ಜಿಲ್ಲಾ ಪೊಲೀಸರ ಕಾರ್ಯವೈಖರಿ ಅಷ್ಟಕ್ಕಷ್ಟೆ
ಕ.ಪ್ರ.ವಾರ್ತೆ ಮೈಸೂರು ಸೆ. 28
ಕಳವು ಹಾಗೂ ಇತರೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮೈಸೂರು ಜಿಲ್ಲಾ ಪೊಲೀಸರು ಹಿಂದೆ ಬಿದ್ದಿದ್ದಾರೆ. ಅಲ್ಲದೆ, ಕಳವು ಮಾಲು ಪತ್ತೆ ಹಚ್ಚುವ ಪ್ರಮಾಣ ಸಹ ಕಡಿಮೆ ಆಗಿದೆ.
2013ನೇ ಸಾಲಿನ ಆಗಸ್ಟ್ ಅಂತ್ಯದವರೆಗೆ 393 ಪ್ರಕರಣಗಳ ವರದಿಯಾಗಿದ್ದು, ಇದರಲ್ಲಿ 92 ಪ್ರಕರಣಗಳು ಮಾತ್ರ ಪತ್ತೆಯಾಗಿದೆ. 2.82 ಕೋಟಿ ಮಾಲು ಕಳವಾಗಿದ್ದು, ಇದರಲ್ಲಿ 98.32 ಲಕ್ಷ ಮಾಲನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಭಿನವ್ ಖರೆ ತಿಳಿಸಿದರು.
ಮೈಸೂರಿನ ಜಲಪುರಿಯಲ್ಲಿರುವ ಜೂನಿಯರ್ ಪೊಲೀಸ್ ಅಧಿಕಾರಿಗಳ ಮೆಸ್ನಲ್ಲಿ ಶನಿವಾರ ನಡೆದ ಪತ್ತೆಯಾದ ಮಾಲು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ತೆಯಾದ 98.32 ಲಕ್ಷ ಪೈಕಿ 17.87 ಲಕ್ಷ ಮೌಲ್ಯದ ವಸ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರಿಗೆ ಹಿಂದಿರುಗಿಸಲಾಗುತ್ತಿದೆ. 2011ರಲ್ಲಿ 618 ಪ್ರಕರಣಗಳು ದಾಖಲಾಗಿದ್ದು, 129 ಪ್ರಕರಣ ಪತ್ತೆ ಮಾಡಲಾಗಿದೆ. 2012ರಲ್ಲಿ 584 ಪ್ರಕರಣ ದಾಖಲಾಗಿದ್ದು, 128 ಪ್ರಕರಣ ಪತ್ತೆ ಹಚ್ಚಲಾಗಿದೆ ಎಂದು ಅವರು ಹೇಳಿದರು.
ಅಕ್ರಮ ಮರಳು- 22.95 ಲಕ್ಷ ದಂಡ: ಈ ಸಾಲಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಸಂಬಂಧಿಸಿದಂತೆ 4 ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 325 ಪ್ರಕರಣಗಳನ್ನು ಕಳುಹಿಸಲಾಗಿದೆ.
ಅಕ್ರಮ ಮರಳು ಸಾಗಾಣಿಕೆಯಿಂದ 22.95 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಪ್ರತಿದಿನ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವ7-8 ಲಾರಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಮರಳುಗಾರಿಕೆಯಲ್ಲಿ ಯಾರೇ ಭಾಗವಹಿಸಿದ್ದರು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಅಭಿನವ್ ಖರೆ ಹೇಳಿದರು.
ಮೈಸೂರು ದಕ್ಷಿಣ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ 13-14 ಕುರಿಗಳನ್ನು, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್ ಅವರ ಮನೆಯಲ್ಲಿ ಕಳವಾದ ಚಿನ್ನಾಭರಣ ವಾಪಸ್ ನೀಡಲಾಯಿತು.
ಮಾಲೀಕರ ಪತ್ತೆ: ದಕ್ಷಿಣ ವಲಯ ಐಜಿಪಿ ಡಾ. ಕೆ. ರಾಮಚಂದ್ರರಾವ್ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಶೇ.35 ಮಾತ್ರ ಅಪರಾಧ ಪತ್ತೆಯಾಗಿದ್ದು, ಇದರ ಪ್ರಮಾಣ ಹೆಚ್ಚಾಗಬೇಕು. ಆರ್ಟಿಒದಿಂದ ವಾಹನ್ ಎಂಬ ಸಾಫ್ಟ್ವೇರ್ ಪಡೆದು ಕಳವಾದ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಲಾಗುತ್ತಿದೆ.
ಈವರೆಗೆ ದಕ್ಷಿಣ ವಲಯದಲ್ಲಿ 400 ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಲಾಗಿದೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿರುವ ಲಾರಿ ಮಾಲೀಕರನ್ನು ಸಹ ಈ ವಾಹನ್ ಸಾಫ್ಟ್ವೇರ್ ಸಹಾಯದಿಂದ ಪತ್ತೆ ಮಾಡಲಾಗಿದೆ ಎಂದು ಹೇಳಿದರು.
ಮಡಿಕೇರಿ ಪ್ರೇಮ ಪ್ರಕರಣದಲ್ಲಿ ವರನ ತಂದೆಯು ಹೃದಯಾಘಾತದಿಂದ ಸತ್ತಿದ್ದಾರೆ. ಆದರೆ, ಅವರ ಮೇಲೆ ಹಲ್ಲೆ ನಡೆದಿದ್ದರಿಂದ ಅಥವಾ ಬೇರೆ ಕಾರಣಗಳಿಂದ ಹೃದಯಾಘಾತವಾಯಿತೇ ಎಂಬುದುರ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಮೃತರ ಹೃದಯವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ಹೃದಯಾಘಾತಕ್ಕೆ ಕಾರಣ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ನಂಜನಗೂಡು ಹೆಚ್ಚುವರಿ ಎಸ್ಪಿ ಡಾ. ಪಿ. ರಾಜ, ಡಿವೈಎಸ್ಪಿಗಳಾದ ಟಿ. ಸಿದ್ದಪ್ಪ, ಮುದ್ದುಮಹದೇವಯ್ಯ, ವಿಜಯಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

