ಅಂತರ್ ಕಾಲೇಜು ಅಥ್ಲೆಟಿಕ್: ಮೇಘನಾ ನೂತನ ದಾಖಲೆ
ಕ.ಪ್ರ.ವಾರ್ತೆ ಮೈಸೂರು ಸೆ. 26
ಓವೆಲ್ ಮೈದಾನದಲ್ಲಿ ಗುರುವಾರ ಆರಂಭವಾದ ಮೈಸೂರು ವಿವಿ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿನಿ ಮೇಘನಾ 800 ಮೀ. ಓಟದಲ್ಲಿ ದಾಖಲೆ ನಿರ್ಮಿಸಿದರು.
800 ಮೀ. ಅನ್ನು 2.18 ನಿಮಿಷದಲ್ಲಿ ಕ್ರಮಿಸುವ ಮೂಲಕ ಅವರು ಈ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 2.21 ನಿಮಿಷಕ್ಕೆ ಈ ಅಂತರ ಕ್ರಮಿಸಿದ್ದರು.
ಕ್ರೀಡಾಕೂಟ ಉದ್ಘಾಟಿಸಿದ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ದೈಹಿಕ ಶಿಕ್ಷಣ ವಿಭಾಗವು ಮೈಸೂರು ವಿವಿ ಪ್ರಮುಖ ಅಂಗವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಇತರೆ ದೇಶಗಳಲ್ಲೂ ದೈಹಿಕ ಶಿಕ್ಷಣ ವಿಭಾಗ ಉತ್ತಮ ಸಾಧನೆ ಮಾಡುತ್ತಿದೆ. ಎಲ್ಲಾ ಕ್ರೀಡಾ ವಿಜ್ಞಾನಿಗಳು ಮುಖ್ಯವಾಹಿನಿಗೆ ಬಂದಾಗ ದೇಶದ ಪ್ರಗತಿ ಸಾಧ್ಯ. ಈ ಸಾಧನೆಗೆ ಪ್ರತಿಯೊಬ್ಬರಲ್ಲಿಯೂ ಕ್ರೀಡಾ ಮನೋಭಾವ ಮುಖ್ಯ ಎಂದರು.
ನಮ್ಮ ವಿವಿಯ ಕ್ರೀಡಾ ಸಾಧನೆಯನ್ನು ಇತರೆ ದೇಶದ ವಿವಿಗಳ ಕ್ರೀಡಾಪಟುಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಈ 85ನೇ ಅಥ್ಲೆಟಿಕ್ಸ್ ಕೂಟದ ಪಥ ಸಂಚಲನೆಯಲ್ಲಿ ಸುಮಾರು 100 ಕಾಲೇಜುಗಳ ವಿವಿಧ ತಂಡಗಳು ಭಾಗವಹಿಸಿದ್ದವು. ಕ್ರೀಡಾಪಟು ರೀನಾ ಜಾರ್ಜ್ ಎಲ್ಲಾ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ಕೃಷ್ಣ ಸ್ವಾಗತಿಸಿದರು. ಉಪ ನಿರ್ದೇಶಕ ಡಾ.ಪಿ. ಕೃಷ್ಣಯ್ಯ ವಂದಿಸಿದರು. ಈಜು ತರಬೇತುದಾರ ಎಂ.ಪಿ. ನಾಭಿರಾಜ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಹೃದ್ರೋಗ ದಿನ: ನಾಳೆ ವಾಕ್ಥಾನ್
ಕ.ಪ್ರ.ವಾರ್ತೆ ಮೈಸೂರು ಸೆ. 26
ವಿಶ್ವ ಹೃದ್ರೋಗ ದಿನದ ಅಂಗವಾಗಿ ಮೈಸೂರು ನಾರಾಯಣ ಹೃದಯಾಲಯವು ಸೆ.28 ರಂದು ಜನಜಾಗೃತಿಗಾಗಿ ನಡುಗೆ ಜಾಥಾ ಹಮ್ಮಿಕೊಂಡಿದೆ.
ಹೃದಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಾನಸಗಂಗೋತ್ರಿಯ ಬಯಲು ರಂಗಮಂದಿರದಿಂದ ವಾಕ್ಥಾನ್ ಏರ್ಪಡಿಸಲಾಗಿದೆ ಎಂದು ಆಸ್ಪತ್ರೆಯ ತಜ್ಞ ಡಾ. ಎಂ.ಎನ್. ರವಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 7ಕ್ಕೆ ನಡೆಯಲಿರುವ ಈ ಕಾಯಕ್ರಮದ ಉದ್ಘಾಟನೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹಾಗೂ ಶಾಸಕ ತನ್ವೀರ್ ಸೇಠ್ ಭಾಗವಹಿಸುವರು. ಬೆಳಗ್ಗೆ 6 ರಿಂದ ಸ್ಪರ್ಧೆಗೆ ನೋಂದಣಿ ನಡೆಯಲಿದೆ ಎಂದರು.
ಪ್ರಪಂಚದಲ್ಲಿ 1.73 ಕೋಟಿ ಜನರು ಹೃದ್ರೋಗ ಕಾಯಿಲೆಗೆ ತುತ್ತಾಗಿದ್ದಾರೆ. ಏಷ್ಯಾದಲ್ಲಿಯೇ 36 ಲಕ್ಷ ಮಂದಿ ಬಳಲುತ್ತಿದ್ದಾರೆ. ಪುರುಷರಿಗೆ ಮಾತ್ರ ಹೃದಯ ರೋಗ ಬರುತ್ತದೆ ಎಂದು ಭಾವಿಸಲಾಗುತ್ತಿತ್ತು. ಆದರೆ ಇಂದು ಮಹಿಳೆಯರಲ್ಲೂ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಿವೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವುದು ಅವಶ್ಯಕ ಎಂದು ತಿಳಿಸಿದರು.
ಹೃದ್ರೋಗತಜ್ಞ ಡಾ.ಕೇಶವಮೂರ್ತಿ ಮಾತನಾಡಿ, 2001 ರಲ್ಲಿ ಭಾರತದಲ್ಲಿ 2.9 ಕೋಟಿ ಇದ್ದ ಹೃದ್ರೋಗಿಗಳ ಸಂಖ್ಯೆಯೂ 2010ಕ್ಕೆ 4.5 ಕೋಟಿ ಮುಟ್ಟಿದೆ. 2015ರ ವೇಳೆಗೆ ಅದು 6.5 ತಲುಪುವ ನೀರಿಕ್ಷೆಯಿದೆ. ಯುವಕರಲ್ಲೂ ಹೃದ್ರೋಗ ಸಮಸ್ಯೆ ಕಂಡುಬಂದಿದ್ದು, ಆಹಾರ ಪದ್ಧತಿ, ಜೀವನಶೈಲಿ ಇದಕ್ಕೆ ಕಾರಣವಾಗಿದೆ. ಬದುಕಿನ ಶೈಲಿ ಬದಲಾವಣೆಯಿಂದ ಶೇ.80 ಭಾಗ ಹೃದ್ರೋಗ ತಡೆಯಲು ಸಾಧ್ಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

