'ದೇಶ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ'
ಕ.ಪ್ರ.ವಾರ್ತೆ ಮೈಸೂರು ಸೆ. 22
ದೇಶವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.
ಕುವೆಂಪುನಗರ ಗಂಗೆ ರಸ್ತೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ಇರುವುದು ಕುಟುಂಬ ವ್ಯವಸ್ಥೆಯಲ್ಲಿ, ಅವಿಭಾಜ್ಯ ಕುಟುಂಬ ಪದ್ಧತಿಯು ದೇಶದ ಸಂಸ್ಕೃತಿ ಬಿಂಬಿಸುತ್ತದೆ ಎಂದರು.
ಅಧಿಕಾರದಲ್ಲಿ ಇಲ್ಲದ ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಸಂತೋಷ. ರಾಜ್ಯದಲ್ಲಿ ಕಳೆದ ಬಾರಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯನ್ನು ಈ ಬಾರಿ ಆಂತರಿಕ ಕಲಹದಿಂದ ಜನ ದೂರ ಇಟ್ಟಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ಮೇಲೆ ಪಾಕಿಸ್ತಾನ, ಚೀನಾ ದಾಳಿ ನಡೆಸುತ್ತಿದೆ. ಬಾಂಗ್ಲಾದವರು ನುಸುಳುತ್ತಿದ್ದಾರೆ. ಅಮೆರಿಕ ಮತ್ತು ಇತರೆ ಭಾರತದ ಮೇಲೆ ಆರ್ಥಿಕ ಆಕ್ರಮಣ ಮಾಡುತ್ತಿದೆ ಎಂದು ತಿಳಿಸಿದರು. ಭಾರತದ ಪ್ರಧಾನಿ ಯಾರಾಗಬೇಕೆಂದು ವಿಶ್ವಬ್ಯಾಂಕ್ ಸೋನಿಯಾ ಗಾಂಧಿ ಅವರಿಗೆ ಪತ್ರ ಕಳುಹಿಸಿದೆ. ದೇಶದ ಪ್ರಧಾನಿ ಯಾರಾಗಬೇಕು ಎಂದು ವಿಶ್ವಬ್ಯಾಂಕ್ ನಿರ್ಧರಿಸುತ್ತಿದೆ ಎಂದು ಕಿಡಿಕಾರಿದರು. ಇದೇ ವೇಳೆ ಎನ್ಐಇ ಕಾಲೇಜು ವಿದ್ಯಾರ್ಥಿ ಹಾಗೂ ನೃತ್ಯ ಕಲಾವಿದ ಚಿನ್ಮಯಿ ಎಂ. ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಜಿ.ಎಂ. ಹೆಗಡೆ, ಸಂಘದ ಕಾರ್ಯದರ್ಶಿ ಸಂಧ್ಯಾ ರವಿ, ಕೋಶಾಧ್ಯಕ್ಷ ಪ್ರವೀಣ್ ನಾಯಕ್ ಇದ್ದರು.
ನಾಳೆ ಗುತ್ತಿಗೆ ನೌಕರರ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 22
ಕೆಪಿಟಿಸಿಎಲ್ ವಿದ್ಯುತ್ ವಿತರಣೆ ಗುತ್ತಿಗೆ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಸೆ.24ರ ಬೆಳಗ್ಗೆ 11ಕ್ಕೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಬೆಂಗಳೂರಿನ ಕಾವೇರಿ ಭವನ ಎದುರು ಪ್ರತಿಭಟಿಸಲಿದ್ದಾರೆ.
ಹೊರಗುತ್ತಿಗೆ ಮೂಲಕ ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂಗಳಲ್ಲಿ ಆಪರೇಟರ್ಸ್, ಹೆಲ್ಪರ್ಸ್, ಡಾಟಾ ಎಂಟ್ರಿ ಆಪರೇಟರ್ಸ್, ಜೂನಿಯರ್ ಪರ್ಸನಲ್ ಅಸಿಸ್ಟೆಂಟ್, ಟೆಲಿಫೋನ್ ಆಪರೇಟರ್ಸ್, ಸೆಕ್ಯೂರಿಟಿ ಗಾರ್ಡ್ ಮುಂತಾದ ಹುದ್ದೆಗಳಲ್ಲಿ ವಿದ್ಯುತ್ ಇಲಾಖೆಗೋಸ್ಕರ ಸೇವೆ ಸಲ್ಲಿಸುತ್ತಿರುವ ನೌಕರರ ಬದುಕು ಶೋಚನೀಯವಾಗಿದೆ. ಕಾಯಂ ಸ್ವರೂಪದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವವರು ವಿದ್ಯುತ್ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ, ಈ ನೌಕರರ ಸೇವೆ, ಅನುಭವ ಪರಿಗಣಿಸಿ ಉದ್ಯೋಗ ಭದ್ರತೆ ಕಲ್ಪಿಸದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆ ಯಶಸ್ವಿಗಾಗಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ವಿದ್ಯುತ್ ಗುತ್ತಿಗೆ ನೌಕರರು ಭಾಗವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಕೆ. ಸೋಮಶೇಖರ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

