ಮೈಸೂರು

ಅಪರೂಪದ ನಿಲುಸುಕಲ್ಲು ಸಮಾಧಿಗಳು ಪತ್ತೆ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 23
ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ, ಕಸಬಾ, ಮಿರ್ಲೆ ಹೋಬಳಿಗಳ ಗ್ರಾಮಗಳಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಯ ಒಂಬತ್ತು ಸಮಾಧಿಗಳು ಪತ್ತೆಯಾಗಿವೆ.
ಕಾವೇರಿ ನದಿ ತೀರದಲ್ಲಿ ಪತ್ತೆಯಾಗಿರುವ ಈ ಸಮಾಧಿಗಳು ಅಪರೂಪದ್ದಾಗಿವೆ. ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಪ್ರಾಧ್ಯಾಪಕ ಡಾ.ಎಸ್.ಜಿ. ರಾಮದಾಸರೆಡ್ಡಿ ಅವರು ಸಾಲಿಗ್ರಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕ ಎಂ.ಕೆ. ಮೃತ್ಯುಂಜಯ ಅವರ ಸಹಕಾರದೊಂದಿಗೆ ಕ್ಷೇತ್ರಕಾರ್ಯ ಮಾಡಿದಾಗ ಸಮಾಧಿಗಳು, ಅವಶೇಷಗಳು ಬೆಳಕು ಕಂಡಿವೆ.
ಹೊಸ ಅಗ್ರಹಾರ ಹೋಬಳಿಯ ಗಂಧನಹಳ್ಳಿಯಲ್ಲಿ (4), ಮಿರ್ಲೆ ಹೋಬಳಿಯ ಕುರುಬರಹಳ್ಳಿಯಲ್ಲಿ (1), ಕಸಬಾ ಹೋಬಳಿಯ ಲಾಳಂದೇವನಹಳ್ಳಿಯಲ್ಲಿ (1) ಗ್ರಾಮಗಳಲ್ಲಿ 20 ಅಡಿಯಿಂದ 10 ಅಡಿ ಎತ್ತರವಿರುವ ಬೃಹತ್ ಗಾತ್ರದ ನಿಲುಸುಕಲ್ಲು ಸಮಾಧಿಗಳಿವೆ. ಈ ಸಮಾಧಿಯ ನೆಲೆಗಳಲ್ಲಿ ಕಪ್ಪು, ಕೆಂಪು, ಕೆಂಪು ಮತ್ತು ಕಪ್ಪು ಬಣ್ಣದ ಮಡಕೆ ಭಾಗಗಳು, ಮೂಳೆ ಭಾಗಗಳು, ಅರೆಯುವ ಕಲ್ಲುಗಳು, ಅಲಂಕಾರಿಕ ಮಡಕೆ ಭಾಗಗಳು, ಕಬ್ಬಿಣ ಕರಗಿಸಿದ ನಂತರ ಉಳಿಯುವ ಕಿಟ್ಟ, ರಸ್ಟೇಟ್ ಕೋಟೆಂಡ್ ಮಡಕೆ ಭಾಗಗಳು ದೊರಕಿವೆ. ನವಶಿಲಾಯುಗ ಸಂಸ್ಕೃತಿಯ ಬೂದುಬಣ್ಣದ, ಮದಕೆಂಪು ಬಣ್ಣದ, ಕಪ್ಪು ಬಣ್ಣ, ಅಲಕಾಂರಿಕ ಮಡಕೆ ಭಾಗಗಳು, ಕುಟ್ಟುವ, ಅರೆಯುವ ಕಲ್ಲಿನಾಯುಧಗಳು ದೊರಕಿವೆ.
ಈ ನಿಲುಸು ಕಲ್ಲುಗಳನ್ನು ಮುನಿವ್ಯಾಸನ್ನಕಲ್ಲು, ಬಾಲಿಕಲ್ಲು, ಮಾರಮ್ಮನಕಲ್ಲು, ಮುನಿಯಪ್ಪವಾಸದಕಲ್ಲು, ಹೊಸೂರಮ್ಮನಕಲ್ಲು ಇತರೆ ಹೆಸರುಗಳಿಂದ ಕರೆಯುತ್ತಾರೆ. ಗಂಧನಹಳ್ಳಿಯ ಲೇ. ಸಿದ್ದರಾಮೇಗೌಡರ ಗದ್ದೆಯಲ್ಲಿ 20 ಅಡಿ ಎತ್ತರ, 12 ಅಡಿ ಅಗಲ, 24 ಅಡಿ ಸುತ್ತಳತೆಯಿರುವ ಅಪರೂಪದ ನಿಲುಸುಕಲ್ಲುಯಿದ್ದು ಭೂಮಟ್ಟದ ಬಂಡೆಯಿಂದ ಮೇಲೆ ತುದಿಯವರೆಗೂ ಚಿಕ್ಕ, ದೊಡ್ಡ 60 ಕುಳಿಗಳಿವೆ. ಕುರುಬರಹಳ್ಳಿ ನೆಲೆಯಲ್ಲಿ 19 ಕುಳಿಗಳಿರುವವು ಕಂಡುಬಂದಿವೆ. ಈ ತರಹದ ಕುಳಿಗಳು ಕುಂತಿಬೆಟ್ಟದ ಮೇಲೆ, ಕೆ.ಆರ್. ಪೇಟೆ ತಾಲೂಕಿನ ಸೋಮನಾಥಪುರ, ಚಿತ್ರದುರ್ಗ ಜಿಲ್ಲೆಯ ಯಾದಲಗಟ್ಟೆ ನೆಲೆಗಳಲ್ಲಿ ಕಂಡುಂಬಿದೆ.
ಸಮಯ ನಿರ್ಧರಿಸಲು ಬಳಕೆ: ಈ ಕುಳಿಗಳನ್ನು ಸ್ಥಳೀಯರು ಪಿತೃಪಕ್ಷ ಕಾಲದಲ್ಲಿ ಎಡೆ ಹಾಕಲು ಮಾಡಿಕೊಂಡಿರುವುದು ಎಂದು ಅಭಿಪ್ರಾಯ ಪಟ್ಟರೆ, ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ಕುಳಿಗಳನ್ನು ಆಕಾಶದಲ್ಲಿರುವ ನಕ್ಷತ್ರಗಳನ್ನು ನೋಡಿ ಸಮಯ ತಿಳಿಯಲು ತೀರ್ಮಾನಿಸಿಕೊಳ್ಳುತ್ತಿದ್ದರು ಎಂದಿದ್ದಾರೆ. ಭಾರತೀಯ ಪುರಾತತ್ವ ಇಲಾಖೆಯ ಪುರಾತತ್ವ ಶಾಸ್ತ್ರಜ್ಞ ಮಹದೇವಯ್ಯನವರು ಅಂದಿನ ಮಾನವನು ಈ ಕುಳಿಗಳನ್ನು ಸಮಯ ನಿರ್ಧರಿಸಲು ಮಾಡಿಕೊಂಡಿರುವ ಕುಳಿಗಳಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಗ್ರಾಮದ ಜೆ.ಎನ್. ರಾಜೇಗೌಡರ ತೆಂಗಿನ ತೋಟದಲ್ಲಿ ಎದುರು ಬದುರು ಎರಡು ನಿಲುಸುಗಳಿದ್ದು 12 ಅಡಿ ಎತ್ತರವಿದೆ. ಎಲೆಮುದ್ದನಹಳ್ಳಿ ಗ್ರಾಮದ ಸಣ್ಣದಾಸಯ್ಯನವರ ಹೊಲದಲ್ಲಿ ಸುಮಾರು 12 ಅಡಿ ಎತ್ತರವಿರುವ ನಿಲುಸು ಕಲ್ಲುಯಿದ್ದು, ಹೊಸೂರಮ್ಮ ದೇವಾಲಯವೆಂದು ಪ್ರಾಣಿ ಬಲಿಕೊಟ್ಟು ಅವರ ಇಷ್ಟಾರ್ಥ ನೆರವೇರಿಸಿಕೊಳ್ಳುವ ಸಂಪ್ರದಾಯ ಗ್ರಾಮದಲ್ಲಿದೆ. ಹೊಸೂರು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಚಿಂಚನಕಟ್ಟೆಯ ಹತ್ತಿರವಿರುವ ರಾಮಲಿಂಗೇಶ್ವರ ದೇವಾಲಯದ ಹತ್ತಿರ ಕಾವೇರಿ ನದಿಯ ದಡದಲ್ಲಿ ಬತ್ತದ ಗದ್ದೆಗಳ ಮಧ್ಯದಲ್ಲಿ 10 ಅಡಿ ಎತ್ತರದ ನಿಸುಲು ಕಲ್ಲುಗಳಿವೆ. ಈ ಸಮಾಧಿ ಕಲ್ಲುಗಳ ಪತ್ತೆಯಿಂದ ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳ ಮಧ್ಯ ಕೊಂಡಿ ಬೆಳೆಸಿದಂತಾಗಿದೆ ಎಂದು ಡಾ. ಸುಂದರ ಅಭಿಪ್ರಾಯಪಟ್ಟಿದ್ದಾರೆ.
ಈ ತರಹದ ನಿಲುಸುಕಲ್ಲು ಸಮಾಧಿಗಳು ಕೇರಳದಲ್ಲಿ ಮತ್ತು ಯೂರೋಪಿನ ಕೆಲವು ಪ್ರದೇಶಗಳು ಹಾಗೂ ಟರ್ಕಿ ದೇಶದ ಗೊಬೆಕ್ಸಿ ತೆಪೆಯಲ್ಲಿದ್ದು ಹೋಲಿಕೆಯಿವೆ. ಈ ಸಮಾಧಿಗಳು ಮೈಸೂರು ಜಿಲ್ಲೆಯಲ್ಲಿ ಅಪರೂಪದ ಸಮಾಧಿಗಳಾಗಿದ್ದು, ಸಂರಕ್ಷಿಸಿ ಗತ ಇತಿಹಾಸ ಸಾರಬೇಕಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.