ಮೂಲಸೌಲಭ್ಯಕ್ಕೆ ಆಗ್ರಹಿಸಿ ಮತ ಬಹಿಷ್ಕಾರ
ಕ.ಪ್ರ.ವಾರ್ತೆ ನಂಜನಗೂಡು ಏ. 17
ಮೂಲಭೂತ ಸೌಕರ್ಯ ನೀಡಲು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಚಾಮರಾಜನಗರ ಮೀಸಲು ಲೋಕಸಭಾ ಚುನಾವಣೆಯನ್ನು ಗ್ರಾಮದ ಒಂದು ಭಾಗದ ಮತದಾರರು ದೇವರಸನಹಳ್ಳಿ ಗ್ರಾಮದಲ್ಲಿ ಕೆಲಕಾಲ ಬಹಿಷ್ಕರಿಸಿದ್ದ ಘಟನೆ ಜರುಗಿದೆ.
ದೇವರಸನಹಳ್ಳಿ ಗ್ರಾಮದ ಒಂದು ಭಾಗದ ಮತದಾರರು ಮತ ಚಲಾಯಿಸುತ್ತಿಲ್ಲ ಎಂದು ತಿಳಿದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ರಾಜೇಂದ್ರ, ತಾಪಂ ಇಒ ಡಾ.ಕೃಷ್ಣಂರಾಜು ಭೇಟಿ ನೀಡಿದರು.
ಹುಲ್ಲಹಳ್ಳಿ ನಾಲಾ ಕಾಲುವೆ ದುರಸ್ತಿ, ಸೋಪಾನ ಕಟ್ಟೆ, ಕುಡಿಯುವ ನೀರು, ರಸ್ತೆ, ಚರಂಡಿ, ಆಶ್ರಯ ಮನೆಗಳೂ ಸೇರಿದಂತೆ ಇನ್ನೂ ಅನೇಕ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಆರೋಪಿಸಿ, ಈ ಚುನಾವಣೆಯ ಮತದಾನದಿಂದ ದೂರ ಉಳಿದರು.
ತಾಲೂಕು ಆಡಳಿತ ಯಂತ್ರ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಗ್ರಾಮದ ಮುಖಂಡರ ಸಮಸ್ಯೆಯನ್ನು ಆಲಿಸಿ, ಅದನ್ನು ಬಗೆಹರಿಸುವುದರ ಬಗ್ಗೆ ಲಿಖಿತ ಪತ್ರ ನೀಡಿದರೂ ಗ್ರಾಮಸ್ಥರು ಜಗ್ಗದೆ, ಚುನಾಯಿತ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಬೇಕು, ಕಾಮಗಾರಿಗಳು ಈಗಲೇ ಆರಂಭವಾಗಬೇಕು ಎಂದು ಪಟ್ಟು ಹಿಡಿದಿದ್ದರು.
ಬೆಳಗ್ಗೆ 7 ರಿಂದ 12.30ರವರೆಗೆ ಕೇವಲ ಎರಡು ಮತಗಳು ಚಲಾವಣೆಯಾಗಿದ್ದವು. ನಂತರ ಸುದ್ದಿ ತಿಳಿದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ, ಎಸ್. ಮಹದೇವಯ್ಯ, ಆ ಭಾಗದ ಜಿಪಂ ಸದಸ್ಯ ಕೆಂಪಣ್ಣ, ಅಲ್ಪ ಸಂಖ್ಯಾತರ ಮುಖಂಡ ಇಲಿಯಾಸ್ ಅಹಮದ್ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದ ಮುಖಂಡರನ್ನು ಮನವೊಲಿಸಿದರೂ ಸಹ ಅದಕ್ಕೆ ಬಗ್ಗಲಿಲ್ಲ.
ತಹಸೀಲ್ದಾರ್ ರಾಜೇಂದ್ರ ಲಿಖಿತವಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರಿಂದ, ಮಧ್ಯಾಹ್ನ 3.20ಕ್ಕೆ ಮತದಾನ ಆರಂಭವಾಯಿತು. ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಜೆಡಿಎಸ್ ಪರ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಮತ ಯಾಚಿಸುತ್ತಿದ್ದದು ಕಂಡು ಬರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎರಡನೇ ಸ್ಥಾನ ಪಡೆದಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ನಿರುತ್ಸಾಹ ಎದ್ದು ಕಾಣುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

