ತಾಂತ್ರಿಕ ಶಿಕ್ಷಣಕ್ಕೂ ಇಂಟರ್ನ್ಶಿಪ್ ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಸೆ. 19
ತಾಂತ್ರಿಕ ಶಿಕ್ಷಣದಲ್ಲಿಯೂ ಇಂಟರ್ನ್ಶಿಪ್ ಪ್ರಾರಂಭಿಸಲು ಚಿಂತಿಸಲಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್. ಮಹೇಶಪ್ಪ ಹೇಳಿದರು.
ವಿಟಿಯು ಸ್ನಾತಕೋತ್ತರ ಪ್ರಾದೇಶಿಕ ಕೇಂದ್ರದಲ್ಲಿ, ವರ್ಜಿನಿಯಾ ಸಮುದಾಯ ವಿವಿ ಸಹಯೋಗದಲ್ಲಿ ಗುರುವಾರ ನಡೆದ ಐಸಿಟಿಎಂಜಿಇ- 2013 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೈದ್ಯಕೀಯ ಶಿಕ್ಷಣದಲ್ಲಿ ಇಂಟರ್ನ್ಶಿಪ್ ಇರುತ್ತದೆ. ಅಂತೆಯೇ ತಾಂತ್ರಿಕ ಶಿಕ್ಷಣದಲ್ಲಿಯೂ ಇಂಟರ್ನ್ಶಿಪ್ ಅಗತ್ಯ. ತಾಂತ್ರಿಕ ಶಿಕ್ಷಣ ಮುಗಿಸಿ ಉದ್ಯಮಗಳಿಗೆ ಕೆಲಸಕ್ಕೆ ಹೋದರೆ ವಿದ್ಯಾರ್ಥಿಗಳಿಗೆ ಯಂತ್ರಗಳ ಬಗ್ಗೆಯಾಗಲಿ, ಅವುಗಳು ತಯಾರಿಸುವ ಉತ್ಪನ್ನದ ಬಗ್ಗೆಯಾಗಲಿ ಮಾಹಿತಿ ಇರುವುದಿಲ್ಲ. ಆದ್ದರಿಂದ ಇಂಟರ್ನ್ಶಿಪ್ ಮಾಡಿದರೆ ಯಂತ್ರಗಳು ಮತ್ತು ಅವುಗಳ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಇರುತ್ತದೆ ಎಂದು ಹೇಳಿದರು.
ಜ್ಞಾನವೇ ಬಂಡವಾಳವಾಗಲಿ: ತಾಂತ್ರಿಕ ಶಿಕ್ಷಣದ ಮೂರನೆ ಸೆಮಿಸ್ಟರ್ ಮುಗಿದ ಬಳಿಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ 30 ರಿಂದ 60 ದಿನಗಳು ಇಂಟರ್ನ್ಶಿಪ್ ಮಾಡುವುದು ಕಡ್ಡಾಯ ಆಗಬೇಕು. ಈ ನಿಟ್ಟಿನಲ್ಲಿ ವಿಟಿಯು ಚಿಂತನೆ ನಡೆಸಿದೆ. ಅಲ್ಲದೆ ಒಂದು ವರ್ಷದಲ್ಲಿ ಸುಮಾರು 10 ಸಾವಿರ ಮಂದಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿ ನಮ್ಮದಾಗಿದೆ. ತಾಂತ್ರಿಕ ಶಿಕ್ಷಣ ಮುಗಿದ ಬಳಿಕ ಯಾವುದಾದರು ವ್ಯವಹಾರ ಮಾಡಲು ಬಂಡವಾಳ ಹೂಡಬೇಕು ಎಂಬ ಚಿಂತೆಯನ್ನು ಯುವಕರು ಬಿಡಬೇಕು. ಬದಲಿಗೆ ನಿಮ್ಮ ಜ್ಞಾನವೆ ಬಂಡವಾಳ ಆಗಬೇಕು ಎಂದರು.
ಎಲ್ಲಾ ತಾಂತ್ರಿಕ ಕಾಲೇಜಿನಲ್ಲಿಯೂ ಆವಿಷ್ಕಾರ ಕ್ಲಬ್ ತೆರೆಯಬೇಕು. ಅಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರಕಿದಂತೆ ಆಗುತ್ತದೆ. ಅಲ್ಲದೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಹೊಸ ಹೊಸ ಆವಿಷ್ಕಾರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಅದರಲ್ಲಿ ಎಲ್ಲರೂ ಭಾಗವಹಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡೇಷನ್ನ ಸದಸ್ಯ ಕಾರ್ಯದರ್ಶಿ ಡಾ.ದಿನೇಶ್ ಕೆ.ಪಾಲಿವಾಲ್ ಮಾತನಾಡಿ, ಯಾವುದೆ ತಂತ್ರಜ್ಞಾನದ ಸಂಶೋಧನೆಯು ಪರಿಸರಕ್ಕೆ ಪೂರಕವಾಗಿ ಇರುವಂತೆ ನೋಡಿಕೊಳ್ಳಬೇಕು. ಅನೇಕ ಉದ್ಯಮಗಳು ತಂತ್ರಜ್ಞಾನಕ್ಕಾಗಿ ತಾಂತ್ರಿಕ ಕಾಲೇಜುಗಳ ಸಹಾಯ ಪಡೆಯುತ್ತವೆ. ಉದ್ಯಮಗಳಿಗೆ ಕೇವಲ ಲಾಭದ ಉದ್ದೇಶ ಇರುತ್ತದೆಯೇ ಹೊರತು ಪರಿಸರದ ಬಗ್ಗೆ ಕಾಳಜಿ ಇರುವುದಿಲ್ಲ. ಆದ್ದರಿಂದ ತಾವು ನೀಡುವ ಸಲಹೆ ಅಥವಾ ಸಹಾಯ ಪರಿಸರಕ್ಕೆ ಪೂರಕವಾಗಿದ್ದರೆ ಮಾತ್ರ ನೀಡಿ. ಇಲ್ಲವಾದರೆ ಬಿಟ್ಟುಬಿಡಿ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಸೈಕಲ್ನಿಂದ ಬತ್ತ ಮತ್ತು ಹುಲ್ಲು ಬೇರ್ಪಡಿಸುವಿಕೆ ತಂತ್ರಜ್ಞಾನ, ಸೈಕಲ್ ತುಳಿದು ನೀರೆತ್ತುವ ಮಾದರಿ ಸೇರಿದಂತೆ ಹಲವು ರೀತಿಯ ತಂತ್ರಜ್ಞಾನ ಪ್ರದರ್ಶಿಸಿದರು.
ಮಲೇಷ್ಯಾದ ಪಿಐಐ ಕಾಲೇಜಿನ ನಿರ್ದೇಶಕ ಡಾ.ಎನ್. ನರೇನ್, ನೇಪಾಳದ ತ್ರಿಭುವನ್ ವಿವಿ ನಿರ್ದೇಶಕ ಡಾ.ಜಿಬಾ ರಾಜ್ ಪೋಖ್ರೇಲ್, ಕೇಂದ್ರದ ಅಧ್ಯಕ್ಷ ಡಿ.ಎಂ. ಕಿರಣ್, ವಿಶೇಷಾಧಿಕಾರಿ ಡಾ.ಕೆ.ಎಂ. ರವಿಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

