ಮೈಸೂರು

ಕ್ರೈಸ್ತರು ಯಾವ ಪಕ್ಷವನ್ನೂ ಬೆಂಬಲಿಸಲ್ಲ

Published On :

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಕ್ರೈಸ್ತ ಸಮುದಾಯ ಬೆಂಬಲಿಸುವುದಿಲ್ಲ ಎಂದು ಕ್ರೈಸ್ತರ ಪ್ರಗತಿಪರ ಸಂಸ್ಥೆಯ ಅಧ್ಯಕ್ಷ ಜೆ. ಜ್ಞಾನ ಪ್ರಕಾಶ್ ಹೇಳಿದರು.
ಮೈಸೂರು ಬೆಂಗಳೂರು ರಸ್ತೆಯಲ್ಲಿರುವ ಕೆಥೋಲಿಕ್ ಕೇಂದ್ರದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ಮುಂದಿನ ನಡೆ ಕುರಿತು ಚರ್ಚಿಸಲು ಏರ್ಪಡಿಸಿದ್ದ ಸಭೆಯ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಯಾವುದೇ ರಾಜಕೀಯ ಪಕ್ಷವು ಸಹ ಕ್ರೈಸ್ತ ಸಮುದಾಯದ ಏಳಿಗೆಗೆ ಗಮನ ಹರಿಸಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ಅಭಿವೃದ್ಧಿಯ ಮಾತನಾಡುತ್ತದೆಯೇ ಹೊರತು ಯಾವುದೇ ವಿಶೇಷ ಸವಲತ್ತು ಕಲ್ಪಿಸಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಸ್ವಲ್ಪಮಟ್ಟಿಗೆ ಈ ಸಮುದಾಯಕ್ಕೆ ಅನುಕೂಲ ಮಾಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಬೆಂಬಲಿಸುವುದಿಲ್ಲ ಎಂದರು.
ರಾಜಕೀಯ ಪಕ್ಷಗಳು ನಿರ್ಲಕ್ಷ್ಯಿಸಿದ ಕಾರಣ ಸಮುದಾಯದಲ್ಲಿ ನಾಯಕರಾಗಿ ಬೆಳೆಯಲು ಸಾಧ್ಯವಾಗಿಲ್ಲ ಹಾಗೂ ರಾಜಕೀಯ ಇಚ್ಛಾಸಕ್ತಿಯ ಕೊರತೆಯು ಕಂಡುಬಂದಿದೆ. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಚ್. ವಿಶ್ವನಾಥ್ ಅವರು ಹೇಳಿಕೆ ನೀಡಿರುವಂತೆ ಇಡೀ ಸಮುದಾಯ ಬೆಂಬಲಕ್ಕೆ ನಿಂತಿಲ್ಲ ಎಂದು ತಿಳಿಸಿದರು. ಕ್ರೈಸ್ತ ಸಮುದಾಯವು ಯಾವುದೇ ಪಕ್ಷ ಬೆಂಬಲಿಸದಿದ್ದರೂ ಮತದಾನ ಮಾಡದೇ ತಟಸ್ಥವಾಗಿ ಉಳಿಯುವುದಿಲ್ಲ. ಕಡ್ಡಾಯವಾಗಿ ತಮಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಅಭಿಯಾನ ನಡೆಸಲಿದೆ. ಏ.13 ರಂದು ಸಂಜೆ 5.30ಕ್ಕೆ ಮೈಸೂರು ನೀಲಗಿರಿ ರಸ್ತೆಯಲ್ಲಿನ ವೆಸ್ಲಿ ಚರ್ಚ್‌ನಲ್ಲಿ ಮತದಾನ ಜಾಗೃತಿ ಏರ್ಪಡಿಸಿದೆ ಎಂದರು.   ಕಾರ್ಯದರ್ಶಿ ಸ್ಟಾಲೀನ್ ಜಿಗ್ಲೇರ್ ಮತ್ತಿತರ ಪದಾಧಿಕಾರಿಗಳು ಇದ್ದರು.

ಬಿಎಸ್‌ವೈ, ಶ್ರೀರಾಮುಲು ಪ್ರಚಾರ ಇಂದು
ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಏ. 12 ರಂದು ನಗರದಲ್ಲಿ ಪ್ರವಾಸ ಮಾಡುವರು. ಏ.12ರ ಬೆಳಗ್ಗೆ 9ಕ್ಕೆ ಆಗಮಿಸುವ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರು ರಾಮಾನುಜ ರಸ್ತೆಯ ಶ್ರೀ ರಾಜೇಂದ್ರ ಕಲಾಮಂದಿರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವರು. ಸಭೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹ ಭಾಗವಹಿಸುವರು. ಇದೆ ವೇಳೆ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸುವರು ಎಂದು ನಗರ ಬಿಜೆಪಿ ವಕ್ತಾರ ಎಂ.ಎ. ಮೋಹನ್ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ದಸಂಸ ಬೆಂಬಲ: ಲಕ್ಷ್ಮೀನಾರಾಯಣ ನಾಗವಾರ
ಮೈಸೂರು: ದೇಶದಲ್ಲಿ ಕೋಮುವಾದಿ ಬಿಜೆಪಿ ತಡೆಯುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ದಸಂಸ ಬೆಂಬಲ ಸೂಚಿಸಲಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ ಹೇಳಿದರು. ಕೋಮುವಾದಿ ಬಿಜೆಪಿ ಸಂಘ ಪರಿವಾರದ ಹಿಡನ್ ಅಜೆಂಡಾಗಳನ್ನು ಜಾರಿಗೊಳಿಸುವ ಹುನ್ನಾರದಿಂದಾಗಿ ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯವನ್ನು ನಾಶ ಮಾಡಲು ಹೊರಟಿದೆ. ಈ ರೀತಿಯ ಕುತಂತ್ರಗಳನ್ನು ಮೊದಲಿನಿಂದಲೂ ಮಾಡುತ್ತಾ ಬಂದಿದೆ. ಮೀಸಲಾತಿ ವಿರೋಧಿ ನೀತಿ ತಳೆದಿರುವ ಬಿಜೆಪಿಯನ್ನು ದೂರವಿಡಲು, ಜಾತ್ಯತೀತ ಮತಗಳ ಕ್ರೋಡೀಕರಣಕ್ಕೆ ದಲಿತರು ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇಶ ಬಹುಸಂಸ್ಕೃತಿಯ, ಬಹುಭಾಷೆಗಳ ಹಲವಾರು ಜಾತಿ ಧರ್ಮಗಳನ್ನು ಒಳಗೊಂಡಿರುವ ಸೌಹಾರ್ದತೆಯನ್ನು ಬಿಜೆಪಿ ನಾಶ ಮಾಡುತ್ತಿದೆ. ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಛಿದ್ರಗೊಳಿಸುತ್ತಿದೆ. ಜಾಗತೀಕರಣದ ಪ್ರಭಾವದಿಂದ ಮೀಸಲಾತಿ ಕಲ್ಪನೆ ನಶಿಸಿ ಹೋಗುತ್ತಿದೆ. ಹಲವಾರು ವರ್ಷಗಳ ಬೇಡಿಕೆಯನ್ನು ಕಾಂಗ್ರೆಸ್ ಈಡೇರಿಸುವ ಭರವಸೆ ನೀಡಿರುವುದರಿಂದ ನಾವು 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿರುವುದಾಗಿ ಘೋಷಿಸಿದರು. ಮುಖಂಡರಾದ ದೇವಗಳ್ಳಿ ಸೋಮಶೇಖರ್, ಬೆಲವತ್ತ ರಾಮಚಂದ್ರ, ಕೆಂಪಣ್ಣ, ಜಯಲಕ್ಷ್ಮೀ, ನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.