ಇರ್ವಿನ್ ರಸ್ತೆ ಡಾಂಬರೀಕರಣಕ್ಕೆ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 24
ಹದಗೆಟ್ಟಿರುವ ರಸ್ತೆಗೆ ಡಾಂಬರಿಕರಣ ಮಾಡುವಂತೆ ಒತ್ತಾಯಿಸಿ ಇರ್ವಿನ್ ರಸ್ತೆಯ ಅಂಗಡಿ ಮಾಲೀಕರು ಮಂಗಳವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ಮಾಲೀಕರು ಇರ್ವಿನ್ ರಸ್ತೆಯ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿ ರಸ್ತೆತಡೆ ನಡೆಸಿದರು.ಈ ರಸ್ತೆಗೆ ಡಾಂಬರು ಹಾಕಿಲ್ಲ. ಗುಂಡಿಗಳು ಬಿದ್ದು, ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇಲ್ಲಿ ಸಂಚರಿಸುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಶಬ್ದ, ಜೊತೆಗೆ ಹಾರ್ನ್ ಮಾಡುವುದರಿಂದ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ ಎಂದು ಆರೋಪಿಸಿದರು.
ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುವುದನ್ನು ನಿರ್ಬಂಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲ. ಸಂಚಾರ ನಿಯಂತ್ರಣ ಮಾಡಲು ಸಂಚಾರ ಪೊಲೀಸರಿಂದಲೇ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ನಗರ ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್ ಮಾತನಾಡಿ, ಈ ರಸ್ತೆಗೆ ಡಾಂಬರು ಹಾಕಲು ಅನುಮತಿ ನೀಡುವಂತೆ ಪೊಲೀಸ್ ಇಲಾಖೆಗೆ 10 ದಿನಗಳ ಹಿಂದೆ ಮನವಿ ಮಾಡಲಾಗಿತ್ತು. ರಾತ್ರಿ ವೇಳೆಯಲ್ಲಿ ಡಾಂಬರು ಹಾಕುವಂತೆ ಹೇಳುತ್ತಿದ್ದಾರೆ. ರಾತ್ರಿವೇಳೆಯಲ್ಲಿ ಡಾಂಬರು ಹಾಕಿದರೆ ಕಳಪೆ ಕಾಮಗಾರಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹಗಲಿನಲ್ಲಿ ಮಾತ್ರ ಡಾಂಬರು ಹಾಕುವುದು ಸೂಕ್ತ. ಪೊಲೀಸರು ಅನುಮತಿ ನೀಡಿದರೆ ಬುಧವಾರ ಬೆಳಗ್ಗೆಯೇ ಡಾಂಬರು ಹಾಕಿಸಲು ಸಿದ್ಧ ಎಂದು ಹೇಳಿದರು.
ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್, ದೇವರಾಜ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಶಾಂತಮಲ್ಲಪ್ಪ ಅವರು ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ಡಾಂಬರು ಹಾಕಲು ಅನುಮತಿ ನೀಡುವಂತೆ ಸೆ.25 ರಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲು ಅಂಗಡಿ ಮಾಲೀಕರು ನಿರ್ಧರಿಸಿದರು.
ಅಂಗಡಿ ಮಾಲೀಕರಾದ ವೈ.ಎಸ್. ನಾಗೇಶ್‌ಪ್ರಸಾದ್, ಲೋಕೇಶ್, ಚಂದ್ರಶೇಖರ್, ಎಸ್. ಶಿವಕುಮಾರ್, ಮಧು, ರಮೇಶ್, ಯೂಸುಫ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

