ಪೌರ ಕಾರ್ಮಿಕರ ಮಕ್ಕಳೂ ಉನ್ನತ ಹುದ್ದೆ ಅಲಂಕರಿಸಲಿ
ಕ.ಪ್ರ. ವಾರ್ತೆ ಮೈಸೂರು ಸೆ.25
ಪೌರ ಕಾರ್ಮಿಕರ ಮಕ್ಕಳು ಪೋಷಕರಂತಾಗದೆ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಮಾಜಿ ಮೇಯರ್ ನಾರಾಯಣ ಆಶಿಸಿದರು.
ಮೈಸೂರು ಮಹಾನಗರ ಪಾಲಿಕೆಯಿಂದ ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ವೃತ್ತಿ ಇವರ ತಲೆಮಾರಿಗೆ ಅಂತ್ಯವಾಗಬೇಕು. ಈ ಕೆಲಸ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬಾರದು. ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಬೆಳವಣಿಗೆಗೆ ಶ್ರಮಿಸುವಂತೆ ತಿಳಿಸಿದರು.
ದುಃಖ-ದುಮ್ಮಾನ ಕೇಳುವವರಿಲ್ಲ: ಸದಾ ನಗರದ ಸ್ವಚ್ಛತೆಯಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರ ದುಃಖ-ದುಮ್ಮಾನ ಕೇಳುವವರೆ ಇಲ್ಲದಂತಾಗಿದೆ.
ವರ್ಷಕ್ಕೊಮ್ಮೆ ನಡೆಯುವ ಪೌರ ಕಾರ್ಮಿಕರ ದಿನಾಚರಣೆ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ನಂತರದ ದಿನಗಳಲ್ಲಿ ಮರೆತೆ ಹೋಗುತ್ತಾರೆ. ಸ್ವಚ್ಛತೆ ಮಾಡುವಾಗ ಆಗುವ ಅನಾಹುತಗಳಿಗೆ ಪೌರ ಕಾರ್ಮಿಕರು ಸಿಕ್ಕಿ ನೋವು ನುಂಗಿಕೊಂಡು ಕೆಲಸ ಮಾಡುತ್ತಾರೆ. ಅವರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕಾರ್ಡ್ ವಿತರಿಸುವಂತೆ ನಾರಾಯಣ್ ಸರ್ಕಾರವನ್ನು ಆಗ್ರಹಿಸಿದರು.
ಪರಿಶ್ರಮದಿಂದ ಮೈಸೂರಿಗೆ ಹೆಸರು: ಮೇಯರ್ ಎನ್.ಎಂ. ರಾಜೇಶ್ವರಿ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು ದೇಶದಲ್ಲೇ ಎರಡನೇ ಸ್ವಚ್ಛ ನಗರ ಎಂಬ ಹೆಸರು ಪಡೆಯಲು ಪೌರ ಕಾರ್ಮಿಕರೇ ಕಾರಣ. ಇವರ ಪರಿಶ್ರಮದಿಂದ ಮೈಸೂರಿಗೆ ರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿದೆ ಎಂದು ಅಭಿನಂದಿಸಿದರು.
ಇದೇ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೌರ ಕಾರ್ಮಿಕರನ್ನು ಪಾಲಿಕೆಯಿಂದ ಸನ್ಮಾನಿಸಲಾಯಿತು.
ಉಪ ಮೇಯರ್ ಶೈಲೇಂದ್ರ, ಮಾಜಿ ಮೇಯರ್ ಪುರುಷೋತ್ತಮ್, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎನ್. ಮಾರ, ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಎನ್.ಆರ್. ರಮೇಶ್, ಶ್ರೀನಿವಾಸ, ಮಂಚಯ್ಯ, ಹಾಗೂ ಪಾಲಿಕೆ ಸದಸ್ಯರು ಇದ್ದರು.
ನಾಳೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ
ಮೈಸೂರು: ಬೋಗಾದಿಯ ಎಂಯುಎಸ್ಎಸ್ನ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕೆಲಸ ನಿಮಿತ್ತ ಈ ಕೆಳಕಂಡ ಪ್ರದೇಶಗಳಲ್ಲಿ ಸೆ. 27ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು. ಬೆಮೆಲ್ ಬಡಾವಣೆ, ಠಾಕೂರ್ ಬಡಾವಣೆ, ಬೋಗಾದಿ ಗ್ರಾಮ ಮತ್ತು ಬಡಾವಣೆ, ರಾಮನಹುಂಡಿ, ಕೆ. ಸಾಲುಂಡಿ, ಕೇರ್ಗಳ್ಳಿ, ರೂಪಾನಗರ, ದೀಪಾನಗರ, ವಿಜಯನಗರ 1 ರಿಂದ 3ನೇ ಹಂತದವರೆಗೆ, ಹಿನಕಲ್, ಹಿನಲಕ್ ರಿಂಗ್ ರೋಡ್, ಗಂಗೋತ್ರಿ, ಜೆ.ಸಿ. ಕಾಲೇಜ್, ಯೂನಿವರ್ಸಿಟಿ, ನೀಲಗಿರಿ, ವಿಜಯಶ್ರೀಪುರ, ಸಿಐಐಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

