ಮೈಸೂರು

'ಪ್ರವಾಸೋದ್ಯಮ ಆದಾಯದ ಮೂಲ'

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ಆದಾಯ ಗಳಿಕೆಯ ಪ್ರಮುಖ ಮೂಲ ಪ್ರವಾಸೋದ್ಯಮ ಎಂದು ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರೊ.ಕೆ.ಎಸ್. ನಾಗಪತಿ ಹೇಳಿದರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗವು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಟರಾಜ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಪ್ರವಾಸೋದ್ಯಮದ ಪ್ರಾಮುಖ್ಯತೆ ಅರಿತರೆ ಮುಂದುವರಿದ ದೇಶಗಳಂತೆ ಭಾರತವು ಸಹ ಹೆಚ್ಚು ಆದಾಯ ಗಳಿಸಬಹುದು. ಈ ಕ್ಷೇತ್ರ ಆದಾಯ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಅಲ್ಲದೆ ಸಾಕಷ್ಟು ನಿರುದ್ಯೋಗಿಗಳಿಗೆ ಬೃಹತ್ ಉದ್ಯೋಗ ಅವಕಾಶ ಕಲ್ಪಿಸಲಿದೆ ಎಂದರು.
ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ವಿಶೇಷವಾಗಿ ಮೈಸೂರಿನಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳಿವೆ. ಇದನ್ನು ಸಂರಕ್ಷಿಸಿದರೆ ಮಾತ್ರ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಲು ಸಾಧ್ಯ. ಇದರ ಬಗ್ಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಚಂದ್ರಶೇಖರಯ್ಯ ಮುಖ್ಯ ಅತಿಥಿಯಾಗಿದ್ದರು. ಪ್ರಾಂಸುಪಾಲೆ ಎಂ. ಶಾರದಾ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥೆ ತ್ರಿವೇಣಿ ಇದ್ದರು. ವಿದ್ಯಾರ್ಥಿನಿಯರಾದ ಸಿ.ಎಂ. ಅಶ್ವಿನಿ ಸ್ವಾಗತಿಸಿದರು. ಚಂದನ ವಂದಿಸಿದರು.

ಪೌರ ಕಾರ್ಮಿಕ ಜನಾಂಗದ ಪ್ರತಿಭಾವಂತರಿಗೆ ಸನ್ಮಾನ
ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ಎಂ.ಎ. ಅರ್ಥಶಾಸ್ತ್ರ ವಿಷಯದಲ್ಲಿ ಚಿನ್ನದ ಪದಕ ಪಡೆದ ಪೌರಕಾರ್ಮಿಕ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿನಿ ಜ್ಯೋತಿ ರಂಗಸ್ವಾಮಿ ಮತ್ತು ಬಿ.ಇ ವ್ಯಾಸಂಗ ಮಾಡಿರುವ ವಿ.ಕಾರ್ತಿಕ ಅವರನ್ನು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರ ಜನ್ಮದಿನದ ಅಂಗವಾಗಿ ಜೆಡಿಎಸ್ ಪ.ಜಾತಿ, ಪಂಗಡ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಪೌರಕಾರ್ಮಿಕ ಜನಾಂಗವು ಎಲ್ಲ ರೀತಿಯಲ್ಲೂ ಹಿಂದುಳಿದಿದ್ದು, ಇವರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಈ ವೃತ್ತಿಯನ್ನು ಅನ್ಯರಂತೆ ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮ ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಬೇಕು ಎಂದು ಹೇಳಿದರು.ಉಪಮೇಯರ್ ವಿ. ಶೈಲೇಂದ್ರ, ನಗರಪಾಲಿಕೆ ಸದಸ್ಯ ಟಿ.ರಾಮು, ಜೆಡಿಎಸ್ ಮುಖಂಡ ಪ್ರಭು, ಘಟಕದ ಕಾರ್ಯಾಧ್ಯಕ್ಷ ಎಸ್.ನಾಗರಾಜು, ರಾಜೀವ್, ಅರುಣ್‌ಕುಮಾರ್, ಜ್ಯೋತಿನಗರ, ಪಳನಿ, ಶಿವಕುಮಾರ್, ಧರ್ಮಸಿಂಗ್ ಕಾಲೋನಿಯ ಹರೀಶ್, ಅರಸು ಕಾಲೋನಿಯ ಯೋಗಿ, ಶ್ರೀನಿವಾಸ್, ಲೋಕೇಶ್ ಭಾಗವಹಿಸಿದ್ದರು.

ಬ್ಯಾಡರಹಳ್ಳಿ ಸಹಕಾರ ಸಂಘಕ್ಕೆ ಆಯ್ಕೆ
ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಸೆ. 27
ತಾಲೂಕಿನ ಬ್ಯಾಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎಂ. ನಾರಾಯಣಸ್ವಾಮಿ ಅವಿರೋಧ ಆಯ್ಕೆಯಾದರು. ಸಂಘದ ಆಡಳಿತ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಎಸ್.ಎಂ. ನಾರಾಯಣಸ್ವಾಮಿ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ, ಅವಿರೋಧ ಆಯ್ಕೆಯಾದರು. ನಿರ್ದೇಶಕರಾದ ಬಲರಾಮೇಗೌಡ, ಜಯರಾಮ್, ಕೃಷ್ಣೇಗೌಡ, ಜಗದೀಶ್, ಸಾವಿತ್ರಮ್ಮ ಇದ್ದರು. ಕಳೆದ 15 ವರ್ಷಗಳಿಂದ ಸತತವಾಗಿ 5ನೇ ಬಾರಿಗೆ ಅವಿರೋಧ ಆಯ್ಕೆಯಾದ ಅವರನ್ನು ತಾಪಂ ಮಾಜಿ ಅಧ್ಯಕ್ಷ ಬಿ.ಸಿ. ಮಹದೇವ್, ಚಿಕ್ಕಬೊಮ್ಮೇಗೌಡ, ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ಅಭಿನಂದಿಸಿದರು.

ಗುಂಡು ಎಸೆತ: ರಿತೀಶ್ ರಾಜ್ಯಮಟ್ಟಕ್ಕೆ ಆಯ್ಕೆ
ಸುತ್ತೂರು: ಮೈಸೂರಿನ ಓವಲ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಜೆಎಸ್‌ಎಸ್ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ರಿತೀಶ ಲಿಂಗಡೋ ಗುಂಡು ಎಸೆತ ಸ್ಪರ್ಧೆಯಲ್ಲಿ 7.07 ಮೀ. ಎಸೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಈಕೆಯ ಸಾಧನೆಯನ್ನು ಸುತ್ತೂರು ಸಂಸ್ಥೆಗಳ ಆಡಳಿತಾಧಿಕಾರಿಗಳು, ಸಂಯೋಜನಾಧಿಕಾರಿಗಳು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

ಭಗತ್‌ಸಿಂಗ್ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ
ಮೈಸೂರು: ಕ್ರಾಂತಿವೀರ ಭಗತ್‌ಸಿಂಗ್ ಅವರ 106ನೇ ಜಯಂತಿ ಅಂಗವಾಗಿ ಭಗತ್‌ಸಿಂಗ್ ಯುವ ಸೇನಾ ಸಮಿತಿಯು ಆರೋಗ್ಯ ಭಾರತಿ ಟ್ರಸ್ಟ್ ಸಹಯೋಗದಲ್ಲಿ ನಗರದ ಸುಬ್ಬರಾಯನಕೆರೆ ಮೈದಾನದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಶುಕ್ರವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಏರ್ಪಡಿಸಿತ್ತು.
ಮುಖ್ಯ ಅತಿಥಿಯಾಗಿದ್ದ ಮಲಬಾರ್ ಗೋಲ್ಡ್‌ನ ಶರಸುದ್ದೀನ್ ಮಾತನಾಡಿ, ಮುಂದಿನ ಬಾರಿಯಿಂದ ಆರೋಗ್ಯ ಶಿಬಿರ ಏರ್ಪಡಿಸಿದಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಔಷಧ ಪೂರೈಸುವುದಾಗಿ ಭರವಸೆ ನೀಡಿದರು.
ಆರೋಗ್ಯ ಭಾರತಿ ಟ್ರಸ್ಟ್‌ನ ಡಾ. ಚಂದ್ರಶೇಖರ್, ಸಮಿತಿ ಅಧ್ಯಕ್ಷ ಎನ್. ಲಕ್ಷ್ಮೀಕಾಂತ, ಪ್ರಧಾನ ಕಾರ್ಯದರ್ಶಿ ಜೋಗಿ ಮಂಜು ಮೊದಲಾದವರು ಇದ್ದರು. ಕೆ.ಆರ್. ವಿಭಾಗದ ಪೊಲೀಸರು, ಹಿರಿಯ ನಾಗರಿಕರು, ಜನಸಾಮಾನ್ಯರು ಶಿಬಿರದ ಪ್ರಯೋಜನ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.