ಮೈಸೂರು

ಜಿಲ್ಲೆಯ ವಿವಿಧೆಡೆ ದಸರಾ ಕ್ರೀಡಾಕೂಟಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 26
ಗ್ರಾಮೀಣ ದಸರಾ ಮೂಲಕ ಮೈಸೂರು ದಸರಾ ಹಳ್ಳಿ ಪ್ರದೇಶಕ್ಕೆ ವಿಸ್ತರಣೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಹೇಳಿದರು. ವಿದ್ಯೋದಯ ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ಗ್ರಾಮೀಣ ದಸರಾ ಹಿನ್ನೆಲೆ ನಡೆದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಸಂಸ್ಥಾನದ ಐತಿಹಾಸಿಕ ಪರಂಪರೆ ಬಿಂಬಿಸುವ ದಸರಾ ಉತ್ಸವ ಶ್ರೀಮಂತರಿಗೆ ಎಂಬಂತಹ ಭಾವನೆ ಇತ್ತು. ಗ್ರಾಮೀಣ ದಸರಾ ಆರಂಭಿಸುವ ಮೂಲಕ ಹಳ್ಳಿ ಜನರಿಗೆ ದಸರಾ ನೋಡುವ ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷ ತುಂಬಲ ಅಂದಾನಿ ಮಾತನಾಡಿದರು. ಗ್ರಾಮೀಣ ದಸರಾ ಕ್ರೀಡಾಕೂಟ ಆರಂಭವಾಗುತ್ತಿದ್ದಂತೆ ಮಹಿಳೆಯರು ತುಂಬಿದ ಬಿಂದಿಗೆಯನ್ನು ಹೊತ್ತು ಓಡುವ ಸ್ಪರ್ಧೆಗೆ ಚಾಲನೆ ನೀಡಲಾಯಿತು. ರಂಗೋಲಿ ಸ್ಪರ್ಧೆ, ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ, ಕೆಸರು ಗದ್ದೆ ಓಟದಂತಹ ಸ್ಪರ್ಧೆ ನಡೆಯಿತು.
ತಾಪಂ ಉಪಾಧ್ಯಕ್ಷೆ ಸುಜಾತ ವೆಂಕಟೇಶ್, ಕಾರ್ಯನಿರ್ವಾಹಕ ಅಧಿಕಾರಿ ಜೆ. ಕೃಷ್ಣ, ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ, ಸಹಾಯಕ ಕೃಷಿ ನಿರ್ದೇಶಕ ಎನ್. ಕೃಷ್ಣಮೂರ್ತಿ, ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೈರಾಜ್, ತಾಪಂ ಸದಸ್ಯರಾದ ಬಸವರಾಜು, ನಂಜಮ್ಮ, ರೂಪಶ್ರೀ, ಶಿವಮ್ಮ ಮಹದೇವ, ಗ್ರಾಮೀಣ ದಸರಾ ಆರೋಗ್ಯ ಉಪ ಸಮಿತಿ ಅಧ್ಯಕ್ಷ ಆರ್. ಪ್ರಕಾಶ್ಕುಮಾರ್, ಕಂದಾಯಾಧಿಕಾರಿ ಆನಂದರಾವ್, ಮಲ್ಲೇಶ, ನಾಗೇಂದ್ರಪ್ಪ, ದೈಹಿಕ ಶಿಕ್ಷಕರಾದ ಪೀಟರ್ ಪ್ರೇಮ್ಣಕುಮಾರ್, ಬಿ.ಶಶಿಧರ, ಶಿವಮೂರ್ತಿ, ಕೃಷಿ ಅಧಿಕಾರಿ ಕುಮಾರಸ್ವಾಮಿ ಇದ್ದರು.    

ಕೆ.ಆರ್. ನಗರದಲ್ಲಿ ಕೆಸರು ಗದ್ದೆ ಓಟ
ಕೆ.ಆರ್. ನಗರ
: ಗ್ರಾಮೀಣ ದಸರಾ ಅಂಗವಾಗಿ ಪಟ್ಟಣದ ಬಯಲು ರಂಗಮಂದಿರ ಮತ್ತು ಹೊರವಲಯದಲ್ಲಿರುವ ಪಂಪ್ಹೌಸ್ ಬಳಿ ವಿವಿಧ ಕ್ರೀಡೆ ನಡೆಯಿತು. ತಾಲೂಕಿನ ನೂರಾರು ಮಂದಿ ಯುವಕ-ಯುವತಿಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಕೌಶಲ್ಯ ಮೆರೆದರಲ್ಲದೆ, ಬಹುಮಾನಕ್ಕಾಗಿ ಸೆಣಸಾಟ ನಡೆಸಿ ಗ್ರಾಮೀಣ ಕ್ರೀಡೆಗಳ ಸೊಬಗನ್ನು ಸವಿದರು.
ಪುರುಷರಿಗಾಗಿ ನಡೆದ ಕೆಸರು ಗದ್ದೆ ಓಟದ ಸ್ಪರ್ಧೆಯಲ್ಲಿ ಹೊಸ ಅಗ್ರಹಾರದ ಪ್ರಶಾಂತ್ (ಪ್ರಥಮ), ಕುಪ್ಪೆ ಗ್ರಾಮದ ಭರತ್ (ದ್ವಿತೀಯ), ಕೆಡಗ ಗ್ರಾಮದ ಸುರೇಂದ್ರಕುಮಾರ್ (ತೃತೀಯ) ಬಹುಮಾನ ಪಡೆದುಕೊಂಡರು. ಗುಂಡು ಎತ್ತುವ ಸ್ಪರ್ಧೆಯಲ್ಲಿ ಕೆ.ಆರ್. ನಗರದ ವೆಂಕಟೇಶ್ (ಪ್ರಥಮ), ಹೊಸಗ್ರಹಾರದ ಪ್ರಶಾಂತ್ಕುಮಾರ್ (ದ್ವಿತೀಯ), ಮಧುವನಹಳ್ಳಿಯ ಪಿ.ಮಹೇಶ್ (ತೃತೀಯ) ಬಹುಮಾನ ಗಳಿಸಿದರು. 50 ಕೆ.ಜಿ ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಕೆ.ಆರ್. ನಗರದ ವೆಂಕಟೇಶ್ (ಪ್ರಥಮ), ಹೊಸ ಅಗ್ರಹಾರದ ಪ್ರಶಾಂತ್ಕುಮಾರ್ (ದ್ವಿತೀಯ), ಕಮಚುಗಾರ ಕೊಪ್ಪಲು ಗ್ರಾಮದ ರಾಘವೇಂದ್ರ (ತೃತೀಯ) ಬಹುಮಾನ ಗೆದ್ದುಕೊಂಡರು.
ಮಹಿಳೆಯರ ಸ್ಪರ್ಧೆ: ಮಹಿಳೆಯರಿಗಾಗಿ ನಡೆದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಲ್ಲಿ ಮಿರ್ಲೆ ಗ್ರಾಮದ ನಗಿನಾಬಾನು (ಪ್ರಥಮ), ಕೆ.ಆರ್. ನಗರದ ರೂಪಾ ಸತೀಶ (ದ್ವಿತೀಯ) ಮತ್ತು ಐಶಾ (ತೃತೀಯ) ಸ್ಥಾನ ಪಡೆದರು. ರಂಗೋಲಿ ಸ್ಪರ್ಧೆಯಲ್ಲಿ ಕೆ.ಆರ್. ನಗರದ ಚೆಲುವಾಂಬ (ಪ್ರಥಮ), ಪಿ.ಬಿ. ಭಾರತಿ (ದ್ವಿತೀಯ), ಶ್ವೇತಾ (ತೃತೀಯ) ಬಹುಮಾನ ಪಡೆದುಕೊಂಡರು. ಉಳಿದಂತೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೆ.ಆರ್. ನಗರದ ರಾಧಾ ಮತ್ತವರ ತಂಡ (ಪ್ರಥಮ), ರೇಖಾ ಮತ್ತವರ ತಂಡ (ದ್ವಿತೀಯ) ಸ್ಥಾನ ಗಳಿಸಿಕೊಂಡರು. ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಬಸವರಾಜು, ಸಹಾಯಕ ಕೃಷಿ ನಿರ್ದೇಶಕ ಡಾ. ಸೋಮಶೇಖರ, ಸಿಡಿಪಿಒ ಸದಾಶಿವಪ್ಪ, ಕಂದಾಯ ಇಲಾಖೆಯ ಮಹದೇವ್ ಮತ್ತು ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಕ್ರೀಡಾಕೂಟದ ಉಸ್ತುವಾರಿ ವಹಿಸಿದ್ದರು.

ಗುಂಡು ಎತ್ತುವ, ಹಗ್ಗಜಗ್ಗಾಟ ಸ್ಪರ್ಧೆ
ಎಚ್.ಡಿ. ಕೋಟೆ:
ಗುಂಡು ಎತ್ತುವುದರ ಮೂಲಕ ತಾಲೂಕಿನಲ್ಲಿ ಗ್ರಾಮೀಣ ದಸರಾಗೆ ತಾಲೂಕು ತಹಸೀಲ್ದಾರ್ ಕೆ. ಕೃಷ್ಣ ಚಾಲನೆ ನೀಡಿದರು.
ತಾಲೂಕು ಕ್ರೀಡಾಂಗಣದಲ್ಲಿ ದಸರಾ ಗ್ರಾಮೀಣ ಸಮಿತಿ ಆಯೋಜಿಸಿದ್ದ ಗುಂಡು ಎತ್ತುವ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗೆ ಗುರುವಾರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಯುವ ಉತ್ಸಾಹಿಗಳೂ ಸೇರಿದಂತೆ ಮಹಿಳೆಯರು, ಪುರುಷರು, ಸಂಘ ಸಂಸ್ಥೆಗಳ ಸದಸ್ಯರು ತಂಡೋಪ ತಂಡಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕೆಸರು ಗದ್ದೆ ಓಟವನ್ನು ಮೇಟಿಕುಪ್ಪೆ ರಸ್ತೆಯಲ್ಲಿರುವ ಬಸ್ ಡಿಪೋ ಪಕ್ಕದಲ್ಲಿ ಗದ್ದೆಯಲ್ಲಿ ಏರ್ಪಡಿಸಲಾಗಿತ್ತು. ರಂಗೋಲೆ ಸ್ಪರ್ಧೆಯನ್ನು ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ ಗುರುಭವನದಲ್ಲಿ ಏರ್ಪಡಿಸಲಾಗಿತ್ತು.
ಪಪಂ ಸದಸ್ಯರಾದ ಅನಿಲ್, ಪುಟ್ಟಬಸವ, ನರಸಿಂಹಮೂರ್ತಿ, ರಾಜಿ, ಕನ್ನಡ ಪ್ರಮೋದ್, ಅಧಿಕಾರಿಗಳಾದ ಕರೀಮುಲ್ಲ, ಜಯರಾಮ್, ರಾಮಕೃಷ್ಣಯ್ಯ, ವಿಜಯ್ಕುಮಾರ್, ಮಂಜುನಾಥ್, ಗಂಗಾಧರ್, ಶಿವಣ್ಣ, ಪೇದೆ ಅಶೋಕ್, ಮಂಜುಕೋಟೆ ಇದ್ದರು. ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದ್ದಾರೆ.
ಪುರುಷರ ಕ್ರೀಡೆಗಳು: ಕೆಸರು ಗದ್ದೆ ಓಟ- ಮಹದೇವನಾಯಕ, ಶ್ರೀನಿವಾಸನಾಯಕ, ಕಾಳಹುಚ್ಚೇಗೌಡ. ಗುಂಡು ಎತ್ತುವ ಸ್ಪರ್ಧೆ ಸದಾನಂದಕುಮಾರ್, ಲೋಕೇಶ್, ಶಿವಮಲ್ಲು ಹಾಗೂ ಮಂಜುನಾಥ್. ಗೋಣೀಚೀಲದ ಓಟ ಚಿಕ್ಕನಾಯಕ, ಅಶ್ಚತ್ಕುಮಾರ್, ಸಣ್ಣಸ್ವಾಮಿ. ಗೊಬ್ಬರದ ಮೂಟೆ ಒತ್ತು ಓಡುವ ಸ್ಪರ್ಧೆ 100 ಮೀಟರ್ ಸದಾನಂದಕುಮಾರ್, ಕಾಳಹುಚ್ಚೇಗೌಡ, ಶಿವಮಲ್ಲು. ಹಗ್ಗ ಜಗ್ಗಾಟ- ಎಚ್.ಡಿ. ಕೋಟೆ ಪಟ್ಟಣದ ವಾಲ್ಮೀಕಿ ತಂಡ, ಅಂತರಸಂತೆ ತಂಡ.
ಮಹಿಳೆಯರ ಕ್ರೀಡೆಗಳು: ಬಿಂದಿಗೆಯಲ್ಲಿ ನೀರು ತುಂಬಿ 100 ಮೀಟರ್ ಓಡುವುದು- 18 ರಿಂದ 30 ವರ್ಷ- ಮಮತಾ, ಶೋಭಾ, ಲಕ್ಷ್ಮೀ. 30 ವರ್ಷ ಮೇಲ್ಪಟ್ಟ ವರ್ಷ- ಚಲುವಮ್ಮ, ಪುಟ್ಟಮ್ಮಣಿ, ವೀಣಾ. ಚಮಚದಲ್ಲಿ ನಿಂಬೇಹಣ್ಣು ಇಟ್ಟು ಓಡುವುದು 18 ರಿಂದ 30 ವರ್ಷ- ಬಸವನಗಿರಿ ಹಾಡಿಯ ಜಯಮ್ಮ, ಹೊಸಹಳ್ಳಿ ಗೀತಾ, ಬೊಪ್ಪನಹಳ್ಳಿ ಶೋಭಾ. 30 ವರ್ಷ ಮೇಲ್ಪಟ್ಟವರು- ಮಂಗಳಗೌರಿ, ಕಾಳಿದಾಸ ರಸ್ತೆಯ ಲೀಲಾವತಿ, ಬೀಚನಹಳ್ಳಿ ನಾಗರತ್ನ.
ರಾಗಿಯನ್ನು ಬುಟ್ಟಿಯಲ್ಲಿ ತುಂಬಿ 100 ಮೀ. ಓಡುವುದು- 18 ರಿಂದ 30ವರ್ಷ- ಮಮತಾ, ಹೀರೇಹಳ್ಳಿ ಶೋಭಾ, ರತ್ನಮ್ಮ (ತೃತೀಯ). 30 ವರ್ಷ ಮೇಲ್ಪಟ್ಟವರು- ಚೆಲುವಮ್ಮ, ಹೊಸಹಳ್ಳಿ ಪ್ರೇಮಕುಮಾರಿ, ಮೀನಾ ಸ್ಥಾನ ಪಡೆದಿದ್ದಾರೆ. ರಂಗೋಲೆ ಸ್ಪರ್ಧೆ- ಎ.ಆರ್. ಪಾರ್ವತಿ, ಚಂದ್ರಿಕಾ, ನಂಜನಾಯಕನಹಳ್ಳಿ ಹಾಡಿಯ ಗಿರಿಜನ ಮಹಿಳೆ ಸುನೀತಾ.

ನಾಳೆ ಕೆ.ಆರ್. ನಗರದಲ್ಲಿ ಗ್ರಾಮೀಣ ದಸರಾ
ಕೆ.ಆರ್. ನಗರ:
ಪಟ್ಟಣದಲ್ಲಿ ಸೆ.28 ರಂದು ಗ್ರಾಮೀಣ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಗ್ಗೆ 11ಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಸ್ತಬ್ದ ಚಿತ್ರ, ಜಾನಪದ ಕಲಾತಂಡಗಳ ಮೆರವಣಿಗೆ ನಡೆಯಲಿದೆ. ನಂತರ ಬಯಲು ರಂಗ ಮಂದಿರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ. ಮಹೇಶ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ರಮ್ಯಾ, ಗ್ರಾಮೀಣ ದಸರಾ ಉಪ ಸಮಿತಿಯ ಅಧ್ಯಕ್ಷ ಎಂ. ಮಹದೇವ್, ವಿಧಾನ ಪರಿಷತ್ ಸದಸ್ಯರಾದ ಸಿ.ಎಚ್. ವಿಜಯಶಂಕರ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಗೋ. ಮಧುಸೂದನ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.