ಹುಟ್ಟೂರಿಗೆ ಬಂದ ಸಿದ್ದರಾಮಯ್ಯಗೆ ಭವ್ಯ ಸ್ವಾಗತ

ಕ.ಪ್ರ.ವಾರ್ತೆ ಮೈಸೂರು ಏ. 17
ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಗುರುವಾರ ಹುಟ್ಟೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದು ಕಳೆದ ವರ್ಷದ ಮೇ 13 ರಂದು. ಈಗಾಗಲೇ 11 ತಿಂಗಳು ಕಳೆದಿವೆ. ಆದರೂ ಹುಟ್ಟೂರಿಗೆ ಭೇಟಿ ನೀಡಲು ಆಗಿರಲಿಲ್ಲ. ಪಕ್ಕದ ಟಿ.ನರಸೀಪುರ, ವರುಣ, ಹೊಸಕೋಟೆ, ಸುತ್ತೂರಿಗೆ ಬಂದರೂ ಸಿದ್ದರಾಮಯ್ಯ ಅವರು ಸ್ವಗ್ರಾಮಕ್ಕೆ ಭೇಟಿ ನೀಡಲು ಆಗಿರಲಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಭೇಟಿ ಮುಂದಕ್ಕೆ ಹೋಗುತ್ತಲೇ ಇತ್ತು. ಆದರೆ ಇವತ್ತು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕಿದ್ದರಿಂದ ಹಾಗೂ ಅವರ ಹೆಸರು ಸ್ವಗ್ರಾಮದ ಮತದಾರರ ಪಟ್ಟಿಯಲ್ಲಿರುವುದರಿಂದ ಭೇಟಿ ನೀಡಬೇಕಾದ ಅನಿವಾರ್ಯತೆ ಉಂಟಾಯಿತು.
ಮೈಸೂರು- ಟಿ.ನರಸೀಪುರ ಮುಖ್ಯ ರಸ್ತೆಯಿಂದ ಹೊಸಹಳ್ಳಿ ಮಾರ್ಗವಾಗಿ ಸಿದ್ದರಾಮನಹುಂಡಿ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಜನ ಅಲ್ಲಲ್ಲಿ ಹಾರ ಹಾಕಿ ಸ್ವಾಗತ ಕೋರಿದರು. ಊರಿನ ಹೆಬ್ಬಾಗಿಲಿನಲ್ಲಿ ತಳಿರು, ತೋರಣ ಕಟ್ಟಲಾಗಿತ್ತು. ಗ್ರಾಮದ ಸಿದ್ದರಾಮೇಶ್ವರ ಸ್ವಾಮಿ ದೇವಸ್ಥಾನದ ಬಳಿ ಬಂದಾಗ ಪಟಾಕಿ ಸಿಡಿಸಿ, ಮೈಸೂರು ಪೇಟ, ಶ್ರೀಗಂಧದ ಹಾರ ಹಾಕಿ ಜಿಪಂ ಮಾಜಿ ಸದಸ್ಯ ಸಿ.ಕೆಂಪೀರಯ್ಯ ಹಾಗೂ ಬಸವರಾಜು ಮತ್ತಿತರರು ಬರ ಮಾಡಿಕೊಂಡರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ದೇಗುಲದ ಪ್ರಾಂಗಣದಲ್ಲಿ ನೆರೆದಿದ್ದ ಊರ ಜನರ ಸಮಸ್ಯೆ ಕೇಳಿದರು. ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ವೃದ್ಧನಿಗೆ ಸಹಾಯ ಮಾಡುವ ಭರವಸೆ ನೀಡಿದರು. ನಂತರ ಸಿದ್ದರಾಮಯ್ಯ ಅವರನ್ನು ಮೆರವಣಿಗೆಯಲ್ಲಿ ಶ್ರೀರಾಮಮಂದಿರಕ್ಕೆ ಕರೆತರಲಾಯಿತು. ಗ್ರಾಮದ ಯುವಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ಸಿಎಂ ಸಿದ್ದರಾಮಯ್ಯಗೆ, ಮೈಸೂರು ಹುಲಿಗೆ ಎಂಬ ಘೋಷಣೆ ಮೊಳಗಿಸಿದರು. ರಾಮಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಮತಗಟ್ಟೆಗೆ ತೆರಳಿ, ತಮ್ಮ ಹಕ್ಕು ಚಲಾಯಿಸಿದರು.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಊರಿಗೆ ಬಂದಿದ್ದೆ. ನಂತರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದೆ. ಸಮಯದ ಅಭಾವದಿಂದ ಗ್ರಾಮಕ್ಕೆ ಬರಲಾಗಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಿ.ಕೆಂಪೀರಯ್ಯ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿದ ಸಿದ್ದರಾಮಯ್ಯ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ವಾಪಸಾದರು.
ಕಾಂಗ್ರೆಸ್ಗೆ 18 ರಿಂದ 20 ಸ್ಥಾನ
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 18 ರಿಂದ 20 ಸ್ಥಾನಗಳನ್ನು ಗಳಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಹುಟ್ಟೂರು ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ಗುರುವಾರ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಸಮೀಕ್ಷೆಗಳು ಮಾತ್ರ. ಅವು ಫಲಿತಾಂಶವಲ್ಲ ಎಂದರು. ಎನ್ಡಿಟಿವಿ ಮೊದಲು 6, ನಂತರ 10, 13, ಕೊನೆಗೆ 14 ಸ್ಥಾನಗಳು ಕಾಂಗ್ರೆಸ್ಗೆ ಬರಲಿವೆ ಎಂದು ಹೇಳಿತು. ಸಿಎನ್ಎನ್ ಐಬಿಎನ್ 13 ರಿಂದ 18 ಸ್ಥಾನಗಳು ಬರಲಿವೆ ಎಂದು ಹೇಳಿದೆ. ಆದರೆ ನನ್ನ ಪ್ರಕಾರ ಕಾಂಗ್ರೆಸ್ಗೆ ಕನಿಷ್ಠ 18 ರಿಂದ 20 ಸ್ಥಾನಗಳು ಬರುತ್ತವೆ. ಆ ರೀತಿಯ ವಾತಾವರಣ ಕಂಡು ಬಂದಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


