ಕೆಲ್ಲೂರಲ್ಲಿ ಗಣೇಶ ಮೂರ್ತಿ ಬದಲು ಗೌರಿ ಪೂಜೆ
ಪಿ.ಎನ್. ಸುಬ್ರಮಣ್ಯ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಸೆ. 20
ಗಣೇಶ ಚತುರ್ಥಿಯಂದು ದೊಡ್ಡ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಅದರ ಪಕ್ಕ ಗೌರಿ ಮೂರ್ತಿ ಕೂಡಿಸುವುದು ಸರ್ವೆ ಸಾಮಾನ್ಯ. ಆದರೆ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಗಣೇಶನನ್ನು ಕೂಡಿಸದೆ ಕೇವಲ ಗೌರಿ ಮೂರ್ತಿಮಾತ್ರ ಪ್ರತಿಷ್ಠಾಪಿಸಿ ಪೂಜಿಸುವುದು ಇಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ವಿಶೇಷ ಸಂಪ್ರದಾಯ.
ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಗೌರಿ ಮೂರ್ತಿ ತನ್ನದೆ ಆದ ಇತಿಹಾಸ ಹೊಂದಿದೆ. ಗೌರಿ ಹಬ್ಬದಂದು ಪ್ರತಿಷ್ಠಾಪಿಸಲಾಗುವ ಗೌರಿ ಮೂರ್ತಿಯನ್ನು ಒಂದು ತಿಂಗಳ ಕಾಲ ಇಟ್ಟು ಪೂಜೆ ನೆರವೇರಿಸಿ ಮುಂದಿನ ಅಮವಾಸ್ಯೆಯಂದು ವಿಸರ್ಜಿಸಲಾಗುತ್ತದೆ.
ಕೆಲ್ಲೂರು ಗೌರಮ್ಮ (ಶ್ರೀ ಆದಿಶಕ್ತಿ ಗೌರಮ್ಮ) ಎಂದೆ ಪ್ರಸಿದ್ಧಿಯಾಗಿರುವ ದೇವತೆಗೆ ಒಂದು ತಿಂಗಳ ಕಾಲ ಪೂಜೆ ನಡೆಯುತ್ತದೆ. ಉಳಿದ ದಿನಗಳಲ್ಲಿ ದೇವಾಲಯ ಬಾಗಿಲು ಮುಚ್ಚಿರುತ್ತದೆ. ಒಂದು ತಿಂಗಳ ಅವಧಿಯಲ್ಲಿ ತದಿಗೆ ಎಂದು ಎರಡು ದಿನಗಳ ಕಾಲ ದೇವರ ದರ್ಶನ ಸಿಗುವುದಿಲ್ಲ. ಆ ಎರಡೂ ದಿನಗಳಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಈ ಬಾರಿ ಸೆ.27 ರಂದು ತದಿಗೆ ಇದ್ದು ಅಂದು ದೇವರ ದರ್ಶನಕ್ಕೆ ಅವಕಾಶ ಇಲ್ಲ.
ಮುಕ್ತ ಅವಕಾಶ: ಗೌರಮ್ಮ ಮೂರ್ತಿ ಪ್ರತಿಷ್ಠಾಪನೆ ದಿನದಿಂದ ವಿಸರ್ಜನೆ ಮಾಡುವ ಒಂದು ತಿಂಗಳ ಕಾಲ ಗೌರಿ ಹಬ್ಬ ಮತ್ತು ಜಾತ್ರೆ ಮತ್ತಿತರ ದೇವತಾ ಕಾರ್ಯಗಳಿಗೆ ಲಿಂಗಾಯಿತರು, ನಾಯಕರು, ದಲಿತರು, ಮಡಿವಾಳರು ಸೇರಿದಂತೆ ವಿವಿಧ 9 ಕೋಮುಗಳಿಗೆ ಸೇರಿದ ಜನರು ಒಟ್ಟುಗೂಡಿ ಗೌರಿ ಜಾತ್ರೆ ಆಚರಿಸುತ್ತಾರೆ. ಗೌರಿ ಗುಡಿಯಲ್ಲಿ ಮತ್ತೊಂದು ವಿಶೇಷವೆಂದರೆ ಗೌರಿ ಪೂಜೆಗೆ ಆಗಮಿಸುವ ಪ್ರತಿಯೊಬ್ಬ ಮಹಿಳೆ ನೇರವಾಗಿ ದೇವಾಲಯದ ಗರ್ಭಗುಡಿಗೆ ತೆರಳಿ ದೇವರಿಗೆ ಮಡಿಲು ಅಕ್ಕಿ ತುಂಬುವುದು, ಮರದ ಬಾಗಿನ ಅರ್ಪಿಸುವುದು ವಿಶೇಷ ಪೂಜೆ ಸಲ್ಲಿಸಲು ಮುಕ್ತ ಅವಕಾಶವಿದೆ.
ಕೆಲ್ಲೂರಿನಲ್ಲಿ ಪ್ರತಿಷ್ಠಾಪಿಸುವ ಗೌರಿಯನ್ನು ಪೂಜಿಸಿದವರಿಗೆ ಅಭಿವೃದ್ಧಿ, ಸಂತಾನ ಭಾಗ್ಯ, ರೋಗ ರುಜಿನಗಳ ನಿವಾರಣೆಯಾಗುತ್ತದೆ ಎಂಬಿತ್ಯಾದಿ ನಂಬಿಕೆಗಳು ಇಂದಿಗೂ ಜನರಲ್ಲಿದೆ. ಗ್ರಾಮದ ಅಮ್ಮನಕಟ್ಟೆಯಲ್ಲಿ ಸ್ನಾನ ಮಾಡಿ ದೇವರಲ್ಲಿ ಹರಕೆ ಹೊತ್ತು ದೇವಿ ಪೂಜಿಸಿದರೆ ಅನೇಕ ತೊಂದರೆಗಳು, ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಪ್ರತೀತಿ ಇರುವುದರಿಂದ ವರ್ಷದಿಂದ ವರ್ಷಕ್ಕೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಈ ಬಾರಿ ಗೌರಿ ಮೂರ್ತಿಯಲ್ಲಿ ಅ.4ರ ಸಂಜೆ ಅಮವಾಸ್ಯೆಯಂದು ವಿಸರ್ಜನೆಗೆ ಸಿದ್ದಪಡಿಸಿ, ಅ.5 ಬೆಳಗ್ಗೆ ಗ್ರಾಮದ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಗೌರಿ ಮೂರ್ತಿ ವಿಸರ್ಜಿಸುವ ಹಿಂದಿನ ದಿನ ರಾತ್ರಿ ಗ್ರಾಮದಲ್ಲಿ ವಿಶೇಷ ಜಾತ್ರಾ ಮಹೋತ್ಸವವಿದ್ದು, ಅಂದು ಗ್ರಾಮಕ್ಕೆ ಆಗಮಿಸುವ ಹೊರ ಊರಿನವರನ್ನು ಗ್ರಾಮಸ್ಥರು ಆತ್ಮೀಯರಂತೆ ಕಾಣುವುದರೊಂದಿಗೆ ಮನೆಗೆ ಕರೆದು ಊಟ ಬಡಿಸಿ ಉಪಚರಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಪಲ್ಲಕ್ಕಿಯಲ್ಲಿ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಿ ಸಾಂಪ್ರದಾಯಿಕವಾಗಿ ಗ್ರಾಮದ ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.
ಗ್ರಾಮದ ಹೆಣ್ಣು ಮಕ್ಕಳನ್ನು ಮದುವೆಯಾದವರು ಗ್ರಾಮದಲ್ಲಿರುವ ಅಳಿಯನ ಗುಂಡು ಎಂದೆ ಪ್ರಸಿದ್ಧಿಯಾಗಿರುವ ಕಲ್ಲನ್ನು ಎತ್ತಿ ಸಾಹಸ ಪ್ರದರ್ಶಿಸುವ ವಿಶೇಷವು ಇಂದಿಗೂ ಈ ಗ್ರಾಮದಲ್ಲಿ ಆಚರಣೆಯಲ್ಲಿದೆ.
ಹೀಗೆ ಬನ್ನಿ: ಕೆಲ್ಲೂರಿಗೆ ಬರುವವರು ಮೈಸೂರು ಮಾರ್ಗವಾಗಿ ಕೆ.ಆರ್. ನಗರಕ್ಕೆ ಬಂದು ಅಲ್ಲಿಂದ 18 ಕಿ.ಮೀ ಕ್ರಮಿಸಿದರೆ ಕೆಲ್ಲೂರು ಸಿಗುತ್ತದೆ. ಪಿರಿಯಾಪಟ್ಟಣದಿಂದ ಹೊರಡುವವರು ಕಂಪಲಾಪುರ, ರಾವಂದೂರು ಮಾರ್ಗವಾಗಿ 25 ಕಿಮೀ ಸಂಚರಿಸಿದರೆ ಕೆಲ್ಲೂರಿಗೆ ಹೋಗಬಹುದು.
ಕೆಲ್ಲೂರು ಗೌರಿ ಮೂರ್ತಿ ನೋಡಲು ಪೂಜಿಸಲು ಕೇವಲ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವಾರು ಜಿಲ್ಲೆಗಳ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷ ಕೆಲ್ಲೂರು ಗೌರಿ ಪ್ರತಿಷ್ಠಾಪಿಸಿದ ದಿನದಿಂದ ವಿಸರ್ಜಿಸುವ ದಿನದವರೆಗೆ ಭೇಟಿ ಕೊಡುತ್ತಾರೆ. ಆದರೆ ಗ್ರಾಮದಲ್ಲಿ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲ. ಗ್ರಾಮದ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು ಜಾತ್ರೆ ಸಂದರ್ಭದಲ್ಲಿ ಸಮಸ್ಯೆಗಳಿಗೆ ಆಹ್ವಾನ ನೀಡಿದಂತೆ ಬಾಸವಾಗುತ್ತದೆ.
ಗೌರಿ ಹಬ್ಬದಿಂದ ಒಂದು ತಿಂಗಳ ಕಾಲ ನಡೆಯುವ ಗೌರಿ ಪೂಜೆಗೆ ಸಾವಿರಾರು ಭಕ್ತರು ಆಗಮಿಸುವುದು ಸಾಮಾನ್ಯವಾಗಿದ್ದು, ಕೆ.ಆರ್. ನಗರ ಹಾಗೂ ಪಿರಿಯಾಪಟ್ಟಣ ಮತ್ತು ಮೈಸೂರು, ಹಾಸನ, ಮಡಿಕೇರಿಗಳಿಂದ ಹೆಚ್ಚಿನ ಬಸ್ ವ್ಯವಸ್ಥೆ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

