ನಿರ್ಮಾಣವಾಗದ ತಡೆಗೋಡೆ; ಸಂಚಾರಕ್ಕೆ ಅಡೆತಡೆ
ಪಿ.ಎನ್. ಸುಬ್ರಮಣ್ಯ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಸೆ. 24
ತಾಲೂಕಿನಲ್ಲಿ ಹಾದು ಹೋಗಿರುವ ರಾಜ್ಯಹೆದ್ದಾರಿ ಸೇರಿದಂತೆ ಅನೇಕ ರಸ್ತೆಗಳ ಪಕ್ಕದಲ್ಲಿರುವ ಕೆರೆಗಳಿಗೆ ತಡೆಗೋಡೆ ಇಲ್ಲದೆ ಅನಾಹುತಕ್ಕೆ ಆಹ್ವಾನ ನೀಡುವಂತಿವೆ.
ತಾಲೂಕಿನಲ್ಲಿ ಹಾದು ಹೋಗಿರುವ ಕೊಡಗು- ಹಾಸನ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಹಲವಾರು ಕೆರೆಗಳಿದ್ದು, ಅವುಗಳಿಗೆ ತಡೆಗೋಡೆ ಇಲ್ಲದೆ ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ತಾಲೂಕಿನಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಸೇರಿದಂತೆ ಹಳ್ಳಿಗಳ ಸಂಪರ್ಕ ರಸ್ತೆಗಳು ಹಾಗೂ ಹೋಬಳಿಗಳಿಗೆ ತೆರಳುವ ಬಹುಪಾಲು ರಸ್ತೆಗಳ ಪಕ್ಕದಲ್ಲಿರುವ ಕೆರೆಕಟ್ಟೆಗಳಿಗೆ ಬಹುತೇಕ ನೀರು ತುಂಬಿದ್ದು, ಕೆಲವು ಕೆರೆಗಳು ಅಪಾಯ ಮಟ್ಟದಲ್ಲಿವೆ. ರಸ್ತೆ ಬದಿಯಲ್ಲಿರುವ ಕೆಲವು ಕೆರೆಗಳಲ್ಲಿ ನೀರಿನ ಮಟ್ಟ ರಸ್ತೆಗೆ ಕೆಲವೆ ಅಡಿಗಳಷ್ಟು ಆಳದಲ್ಲಿದ್ದು, ದೂರಕ್ಕೆ ಕೆರೆ ಹಾಗೂ ರಸ್ತೆ ಸಮನಾಗಿವೆ ಎಂಬಂತೆ ಭಾಸವಾಗುತ್ತಿದ್ದು, ವಾಹನ ಸವಾರರು ಎಚ್ಚರ ತಪ್ಪಿದಲ್ಲಿ ಕೆರೆಗೆ ಬೀಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇನ್ನು ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರು ಅತ್ಯಂತ ಜಾಗರೂಕರಾಗಿ ವಾಹನ ಚಲಿಸಬೇಕಿದೆ.
ಸೂಕ್ತ ನಿರ್ವಹಣೆ ಇಲ್ಲ: ಕೆಲ ವರ್ಷಗಳ ಹಿಂದೆ ತಾಲೂಕಿನ ನಂದಿನಾಥಪುರ ಗ್ರಾಮದ ಬಳಿಯ ರಸ್ತೆ ಪಕ್ಕದ ಕೆರೆಗೆ ಬೈಕ್ ಸವಾರನೊಬ್ಬಬಿದ್ದು ಮೃತಪಟ್ಟಿದ್ದ. ಬಹುತೇಕ ಕೆರೆಗಳ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗಳು ಸಹ ಹಾಳಾಗಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಹಳ್ಳಕೊಳ್ಳಗಳು ನಿರ್ಮಾಣವಾಗಿವೆ.
ಕೆಲವು ರಸ್ತೆಗಳ ಒಂದು ಬದಿಯಲ್ಲಿ ಕೆರೆಯಾದರೆ ಮತ್ತೊಂದು ಕಡೆ ಜಮೀನಿನಿಂದ ಕೂಡಿರುವ ದೊಡ್ಡ ಹಳ್ಳಗಳು ಸಹ ಇದ್ದು, ಎರಡೂ ಬದಿ ವಾಹನ ಸವಾರರಿಗೆ ಮುಳುವಾಗಿ ಪರಿಣಮಿಸಿವೆ. ತಾಲೂಕಿನಲ್ಲಿ ಕೆಲವು ರಸ್ತೆಗಳು ಲೋಕೋಪಯೋಗಿ ಇಲಾಖೆಗೆ ಸೇರಿದ್ದರೆ ಮತ್ತೆ ಕೆಲವು ರಸ್ತೆಗಳು ಜಿಪಂಗೆ ಸೇರಿದ್ದು, ಸೂಕ್ತ ನಿರ್ವಹಣೆಯ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರ ವಹಿಸಿ ಅನಾಹುತಗಳು ಆಗುವ ಮುನ್ನವೇ ಸೂಕ್ತ ತಡೆಗೊಡೆಗಳನ್ನು ನಿರ್ಮಿಸುವರೆ?
ಹೆಬ್ಬಾಳು ಸಹಕಾರ ಸಂಘ ಸಾಧನೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 24
ತಾಲೂಕಿನ ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ವಿವಿಧ ಯೋಜನೆಗಳಡಿ ಎರಡು ಕೋಟಿ ರು. ಸಾಲ ವಿತರಿಸಲಾಗಿದ್ದು, ವಸೂಲಾತಿಯಲ್ಲಿಯೂ ಶೇ.90 ರಷ್ಟು ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷ ಚಂದಗಾಲು ಎಸ್. ಶಿವಪ್ರಕಾಶ್ ಹೇಳಿದರು.
ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಂಘವು 1.20 ಲಕ್ಷ ಲಾಭದಲ್ಲಿದೆ ಎಂದು ತಿಳಿಸಿದರು.
ವಾರ್ಷಿಕ 9 ಕೋಟಿ ವಹಿವಾಟು ನಡೆಸುತ್ತಿರುವ ಸಂಘ ಹೆಬ್ಬಾಳು ಸೇರಿದಂತೆ ಸುತ್ತಮುತ್ತಲ 6 ಗ್ರಾಮಗಳ ಸದಸ್ಯ ರೈತರ ಅನುಕೂಲಕ್ಕೆ ಕಾರ್ಯಕ್ರಮ ಹಮ್ಮಿಕೊಂಡು, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಸಹಕಾರದಿಂದ ಉತ್ತಮ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು.
ಸಂಘದಲ್ಲಿ 1,100 ಮಂದಿ ರೈತ ಸದಸ್ಯರಿದ್ದು, ಈ ಪೈಕಿ 220 ಸದಸ್ಯರಿಗೆ ಸಾಲ ವಿತರಣೆ ಮಾಡಲಾಗಿದೆ. 114 ಮಂದಿಗೆ 27 ಲಕ್ಷ ಸಾಲ ಮನ್ನಾ ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಲ್ಲದೆ, ಸದಸ್ಯರು ಕಡ್ಡಾಯವಾಗಿ ಯಶಸ್ವಿನಿ ಯೋಜನೆಯ ಸದಸ್ಯತ್ವ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಮಾಜಿ ಅಧ್ಯಕ್ಷ ಎಚ್.ಕೆ. ಸುಂದರ್, ಎಚ್.ಬಿ. ಯೋಗೇಶ್, ಬಾಲಕೃಷ್ಣ, ನಿರ್ದೇಶಕರಾದ ಜಿ. ದಾಮೋದರ, ಮೋಹನ್, ಸ್ವಾಮಯ್ಯ, ಅನುಸೂಯಮ್ಮ ಮತ್ತು ಇತರ ರೈತರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ 2012-13ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

