ಮೈಸೂರು

ಮತಗಟ್ಟೆ ಸ್ಥಳಾಂತರಕ್ಕೆ ಆಕ್ರೋಶ, ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಮೈಸೂರು ಏ. 17
ಏಕಾಏಕಿ ಮತಗಟ್ಟೆ ಸ್ಥಳಾಂತರಗೊಂಡ ಕ್ರಮ ಖಂಡಿಸಿ ಪಡುವಾರಹಳ್ಳಿ ನಿವಾಸಿಗಳು ಮತದಾನ ಬಹಿಷ್ಕರಿಸಿ, ಪ್ರತಿಭಟಿಸಿದ ಘಟನೆ ಗುರುವಾರ ನಡೆಯಿತು.
ಈ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ಚುನಾವಣೆ ನಡೆದ ಸಂದರ್ಭದಲ್ಲಿ ಮತಕೇಂದ್ರವನ್ನು ಸ್ಥಾಪಿಸುವುದು ವಾಡಿಕೆ. ಅಂತೆಯೇ ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಲುವಾಗಿ ಬೆಳಗ್ಗೆ ಎದ್ದು ಈ ಮತಗಟ್ಟೆ ಮತ ಚಲಾಯಿಸಲು ಬಂದಾಗಲೇ ಅದು ಸ್ಥಳಾಂತರಗೊಂಡಿರುವುದು ನಿವಾಸಿಗಳಿಗೆ ತಿಳಿಯಿತು.
ಚಾಮರಾಜ ಕ್ಷೇತ್ರದ 104ನೇ ಮತಗಟ್ಟೆಯಾಗಿರುವ ಮತದಾನ ಕೇಂದ್ರವನ್ನು ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಬೇರೆಡೆಗೆ ಸ್ಥಳಾಂತರ ಮಾಡಿರುವ ವಿಷಯ ತಿಳಿದ ಮತದಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಮತದಾನ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು. ಏನೇ ಆಗಲಿ ಇದೇ ಸ್ಥಳದಲ್ಲಿಯೇ ಮತಗಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರ ಅಸಮಾಧಾನ: ದಲಿತರೇ ಹೆಚ್ಚಾಗಿ ವಾಸಿಸುವ ಈ ಕಾಲೋನಿಯಲ್ಲಿ ಸುಮಾರು 50 - 60 ವರ್ಷದಿಂದ ಇದೇ ಕೇಂದ್ರದಲ್ಲಿ ಮತ ಚಲಾಯಿಸುತ್ತಾ ಬಂದಿದ್ದೇವೆ. ಈಗ ಯಾರಿಗೂ ತಿಳಿಸದೆ ಇದ್ದಕ್ಕಿದ್ದಂತೆ ಬೇರೆ ಜಾಗಕ್ಕೆ ಮತಗಟ್ಟೆ ಸ್ಥಳಾಂತರಿಸುವುದರ ಉದ್ದೇಶವಾದರೂ ಏನು ಎಂದು ಕೆಲವರ ಪ್ರಶ್ನೆಯಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯಾಸ ಪಡಬೇಕಾಯಿತು. ಈಗಾಗಲೇ ಮತಗಟ್ಟೆ ಸ್ಥಳಾಂತರಿಸಿದ್ದು, ಅಲ್ಲಿ ಮತದಾನವೂ ಆರಂಭವಾಗಿರುವುದರಿಂದ ಅದನ್ನು ವಾಪಸ್ ತರಲು ಅವಕಾಶವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಪ್ರತಿಭಟನೆ ಕೈಬಿಟ್ಟ ನಿವಾಸಿಗಳು ಮತದಾನಕ್ಕೆ ಮುಂದಾದರು.
ಶಾಸಕ ವಾಸು, ಮೇಯರ್ ರಾಜೇಶ್ವರಿ, ಮುಖಂಡರಾದ ಸೋಮು, ಮಹದೇವು, ಚೆಲುವಮ್ಮ, ಸಿದ್ದರಾಜು, ಕೃಷ್ಣ, ಟೆನ್ನಿಸ್ ಗೋಪಿ, ರಾಮಚಂದ್ರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.