ಮೈಸೂರು

ಆದಿವಾಸಿಗಳ ಆರ್ಥಿಕಾಭಿವೃದ್ಧಿಗೆ ಪ್ರಯೋಗ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 28
ಮೈಸೂರಿನ ಪ್ರತಿಭೆ ಸಂಸ್ಥೆಯು ಆದಿವಾಸಿ ಮತ್ತು ದಲಿತ ಕುಟುಂಬಗಳ ಆರ್ಥಿಕಾಭಿವೃದ್ಧಿಗಾಗಿ ಹೊಸ ಪ್ರಯೋಗ ಜಾರಿಗೆ ತಂದಿದೆ.
ಎಚ್.ಡಿ. ಕೋಟೆ ತಾಲೂಕಿನ ಹಾಗೂ ನಂಜನಗೂಡು ತಾಲೂಕಿನ 15 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಮತ್ತು ದಲಿತ ಕುಟುಂಬಗಳ ಸಂಘಟನೆಯ ಮೂಲಕ ಅವರ ಸುಸ್ಥಿರ ಅಭಿವೃದ್ಧಿಗಾಗಿ ಒಂದು ವಿಶೇಷ ಪ್ರಯೋಗ ಮಾಡುತ್ತಿದೆ. 2009ರಲ್ಲಿ 30 ಕುಟುಂಬಗಳು, 2010ರಲ್ಲಿ 57 ಕುಟುಂಬಗಳು, 2011ರಲ್ಲಿ 60 ಕುಟುಂಬಗಳು ಹಾಗೂ 2012ರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಅವರ ಕೃಷಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸಿ ಹೆಚ್ಚು ಇಳುವರಿ ಪಡೆಯಲು ಪ್ರೋತ್ಸಾಹಿಸುವುದೇ ಹೊಸ ಪ್ರಯೋಗವಾಗಿದೆ.
2013ರ ಸಾಲಿಗೆ 100 ಭೂ ರಹಿತ ಕುಟುಂಬಗಳನ್ನು ಆಯ್ಕೆ ಮಾಡಿ ಅವರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಪ್ರೋತ್ಸಾಹಿಸುವುದು. ಈ ವರ್ಷ 4.50 ಕೋಟಿ ವೆಚ್ಚದಲ್ಲಿ ಪ್ರತಿ ಕುಟುಂಬದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ತರಕಾರಿಗಳ ಬೆಳೆ, ಪ್ರತಿ ಕುಟುಂಬಕ್ಕೆ ಕೋಳಿಗಳನ್ನು ವಿತರಸಲಾಗುತ್ತದೆ. ಆ ಮೂಲಕ ಅಭಿವೃದ್ಧಿಪಡಿಸಿ ಆರ್ಥಿಕ ಚೇತನಕ್ಕೆ ಒತ್ತು ನೀಡುವುದು. ಎರೆಗೊಬ್ಬರ ತಯಾರಿಕಾ ಘಟಕಗಳನ್ನು ನೀಡಿ ಎರೆಗೊಬ್ಬರ ತಯಾರಿಸಿ ಮಾರಾಟಕ್ಕೆ ಉತ್ತೇಜನ ನೀಡುವುದು. ಪ್ರತಿ ಕುಟುಂಬಕ್ಕೆ ಒಂದು ಆಡು ಮರಿ ನೀಡಿ ಅವರ ಕುಟುಂಬದ ಆರ್ಥಿಕ ಭದ್ರತೆ ನಿರ್ಮಾಣ ಮಾಡುವುದಾಗಿದೆ ಎಂದು ಜಿ. ಪ್ರಸನ್ನಮೂರ್ತಿ ತಿಳಿಸಿದ್ದಾರೆ.
ಯೋಜನೆಯ ಫಲಶೃತಿಯಾಗಿ ಈ ವರ್ಷ ರಾಗಿ, ಹತ್ತಿ ಮತ್ತು ತರಕಾರಿ ಬೆಳೆಗಳಲ್ಲಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, 277 ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಯೋಜನಾ ವ್ಯಾಪ್ತಿಯ 277 ಕುಟುಂಬಗಳಲ್ಲಿ ಪೌಷ್ಟಿಕ ಆಹಾರದ ಸ್ವಾವಲಂಬನೆಯಾಗಿದೆ. ಸರ್ಕಾರದ ವಿವಿಧ ಯೋಜನೆಗಳನ್ನು ಈ ಕಾರ್ಯಕ್ರಮದ ಜತೆಜತೆಯಲ್ಲೆ ಕುಟುಂಬಗಳ ಅಭಿವೃದ್ಧಿಗೆ ಜೋಡಿಸಲಾಗುತ್ತದೆ. ಚಿಲಕಹಳ್ಳಿಯ 24 ಕುಟುಂಬಗಳು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿವೆ ಎಂದಿದ್ದಾರೆ.

ಗೊಲ್ಲರಹೊಸಳ್ಳಿ ಅಂಗನವಾಡಿ ಕೇಂದ್ರ ಉದ್ಘಾಟನೆ
ಬೈಲುಕುಪ್ಪೆ: ಗರ್ಭಿಣಿ ಹಾಗೂ ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಕೊಡುವ ಪೌಷ್ಟಿಕ ಆಹಾರವನ್ನು ಶಿಕ್ಷಕಿಯರು ಸಮಯಕ್ಕೆ ಸರಿಯಾಗಿ ಕೊಟ್ಟು ಅವರ ದೈಹಿಕ ಬೆಳವಣಿಗೆ ಹಾಗೂ ಆರೋಗ್ಯ ಕಾಪಾಡಲು ಸಹಕಾರಿಯಾಗಬೇಕು ಎಂದು ಗ್ರಾಪಂ ಅಧ್ಯಕ್ಷ ರವಿಮಾನು ಹೇಳಿದರು.
ಗ್ರಾಪಂ ವ್ಯಾಪ್ತಿಯ ಗೊಲ್ಲರಹೊಸಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ತಾಪಂ ಅನುದಾನದಲ್ಲಿ 4.5 ಲಕ್ಷ ಬಿಡುಗಡೆ ಮಾಡಿಸಿ, ತಾಪಂ ಸದಸ್ಯ ನವಿಲೂರು ಮಹದೇವ ಈ ಕೇಂದ್ರವನ್ನು ಈ ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗಬೇಕೆಂದು ತಿಳಿಸಿದರು. ಗ್ರಾಪಂ ಸದಸ್ಯರಾದ ನಿಶಾರ, ಖತೀಜ, ಅಭಿವೃದ್ಧಿ ಅಧಿಕಾರಿ ಶಿವಯೋಗ, ವಾಸು, ರಘು, ವಿದ್ಯಾರ್ಥಿನಿಲಯದ ಮೇಲ್ವಿಚಾರಕ ಯಶೋಧ, ಅಂಗನವಾಡಿ ಶಿಕ್ಷಕಿ ನೇತ್ರಾವತಿ, ನವೀದಾಬಿ, ಮೀನಾಕ್ಷಿ, ಸುಧಾ, ಸರಸು, ಸುಕನ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.