'ಕೃಷಿ ಉತ್ಪನ್ನ ಉತ್ತಮ ಬೆಲೆಗೆ ಮಾರಾಟ ಮಾಡಿ'
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 28
ರೈತರು ತಾವು ಬೆಳೆದ ಆಹಾರಧಾನ್ಯ ಹಾಗೂ ಬೆಳೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿಟ್ಟುಕೊಳ್ಳುವುದರ ಜೊತೆಗೆ ಬೇಡಿಕೆಯನ್ನಾಧರಿಸಿ ಉತ್ತಮ ಬೆಲೆಗೆ ಮಾರಾಟ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ ಹೇಳಿದರು.
ತಾಲೂಕಿನ ತಲಕಾಡು ಗ್ರಾಮದ ನಾಯಕ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಸಂಸ್ಕರಣೆ ಮಾಡಿದ ಆಹಾರ ಪದಾರ್ಥಗಳನ್ನು ಉತ್ತಮ ಧಾರಣೆಗೆ ಮಾರಾಟ ಮಾಡುವ ಬಗ್ಗೆ ರೈತರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮಾತನಾಡಿ, ಕೃಷಿಯನ್ನು ಅನಿವಾರ್ಯವಾಗಿ ಮುಂದುವರೆಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿರುತ್ತದೆ. ಉದ್ಯಮ ಕ್ಷೇತ್ರಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಶೇ. 30 ರಷ್ಟು ಉದ್ಯೋಗಾವಕಾಶಗಳು ಕೃಷಿ ಕ್ಷೇತ್ರದಲ್ಲಿದೆ. ಶೇ.70ರಷ್ಟು ಜನಜೀವನಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ರೈತರು ಜ್ಞಾನವನ್ನು ಹೆಚ್ಚಿಸಿಕೊಂಡು ಆಧುನಿಕ ಕೃಷಿ ಪದ್ಧತಿ, ತಾಂತ್ರಿಕತೆಯನ್ನು ಅಳವಡಿಕೆ ಮಾಡಿಕೊಳ್ಳಬೇಕು. ಕೃಷಿಗೆ ಪೂರಕವಾಗಿ ಹೈನುಗಾರಿಕೆ ಮಾಡಿಕೊಂಡು ನಿತ್ಯವೂ ಆದಾಯದ ಮೂಲ ಕಂಡುಕೊಳ್ಳಬೇಕು ಎಂದು ಹೇಳಿದರು.
ಸಮಗ್ರ ಕೃಷಿ ಪೋಷಕಾಂಶಗಳ ನಿರ್ವಹಣೆ ಮತ್ತು ಬತ್ತದ ಬೇಸಾಯದ ಪದ್ಧತಿ ಬಗ್ಗೆ ಸಹಾಯಕ ಕೃಷಿ ನಿರ್ದೇಶಕ ಎನ್. ಕೃಷ್ಣಮೂರ್ತಿ, ತೋಟಗಾರಿಕೆ ಮಿಶ್ರ ಬೆಳೆಗಳ ವಿಚಾರವಾಗಿ ತೋಟಗಾರಿಕಾ ಅಧಿಕಾರಿ ರೂಪೇಶ್ ನಡೆಸಿಕೊಟ್ಟರು. ಲಾಭದಾಯಕ ಹೈನುಗಾರಿಕೆ ಬಗ್ಗೆ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಚಿನ್ನಸ್ವಾಮಿ ಹಾಗೂ ವಿಸ್ತರಣಾಧಿಕಾರಿ ಡಾ. ಹರೀಶ್ ಅವರು ಗೋಷ್ಠಿ ನಡೆಸಿಕೊಟ್ಟರು.
ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಮಹಾಬಲ ಕುಲಾಲ್, ತಾಪಂ ಸದಸ್ಯ ಸುಬ್ರಹ್ಮಣ್ಯ, ತಲಕಾಡು ಗ್ರಾಪಂ ಅಧ್ಯಕ್ಷ ಚಿಕ್ಕಮಾದನಾಯಕ, ಡಿಸಿಸಿ ಕಾರ್ಯದರ್ಶಿ ಬಸವಣ್ಣ, ಉಪಧ್ಯಾಕ್ಷ ಆರ್. ಪ್ರಕಾಶ್ಕುಮಾರ್, ಸಿರಿಯಾಕ್ ಆಂಥೋನಿ, ಪ್ರಗತಿಪರ ರೈತರಾದ ಮಲ್ಲಿಕಾರ್ಜುನ, ಶಿವರುದ್ರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

