ಎಳನೀರು ಬೆಲೆ ಜೋರು
ಮಾ.ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಏ. 18
ಬೇಸಿಗೆ ಬಂತೆಂದರೆ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಸಹಜ. ಆದರೆ ಆ ಬಾರಿ ಬರೀ ಬೇಡಿಕೆ ಮಾತ್ರವಲ್ಲ, ಗ್ರಾಹಕರಿಗೆ ಇದರ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ.
ಬಿಸಿಲಿನ ತಾಪಕ್ಕೆ ತಂಪು ನೀಡುವ ಎಳನೀರು, ರೋಗಿಗಳ ಆರೈಕೆಗೂ ಉತ್ತಮ ಪಾನೀಯ. ಎಲ್ಲ ಕಾಲಕ್ಕೂ ಇದರ ಬಳಕೆ ಕಂಡು ಬಂದರೂ, ಬೇಸಿಗೆಯಲ್ಲಿ ಬಳಕೆ ಹೆಚ್ಚು. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಇದು ಇಷ್ಟವಾಗಲಿದೆ. ಎಳನೀರು ಒಂದಕ್ಕೆ 20 ರಿಂದ 25ಗೆ ಮಾರಾಟ ಮಾಡಲಾಗುತ್ತಿದ್ದು, ಇದು ಮುಂದಿನ ಒಂದೆರಡು ತಿಂಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನುತ್ತಾರೆ ಸುಣ್ಣದಕೇರಿ ನಿವಾಸಿ ಎಳನೀರು ವ್ಯಾಪಾರಿ ಸಿದ್ದರಾಜು.
ನಾನು ಕಳೆದ 15 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಆಗ ಎಳನೀರಿಗೆ 3 ರಿಂದ 5 ಇತ್ತು. ಕಳೆದ ವರ್ಷ 12 ರಿಂದ 15, ಈ ವರ್ಷ 20 - 25 ಆಗಿದೆ. ಹಣ ಕೊಟ್ಟರೂ ಪದಾರ್ಥ ಸಿಗುತ್ತಿಲ್ಲ. ಈ ಹಿಂದೆ ಮೈಸೂರು ಸುತ್ತಮುತ್ತಲೂ ತೆಂಗಿನ ತೋಟಗಳಿದ್ದವು. ಆದರೆ ಈಗ ತೆಂಗಿನಮರಗಳನ್ನು ಕಡಿದು ಆ ಜಾಗದಲ್ಲಿ ನಿವೇಶನ ಮಾಡಿ ಬಡಾವಣೆ ನಿರ್ಮಿಸುತ್ತಿರುವ ಕಾರಣ ಫಸಲು ಕಡಿಮೆಯಾಗಿದೆ.
ಎಳನೀರು ಮಾರಿದರೆ ಹೆಚ್ಚು ಲಾಭ ಬರುವ ಕಾರಣ ತೋಟದ ಮಾಲೀಕರು ಕಾಯಿ ಬಲಿಯುವವರೆಗೂ ಕಾಯುವುದಿಲ್ಲ. ಆದ್ದರಿಂದ ತೆಂಗಿನಕಾಯಿಗೂ ಬರ ಬಂದಿದೆ. ಒಂದು ಕಾಯಿಗೆ 25 ರಿಂದ 35 ಆಗಿದ್ದು, ಮುಂದಿನ ದಿನಗಳಲ್ಲಿ ಕೆಜಿ ಲೆಕ್ಕದಲ್ಲಿ ಮಾರಾಟವಾಗಲಿದೆ. ಮೈಸೂರು ತಾಲೂಕಿನ ಸುತ್ತಮುತ್ತ ಎಳನೀರು ಸಿಗದ ಕಾರಣ ಊಟಿರಸ್ತೆ ಕೂಡ್ಲೂರು, ನಂಜನಗೂಡು ತಾಲೂಕಿನ ಹುಲ್ಲಹಳ್ಳಿ, ನವಿಲೂರು, ಚಾಮರಾಜನಗರ ಜಿಲ್ಲೆಯ ವಿವಿಧೆಡೆಯಿಂದ ಎಳನೀರು ಖರೀದಿಸಿ ಮಾರಾಟ ಮಾಡಲಾಗುತ್ತಿದೆ.
ತೆಂಗು ಬೆಳೆಗಾರರಿಂದ ಎಳನೀರು ಮಾರಾಟ ಮಾಡುವವರ ಬಳಿಗೆ ಮಾಲು ಬರುವಲ್ಲಿ ಮೂವರ ಕೈ ಬದಲಾಗಿರುತ್ತದೆಯಂತೆ, ಮರ ಹತ್ತಿ ಕೀಳುವವರಿಗೆ ಕೂಲಿ, ಸಾಗಾಣಿಕೆ ವೆಚ್ಚ ಹಾಗೂ ಮಧ್ಯವರ್ತಿಗಳ ಕಮಿಷನ್ ಹೋದರೆ ಬೆಳೆಗಾರನಿಗೂ ಮಾರಾಟಗಾರನಿಗೂ ಸಿಗುವ ಲಾಭ ತೀರ ಕಡಿಮೆಯಂತೆ.
ಮದುವೆ ಸೇರಿದಂತೆ ಮುಂತಾದ ಸಮಾರಂಭಗಳಿಗೆ ತೆಂಗಿನಕಾಯಿ ಅಗತ್ಯ. ಬೆಲೆ ಏರಿಕೆಯಿಂದ ಜನರು ತೆಂಗಿನಕಾಯಿ ಕೊಳ್ಳಲು ಹಿಂಜರಿಯುವಂತಾಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ತೆಂಗಿನ ಉತ್ಪನ್ನಗಳು ಗಗನ ಕುಸುಮವಾಗಲಿವೆ.
ಕಳೆದ 30 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಈ ವರ್ಷ ಎಳನೀರು ಎಲ್ಲಿಯೂ ಸಿಗುತ್ತಿಲ್ಲ. ದೂರದ ಊರುಗಳಿಂದ ತಂದು ಮಾರುವಂತಾಗಿದೆ. ಇದರಿಂದ ಸಹಜವಾಗಿ ಬೆಲೆ ಏರಿಕೆಯಾಗಿದೆ. ಆದರೂ ಎಳನೀರು ಕುಡಿಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಬೇಡಿಕೆಗೆ ಅನುಗುಣವಾಗಿ ಪದಾರ್ಥ ಸಿಗುತ್ತಿಲ್ಲ. ತೆಂಗಿನ ಫಸಲು ನಂಬಿ ಜೀವನ ಮಾಡುತ್ತಿದ್ದೇವೆ.
ಸೋಮನಾಯ್ಕ, ಎಳನೀರು ವ್ಯಾಪಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

