲೋಕಸಭಾ ಚುನಾವಣೆ ಹೊರತುಪಡಿಸಿ, ಅಧಿಕಾರದ ಹತ್ತಿರ ಹೋಗಲೂ ಆ ಪಕ್ಷಕ್ಕೆ ಆಗಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ 200 ಪ್ಲಸ್, ಬಿಜೆಪಿ 100 ಪ್ಲಸ್ ಸೀಟುಗಳನ್ನು ಪಡೆಯಬಹುದು. ಬಿಜೆಪಿಯ ಬಹುದೊಡ್ಡ ಅಂಗ ಪಕ್ಷವಾದ ಜೆಡಿಯು ಹೊರಹೋಗಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ರಾಜಸ್ಥಾನ, ಗುಜರಾತ್, ಛತ್ತೀಸ್ಗಡ, ಮಧ್ಯಪ್ರದೇಶ ಹೊರತುಪಡಿಸಿದರೆ ಬಿಜೆಪಿಯು ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ್, ಉತ್ತರಪ್ರದೇಶದಲ್ಲಿ ಇಲ್ಲ. ಕರ್ನಾಟಕದಲ್ಲಿ ನಿರೀಕ್ಷೆ ಮಾಡಿರುವಷ್ಟು ಸ್ಥಾನಗಳು ಬರುವುದಿಲ್ಲ ಎಂದು ಹೇಳಿದರು.
ಸಮಾಧಾನಕಾರ ಆಡಳಿತ ನೀಡಲು ಸಾಧ್ಯವೆ?: ಕಾಂಗ್ರೆಸ್ ಕಾರ್ಯಕ್ರಮ ಆಧಾರಿತ ಪಕ್ಷ. ಆದರೆ ಬಿಜೆಪಿ ಯಾವ ಕಾರ್ಯಕ್ರಮ ಕೊಡುತ್ತದೆ. ನರೇಂದ್ರ ಮೋದಿ ಅವರಿಂದ ಬಡವರಿಗೆ ಮನೆ, ನಿವೇಶನ, ಶಾಲೆ, ಚಿಕಿತ್ಸೆ, ಸುಭದ್ರ ಹಾಗೂ ಶಾಂತಿ, ಸಮಾಧಾನಕರ ಆಡಳಿತ ನೀಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ- ಕೆಜೆಪಿ- ಜೆಡಿಎಸ್ ಒಂದಾದರೂ 18 ಸೀಟುಗಳು ಬರಲ್ಲ. ಈಗಾಗಲೇ ಬಿಜೆಪಿ- ಜೆಡಿಎಸ್ ಒಂದಾಗಿವೆ. ಮೋದಿ- ದೇವೇಗೌಡರ ಫೋಟೋ ಒಟ್ಟಾಗಿ ಹಾಕಿಕೊಳ್ಳುತ್ತಾರೆ ಎಂದು ಗೇಲಿ ಮಾಡಿದರು. ಮೋದಿ ಇಡೀ ವಿಶ್ವ ಒಪ್ಪಿಕೊಳ್ಳುವ ಸರ್ವಸಮ್ಮತ ನಾಯಕರಲ್ಲ. ಅವರಿಗೆ ವಿಶ್ವದ ದೊಡ್ಡ ರಾಷ್ಟ್ರವಾದ ಅಮೆರಿಕ ವೀಸಾ ಕೂಡ ನೀಡಿಲ್ಲ. ಅವರನ್ನು ಅಸ್ಪೃಶ್ಯರಂತೆ ನೋಡುತ್ತಿದೆ. ಹೀಗಿರುವಾಗ ತೈಲ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂದು ಅವರು ಪ್ರಶ್ನಿಸಿದರು.
ಮೋದಿ ಅವರು ಮಾಡಿರುವ ಎಬಿಸಿಡಿ ಹಗರಣಗಳ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಕೆಲವರು ಬಾಯಿಚಪಲಕ್ಕೆ ಏನೇನು ಹೇಳುತ್ತಾರೆ ಎಂದು ಕಿಡಿಕಾರಿದರು. ಬಿಜೆಪಿಯತ್ತ ಮುಖ ಮಾಡಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಿಲುವಿನ ಬಗ್ಗೆಯೂ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಬದಲಿಗೆ ಬಿಜೆಪಿ ಸೇರಿ ಮಜಾ ಮಾಡ್ಲಿ ಬಿಡಿ ಎಂದರು.
ಪರಾಮರ್ಶೆಗೆ ಕೆಪಿಸಿಸಿ ಅಧ್ಯಕ್ಷರಿಗೆ ಅಧಿಕಾರ ಇದೆ
ಮುಖ್ಯಮಂತ್ರಿ, ಸಚಿವರ ಕಾರ್ಯವೈಖರಿ ಪರಾಮರ್ಶೆಗೆ ಕೆಪಿಸಿಸಿ ಅಧ್ಯಕ್ಷರಿಗೆ ಅಧಿಕಾರ ಇದೆ ಎಂದು ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರಕ್ಕಿಂತ ಪಕ್ಷ ದೊಡ್ಡದು. ಅವರನ್ನು ಸಿಎಂ, ಮಂತ್ರಿಗಳನ್ನಾಗಿ ಮಾಡಿದ್ದು ಪಕ್ಷ. ಹೀಗಾಗಿ ಡಾ.ಜಿ. ಪರಮೇಶ್ವರ್ ಅವರು ಪರಾಮರ್ಶೆ ಮಾಡುವುದು ತಪ್ಪಲ್ಲ ಎಂದು ಹೇಳಿದರು. ಕಾರ್ಯವೈಖರಿ ಪರಾಮರ್ಶೆಗೆ ಯಾರೊಬ್ಬರೂ ವಿರೋಧ ಮಾಡಿಲ್ಲ. ಇದೊಂದು ಉತ್ತಮ ಕ್ರಮ ಎಂದರು.
ತ್ವರಿತವಾಗಿ ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಆಗ್ರಹ
ರಾಜ್ಯದ ಕೆಲವೆಡೆ ಬರ ಪರಿಸ್ಥಿತಿ ಕಾಣಿಸಿಕೊಂಡಿದ್ದು, ರಾಜ್ಯ ಸರ್ಕಾರ ತ್ವರಿತವಾಗಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದ ಎಚ್. ವಿಶ್ವನಾಥ್ ಆಗ್ರಹಿಸಿದರು.
ಮುಖ್ಯಮಂತ್ರಿಗಳು, ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸ ಮಾಡಿ, ರೈತರ ನೆರವಿಗೆ ಧಾವಿಸಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

