ಸುಬ್ಬರಾಯನಕೆರೆ ಸುವರ್ಣಯುಗ ನೆನಪು ಮಾತ್ರ
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಏ. 13
ಮೈಸೂರಿನ ಸುಬ್ಬರಾಯನಕೆರೆ ಮೈದಾನ ದೇಶದ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯ ತಾಣ. ಪುರಭವನ ಮೈದಾನ ರಾಜಕೀಯ ಹೋರಾಟಗಳಿಗೆ ಹೆಸರುವಾಸಿ. ಇದೀಗ ಇವೆರೆಡರ ಸ್ಥಾನವನ್ನು ಮಹಾರಾಜ ಕಾಲೇಜು ಮೈದಾನ ಆಕ್ರಮಿಸಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಯೋಧರು ಸುಬ್ಬರಾಯನ ಕೆರೆಯಲ್ಲಿ ಸಮಾವೇಶಗೊಂಡು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸುತ್ತಿದ್ದರು. ದೇಶದ ತ್ರಿವರ್ಣ ಧ್ವಜ ಹಾರಿಸುತ್ತಿದ್ದರು. ಇಂತಹ ಸ್ಫೂರ್ತಿಯ ತಾಣ ಹಾಳಾಗಿತ್ತು. ಆದರೆ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಮಣಿರಾಜು ಮೇಯರ್ ಆಗಿದ್ದಾಗ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ. ವೇದಾಂತ ಹೆಮ್ಮಿಗೆ ಮತ್ತಿತರರ ಪ್ರಯತ್ನದ ಫಲವಾಗಿ ಅಲ್ಲಿ ಸ್ವಾತಂತ್ರ್ಯ ಯೋಧರ ಸ್ಮಾರಕ ಭವನ ತಲೆ ಎತ್ತಿತು. ಈಗಲೂ ಕೂಡ ಅಲ್ಲಿ ಸ್ವಾತಂತ್ರ್ಯ ಯೋಧರು ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯೋತ್ಸವ, ಕ್ವಿಟ್ ಇಂಡಿಯಾ ಚಳವಳಿ, ಮೈಸೂರು ಚಲೋ ಚಳವಳಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ರಂಗಾಚಾರ್ಲು ಸ್ಮಾರಕವಾಗಿರುವ ಪುರಭವನ ಎದುರಿನ ಮೈದಾನ ರಾಜಕೀಯ ಪಕ್ಷಗಳ ಪ್ರಚಾರ ಸಭೆಗಳಿಗೆ ಹೆಸರುವಾಸಿ.
ಘಟಾನುಘಟಿಗಳ ಸಂಗಮ: ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ, ರಾಜೀವ್ಗಾಂಧಿ, ಎ.ಬಿ. ವಾಜಪೇಯಿ, ಎಚ್.ಡಿ. ದೇವೇಗೌಡ, ಉಪ ಪ್ರಧಾನಿಗಳಾಗಿದ್ದ ಬಾಬು ಜಗಜೀವನ ರಾಂ, ಎಲ್.ಕೆ. ಆಡ್ವಾಣಿ ಸೇರಿದಂತೆ ಹಲವಾರು ನಾಯಕರು ಅಲ್ಲಿನ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಮೊದಲೆಲ್ಲಾ ಚುನಾವಣೆ ಬಂತೆಂದರೆ ಸಾಕು ಪುರಭವನ ಮೈದಾನದಲ್ಲಿ ಸಾರ್ವಜನಿಕ ಸಭೆಗಳು ಆಯೋಜನೆಯಾಗುತ್ತಿದ್ದವು. ಅದು ಸುಮಾರು 25 ರಿಂದ 30 ಸಾವಿರ ಜನರನ್ನು ಹಿಡಿಯುವ ಮೈದಾನ. ವಾಹನಗಳನ್ನು ಅರಮನೆ, ದೊಡ್ಡ ಗಡಿಯಾರ, ದೊಡ್ಡಕೆರೆ ಮೈದಾನದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಈಗಿನ ನಗರ ಬಸ್ ನಿಲ್ಲಾದಣದಿಂದಲೇ ಗ್ರಾಮಾಂತರ ಬಸ್ಸುಗಳು ಹೊರಡುತ್ತಿದ್ದವು. ಜನರು ಹೋಗಲು- ಬರಲು ಅನುಕೂಲವಾಗಿತ್ತು.
ಜನಸಂಖ್ಯೆ ಹೆಚ್ಚಿದಂತೆಲ್ಲಾ...: ನಗರದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲಾ ವಾಹನಗಳ ಸಂಖ್ಯೆಯೂ ಹೆಚ್ಚಿತು. ಇದರ ಪರಿಣಾಮ ಪುರಭವನ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸುವುದು ಕಿರಿಕಿರಿ ಎನಿಸಿತೊಡಗಿತು. ಆದರೂ 2008 ಚುನಾವಣೆವರೆಗೂ ಈ ಮೈದಾನ ಬಳಕೆಯಾಗಿತ್ತು. ಜಿ.ಟಿ. ದೇವೇಗೌಡ ಬಿಜೆಪಿ ಸೇರ್ಪಡೆ ಸಮಾರಂಭ ನಡೆದಿತ್ತು. ಆಗಲೂ ರಾಜನಾಥಸಿಂಗ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅವರೇ ಬಂದಿದ್ದರು. ಸಿದ್ದರಾಮಯ್ಯ ಅವರು ಕೂಡ ಅಲ್ಲಿ ಅದೇ ವರ್ಷ ಕಾರ್ಯಕ್ರಮ ನಡೆಸಿದ್ದರು.
ಇದಾದ ನಂತರ ನರ್ಮ್ ಯೋಜನೆಯಲ್ಲಿ ಪುರಭವನ ಆಧುನೀಕರಣ, ಪಕ್ಕರದಲ್ಲಿ ಗರುಡಮಾಲ್ ನಿರ್ಮಾಣ ಮತ್ತಿತರ ಕಾಮಗಾರಿಗಳಿಂದಾಗಿ ಇವತ್ತು ಪುರಭವನ ಯಾವುದೇ ಕಾರ್ಯಕ್ರಮ ಮಾಡಲಾಗದ ಸ್ಥಿತಿ ತಲುಪಿದೆ.
ಮೊದಲೆಲ್ಲಾ ಮೈಸೂರಿನಲ್ಲಿ ಯಾರಾದರೂ ಹೆಚ್ಚು ಮಾತನಾಡಿದರೆ ಸುಬ್ಬರಾಯನ ಕೆರೆ ಮೈದಾನದಲ್ಲಿ ಮಾತನಾಡಿದಂತೆ, ಟೌನ್ಹಾಲ್ ಮೈದಾನದಲ್ಲಿ ಮಾತನಾಡಿದಂತೆ ಮಾತನಾಡುತ್ತಾರೆ ಎಂದು ಹೇಳುವಷ್ಟರ ಮಟ್ಟಿಗೆ ಇವು ಫೇಮಸ್ ಆಗಿದ್ದವು.
ಕರ್ನಾಟಕ ವಿಕಾಸ ವೇದಿಕೆಯಿಂದ ಬಳಕೆ: ಮಹಾರಾಜ ಕಾಲೇಜು ಮೈದಾನದ ಮಾಲೀಕತ್ವದ ಬಗ್ಗೆಯೇ ಮೊದಲು ಗೊಂದಲ ಇತ್ತು. ಇದು ತನಗೆ ಸೇರಬೇಕು ಎಂದ ಅರಸು ಬೋರ್ಡಿಂಗ್ ಶಾಲೆಯವರು ವಾದಿಸುತ್ತಿದ್ದರು. ಈಗ ವಿವಾದ ಬಗೆಹರಿದಿದೆ. ಇದು ವಿಶ್ವವಿದ್ಯಾಲಯಕ್ಕೆ ಸೇರಿದ ಜಾಗವಾಗಿದೆ. 1991 ರಲ್ಲಿ ಕಾವೇರಿ ಮಧ್ಯಂತರ ತೀರ್ಪು ಪ್ರಕಟವಾದಾಗ ಎಚ್.ಡಿ. ದೇವೇಗೌಡರು ರಾಜ್ಯದ ಪರ ಹೋರಾಟಕ್ಕಾಗಿ ಕರ್ನಾಟಕ ವಿಕಾಸ ವೇದಿಕೆ ರಚಿಸಿಕೊಂಡಿದ್ದರು. ಸಿದ್ದಯ್ಯ ಪುರಾಣಿಕ್, ಎಸ್. ನಿಜಲಿಂಗಪ್ಪ ಮೊದಲಾದವರು ಅಂದಿನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ವಿಜ್ಞಾನ ಕಾಂಗ್ರೆಸ್ಗೆ ಕೊಟ್ಟಾಗ ವಿವಾದ: ಹಲವು ದಶಕಗಳ ಹಿಂದೆ ಮಹಾರಾಜ ಕಾಲೇಜು ಮೈದಾನವನ್ನು ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಸಮಾವೇಶ ನಡೆಸಲು ಕೊಟ್ಟಾಗ ವಿವಾದ ಉಂಟಾಗಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರೇ ಸಮಾವೇಶದಲ್ಲಿ ಭಾಗವಹಿಸಿದ್ದರು. ಇದಾದ ನಂತರ ಹತ್ತಾರು ವರ್ಷಗಳ ಕಾಲ ಮೈದಾನವನ್ನು ಯಾವುದೇ ಕಾರ್ಯಕ್ರಮಗಳಿಗೆ ನೀಡುತ್ತಿರಲಿಲ್ಲ.
ಆದರೆ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಈಗಿನ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು. ಆಗಲೂ ವಿವಾದ ಉಂಟಾಗಿತ್ತು. ದಸರೆ ಸಂದರ್ಭದಲ್ಲಿ ಯುವ ದಸರಾ ಕಾರ್ಯಕ್ರಮ, ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಉಳಿದಂತೆ ವಸ್ತು ಪ್ರದರ್ಶನ, ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುವ ಸಂಪ್ರದಾಯ ಆರಂಭವಾಯಿತು. ಈ ಬಾರಿ ಕೂಡ ಮಹಾರಾಜ ಕಾಲೇಜು ಮೈದಾನ ಚುನಾವಣಾ ಪ್ರಚಾರಕ್ಕೆ ಬಳಕೆಯಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಸಿಎಂ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬಂದು ಹೋಗಿದ್ದಾರೆ.
ಹೆಲಿಪ್ಯಾಡ್ ಇದೇ ಮೊದಲು
ಪೆವಿಲಿಯನ್ ಪಕ್ಕದ ಮೈದಾನವನ್ನು ಸಮಾವೇಶಗಳಿಗೆ ನೀಡಿದರೂ ಈವರೆಗೆ ಹೆಲಿಪ್ಯಾಡ್ ನಿರ್ಮಿಸಲು ನೀಡಿರಲಿಲ್ಲ. ಆದರೆ ಭದ್ರತಾ ದೃಷ್ಟಿಯಿಂದ ಈ ಬಾರಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಇಳಿಯಲು ಅವಕಾಶ ನೀಡಿ, ಮತ್ತೆ ವಿವಾದ ಉಂಟಾಗಿದೆ. ಒಟ್ಟಾರೆ ಮಹಾರಾಜ ಕಾಲೇಜು ಮೈದಾನಕ್ಕೂ ವಿವಾದಕ್ಕೂ ಬಿಡಿಸಲಾಗದ ನಂಟು ಎನ್ನುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

