ವಿದ್ಯಾರ್ಥಿಗಳನ್ನು ರೋಬೋಟ್ ತರಹ ಬೆಳೆಸಬೇಡಿ: ರಾಜ್ಯಪಾಲ
ಮೈಸೂರು: ವಿದ್ಯಾರ್ಥಿಗಳನ್ನು ರೋಬೋಟ್ ರೀತಿ ಪಳಗಿಸುವ ಬದಲು ಮಾನವೀಯ ಮೌಲ್ಯಗಳನ್ನು ತುಂಬುವ ಮೂಲಕ ಸುಸಂಸ್ಕೃತರಾಗಿ ಬೆಳೆಸಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಸಲಹೆ ನೀಡಿದರು.
ಮೈಸೂರಿನ ವಿಜಯನಗರದಲ್ಲಿರುವ ಭಾರತೀಯ ವಿದ್ಯಾಭವನ ಆವರಣದಲ್ಲಿ ಡಾ.ಕೆ.ಎಂ. ಮುನ್ಷಿ ಅವರ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಮಾನವೀಯ ಮೌಲ್ಯಗಳಡಿಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸಬೇಕು. ಸಮಾಜಕ್ಕೆ ಮಾದರಿಯಾಗಿ ಬದುಕುವುದನ್ನು ಹೇಳಿಕೊಡಬೇಕು. ವಿದ್ಯಾರ್ಥಿಗಳನ್ನು ರೋಬೋಟ್ಗಳಂತೆ ತಯಾರು ಮಾಡಬಾರದು ಎಂದು ತಿಳಿಸಿದರು.
ನಮ್ಮ ದೇಶದ ಅಭಿವೃದ್ಧಿ ಯುವಕರ ಕೈಯಲ್ಲಿದೆ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ನಮ್ಮಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸಿರಲಿಲ್ಲ. ಬಡತನ, ಅನಕ್ಷರತೆ, ಮೂಢನಂಬಿಕೆ, ಆಹಾರ ಕೊರತೆ ಸೇರಿದಂತೆ ಹಲವಾರು ಸಮಸ್ಯೆ ಕಾಡುತ್ತಿತ್ತು. ಶಿಕ್ಷಣದ ಅಗತ್ಯ ಮನಗಂಡ ಡಾ.ಮುನ್ಷಿ ಅವರು ಭಾರತೀಯ ವಿದ್ಯಾಭವನ ಸ್ಥಾಪಿಸಿದರು. ಬಳಿಕ ದೇಶಾದ್ಯಂತ ಅದರ ಶಾಖೆಗಳು ತೆರೆದು, ಗುಣಮಟ್ಟದ ಶಿಕ್ಷಣ ನೀಡಿದರು. ರಚನಾತ್ಮಕ ಶಿಕ್ಷಣ ನೀಡುವತ್ತ ಎಲ್ಲ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು ಎಂದು ಹೇಳಿದರು.
ನಮ್ಮ ದೇಶದ ಸಂಸ್ಕೃತಿಗೆ ಎಲ್ಲ ಸಮುದಾಯದವರು ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ನಮ್ಮಲ್ಲಿ ವಿವಿಧ ಜಾತಿ, ಧರ್ಮಗಳಿವೆ. ವಿವಿಧ ಧರ್ಮಗಳಲ್ಲಿ ನಂಬಿಕೆ ಇರಿಸುವುದರ ಜೊತೆಗೆ ಪ್ರತಿಯೊಬ್ಬರು ಭಾರತದ ಮೇಲೂ ನಂಬಿಕೆ ಇರಿಸಬೇಕು. ಜಾಗತಿಕ ಸ್ಪರ್ಧೆಯಲ್ಲಿ ಭಾರತವು ಇದೆ. ದೇಶವು ಕಟ್ಟಡಗಳನ್ನು ನಿರ್ಮಿಸುವುದರಿಂದ ಮಾತ್ರ ಅಭಿವೃದ್ಧಿ ಆಗುವುದಿಲ್ಲ. ಬದಲಿಗೆ ಜನರಿಂದ ದೇಶವು ಅಭಿವೃದ್ಧಿ ಆಗುತ್ತದೆ ಎಂದರು.
ಪ್ರಫುಲ್ಲತಾ ಭಾರದ್ವಾಜ್, ಭಾರತೀಯ ವಿದ್ಯಾಭವನದ ರಾಜ್ಯಾಧ್ಯಕ್ಷ ಎನ್.ರಾಮಾನುಜ, ನಿರ್ದೇಶಕ ಎಚ್.ಎನ್. ಸುರೇಶ್, ಮೈಸೂರು ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ, ಉಪಾಧ್ಯಕ್ಷ ಕೆ.ಬಿ. ಗಣಪತಿ, ಗೌರವ ಕಾರ್ಯದರ್ಶಿ ಪಿ.ಎಸ್. ಗಣಪತಿ, ಗೌರವ ಖಜಾಂಚಿ ಡಾ.ಎ.ಟಿ. ಭಾಷ್ಯಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

