ಬಿಸಿಲನ್ನೂ ಲೆಕ್ಕಿಸದೆ ಮತ ಹಾಕಿದ ಜನತೆ
ಕ.ಪ್ರ.ವಾರ್ತೆ ಭೇರ್ಯ ಏ. 17
ಕೆ.ಆರ್. ನಗರ ತಾಲೂಕಿನ ಭೇರ್ಯ, ಮಿರ್ಲೆ, ಹೊಸಅಗ್ರಹಾರ ಹಾಗೂ ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನವಾಗಿದ್ದು, ಸುಡು ಬಿಸಿಲನ್ನು ಲೆಕ್ಕಿಸದೆ ಜನರು ತಮ್ಮ ಹಕ್ಕು ಚಲಾಯಿಸಿದರು.
ಎಲ್ಲೆಡೆ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಹುತೇಕ ಮತ ಕೇಂದ್ರಗಳಲ್ಲಿ ಸರತಿ ಸಾಲಲ್ಲಿ ನಿಂತು ಮತ ಹಾಕಿದರೆ, ಕೆಲ ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ವೃದ್ಧ ಮತದಾರರು ಆಟೋ, ಎತ್ತಿನಗಾಡಿಯಲ್ಲಿ ಮತಗಟ್ಟೆಗೆ ತೆರಳಿ ಉತ್ಸಾಹದಿಂದ ಮತಚಲಾಯಿಸಿದರು. ಕಳೆದ ಲೋಕಸಭಾ ಉಪಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಹೆಚ್ಚು ಮಂದಿ ಪಾಲ್ಗೊಂಡಿದ್ದು ಕಂಡುಬಂತು.
ಬಹಿಷ್ಕಾರ, ಮನವೊಲಿಕೆ: ಮೂಲಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಮುಂಜನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಚನಹಳ್ಳಿ ಗ್ರಾಮಸ್ಥರು ಬೆಳಗ್ಗೆಯಿಂದಲೇ ಮತದಾನ ಬಹಿಷ್ಕರಿಸಿದ್ದರು. ನಮ್ಮ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ, ಸಮರ್ಪಕ ಕುಡಿಯುವ ನೀರು ಮತ್ತಿತರ ಸೌಕರ್ಯ ಕಲ್ಪಿಸುವವರೆಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಶಂಕರಪ್ಪನವರು ಚುನಾವಣೆ ಬಳಿಕ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಲು ಸೂಚಿಸಲಾಗುವುದು. ಮತ ಚಲಾಯಿಸುವಂತೆ ಮನವಿ ಮಾಡಿದ ಬಳಿಕ ಗ್ರಾಮಸ್ಥರು ಮಧ್ಯಾಹ್ನ 12 ಗಂಟೆ ನಂತರ ಹಕ್ಕು ಚಲಾಯಿಸಿದರು.
ಸಾಲಿಗ್ರಾಮದಲ್ಲಿ ಶಾಸಕ ಸಾ.ರಾ. ಮಹೇಶ್ ಪತ್ನಿ, ಪುತ್ರನೊಂದಿಗೆ ತೆರಳಿ ಹಕ್ಕು ಚಲಾಯಿಸಿದರು. ಶಾಸಕರ ಹಿರಿಯ ಪುತ್ರ ಧನುಷ್ ಇದೆ ಮೊದಲ ಬಾರಿಗೆ ಮತ ಚಲಾಯಿಸಿದರು. ಧನುಷ್ ಮಾತನಾಡಿ, ನಾನು ಅಪ್ಪನಿಗೆ ಮೊದಲ ಮತ ಹಾಕಬೇಕು ಅಂದುಕೊಂಡಿದ್ದೆ. ಆದರೂ ಪರವಾಗಿಲ್ಲ, ಅವರ ಪಕ್ಷದ ಅಭ್ಯರ್ಥಿಗೆ ಮೊದಲ ಬಾರಿ ತನ್ನ ಹಕ್ಕು ಚಲಾಯಿಸಿದೆನೆಂಬ ತೃಪ್ತಿ ಇದ್ದು, ನನ್ನ ಆತ್ಮೀಯ ಸೇಹಿತನ ತಂದೆಗೆ ಮತ ಹಾಕಿದ ಖುಷಿ ಒಂದು ಕಡೆಯಾದರೆ, ಮೊದಲ ಬಾರಿಗೆ ಮತ ಹಾಕಿದ ಸಂತೋಷ ಎಂದು ಹೇಳಿದರು.
ಶಾಸಕ ಸಾ.ರಾ. ಮಹೇಶ್ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರು 50 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ. ಕೆ.ಆರ್. ನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಿಂತ ಅವರು ಹೆಚ್ಚು ಮತ ಪಡೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಲ್ಲಿ ಶೇ.72 ಮತ ಚಲಾವಣೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 17
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.72 ರಷ್ಟು ಶಾಂತಿಯುತ ಮತದಾನವಾಗಿದ್ದು, ತಾಲೂಕಿನ ದೊಡ್ಡ ಹನಸೋಗೆ ಗ್ರಾಮದ ಮತಗಟ್ಟೆ 86ರಲ್ಲಿ ಬೆಳಗ್ಗೆ ಕೆಲ ಸಮಯ ಮತ ಯಂತ್ರ ಕೆಟ್ಟಿದ್ದು ಬಿಟ್ಟರೆ, ಯಾವುದೇ ಗೊಂದಲವಿಲ್ಲದೆ ಮುಕ್ತಾಯವಾಯಿತು.
ಬೆಳಗ್ಗೆ 7ಕ್ಕೆ ಮತದಾನ ಆರಂಭವಾದಾಗ ನೀರಸ ಪ್ರತಿಕ್ರಿಯೆ ಕಂಡುಬಂತಲ್ಲದೆ, 10 ಗಂಟೆಯಾದರೂ ಶೇ. 8ರಷ್ಟು ಪ್ರಮಾಣದ ಮತದಾನವಾಗಿರಲಿಲ್ಲ, ನಂತರ ನಿಧಾನವಾಗಿ ಮತ ಕೇಂದ್ರಕ್ಕೆ ಬಂದ ಮತದಾರರು, ತಮ್ಮ ಹಕ್ಕು ಚಲಾಯಿಸಿದರಾದರೂ ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಅಂತಹ ಉತ್ಸಾಹ ಕಂಡು ಬರಲಿಲ್ಲ.
ಮತದಾರರ ಉತ್ಸಾಹಕ್ಕೆ ಬೇಸಿಗೆಯ ಬಿರು ಬಿಸಿಲು ಸವಾಲೊಡ್ಡಿತ್ತಲ್ಲದೆ, ಮಧ್ಯಾಹ್ನ 3ರ ನಂತರ ಚುರುಕುಗೊಂಡ ಮತದಾನ, ಸಂಜೆ ವೇಳೆಗೆ ವೇಗ ಪಡೆದುಕೊಂಡಿತು. ಈ ಬಾರಿಯ ವಿಶೇಷವೆಂದರೆ ಹೊಸದಾಗಿ ಮತ ಚಲಾಯಿಸಿದ ಯುವ ಮತದಾರರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.
ಕ್ಷೇತ್ರದಾದ್ಯಂತ ಬೆಳಗ್ಗೆ ಮತ್ತು ಸಂಜೆ ಹೊರತುಪಡಿಸಿ, ಮಧ್ಯಾಹ್ನ ಮತ ಕೇಂದ್ರಗಳಲ್ಲಿ ಬೆರಳೆಣಿಕೆಯಷ್ಟು ಮತದಾರರು ಕಂಡು ಬಂದರು. ಬಹುತೇಕ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ದೃಶ್ಯಗಳೇ ಕಂಡು ಬರಲಿಲ್ಲ. ತಾಲೂಕಿನ ಸಾಲಿಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆಯಲ್ಲಿ ಶಾಸಕ ಸಾ.ರಾ. ಮಹೇಶ್ ಕುಟುಂಬ ಸಮೇತ ಮತ ಚಲಾಯಿಸಿದರು. ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ದಂಪತಿ ಸಮೇತ ತಮ್ಮ ಹಕ್ಕು ಚಲಾಯಿಸಿದರು.
ಮಾತಿನ ಚಕಮಕಿ: ತಾಲೂಕಿನ ಹೊಸೂರು ಮತಗಟ್ಟೆ ಬಳಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ವತಿಯಿಂದ ನೀಡಿರುವ ಬೂತ್ ಏಜೆಂಟ್ ಹಣವನ್ನು ಸಮರ್ಪಕವಾಗಿ ವಿತರಿಸಿಲ್ಲ ಎಂದು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿದ್ದಾಗ ಎಸ್ಐ ಷಣ್ಮುಗಂ ಮಧ್ಯೆ ಪ್ರವೇಶಿಸಿ ಸಮಾಧಾನ ಪಡಿಸಿದರು.
ತಾಲೂಕಿನ ಎಲ್ಲ ಮತಗಟ್ಟೆಗಳ ಸಮೀಪ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೊನೆ ಕ್ಷಣದ ಕಸರತ್ತು ನಡೆಸುತ್ತಿದರಲ್ಲದೆ, ಮತದಾರರ ಮನವೊಲಿಸಿ ತಮ್ಮ ಅಭ್ಯರ್ಥಿಗಳ ಪರ ಮತ ಹಾಕುವಂತೆ ಮನವಿ ಮಾಡುತ್ತಿದ್ದರು.
ಚಿಕ್ಕಯ್ಯನಛತ್ರ: ಶಾಂತಿಮತ
ತಾಂಡವಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಿಕ್ಕಯ್ಯನ ಛತ್ರ ಹೋಬಳಿಯ ಗ್ರಾಮಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಹೋಬಳಿ ವ್ಯಾಪ್ತಿಯ ರಾಂಪುರ, ಗೌಡರಹುಂಡಿ, ಅಹಲ್ಯ, ಬಿದರಗೂಡು, ಕೆಂಬಾಲು, ಹಳ್ಳೀಕೆರೆಹುಂಡಿ, ಮರಳೂರು, ಏಚಗಳ್ಳಿ, ಹಳ್ಳಿದಿಡ್ಡಿ, ತಾಂಡವಪುರ, ಅಡಕನಹಳ್ಳಿ ಹುಂಡಿ, ಹೆಬ್ಯ, ಚಿಕ್ಕಯ್ಯನ ಛತ್ರ, ಬಂಚಹಳ್ಳಿ ಹುಂಡಿ, ಕೆಂಪೀಸಿದ್ದನ ಹುಂಡಿ, ಇಮ್ಮಾವು, ಹೆಜ್ಜಿಗೆ ತೊರೆಮಾವು, ಇಮ್ಮಾವು ಹುಂಡಿ, ಬೊಕ್ಕಹಳ್ಳಿ, ಹದಿನಾರು, ಹುಳಿಮಾವು ಬಸವನಪುರ, ಹದಿನಾರು ಮೋಳೆ, ಮಲ್ಲರಾಜಯ್ಯನ ಹುಂಡಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಚುರುಕಿನಿಂದ ಮತದಾನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

