ಮೈಸೂರು

ಸೆಸ್ಕ್ ಕಚೇರಿ ಎದುರು ಇಂದು ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಭೇರ್ಯ ಏ. 18
ಸಾಲಿಗ್ರಾಮ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದನ್ನು ಖಂಡಿಸಿ ಏ.19ರ ಬೆಳಗ್ಗೆ 10ಕ್ಕೆ ಗ್ರಾಮದ ಸೆಸ್ಕ್ ಕಚೇರಿ ಎದುರು ಪ್ರತಿಭಟಿಸುವುದಾಗಿ ಉದ್ಯಮಿ ಸಾ.ರಾ. ನಂದೀಶ್ ತಿಳಿಸಿದ್ದಾರೆ. ರೈತರ ಕೃಷಿ ಪಂಪ್‌ಸೆಟ್‌ಗೆ ಮತ್ತು ಈ ಭಾಗದ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಕುಡಿಯುವ ನೀರು ಸಿಗುವುದು ಕಷ್ಟವಾಗಿದೆ. ಸಾಲ ಮಾಡಿ ತಮ್ಮ ಜಮೀನಿನಲ್ಲಿ ಬೆಳೆ ಬೆಳೆದು ಜೀವನ ಸಾಗಿಸುವ ರೈತರು ವಿದ್ಯುತ್ ಕೊರತೆಯಿಂದ ಜಮೀನಿಗೆ ನೀರು ಹರಿಸಲಾಗದೆ ಬೆಳೆ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಆದ್ದರಿಂದ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟಿಸುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎರಡು ಪ್ರಕರಣ ದಾಖಲು
ಪಿರಿಯಾಪಟ್ಟಣ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಎಸ್‌ಐ ರಫೀಕ್ ಹೇಳಿದ್ದಾರೆ. ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಸರ್ಕಾರಿ ಬಾಲಕರ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 184 ಮತ್ತು 185ರ ಮುಂಭಾಗ ಏ.17 ರಂದು ಮತದಾನದ ಸಮಯದಲ್ಲಿ ಮತಗಟ್ಟೆ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪರಶುರಾಮ್ ಹಾಗೂ ಜೆಡಿಎಸ್ ಪಕ್ಷಕ್ಕೆ ಸೇರಿದ ಶೇಖರ್ ಎಂಬವರು ಪಕ್ಷದ ಪರ ಪ್ರಚಾರ ಮಾಡುತ್ತಿದ್ದ ವೇಳೆ ಇಬ್ಬರ ಮೇಲೆ ಚುನಾವಣಾ ನೀತಿ ಸಂಹಿತೆ ಉಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇಂದು ಸಾರ್ವಜನಿಕರ ಸಭೆ
ಮೈಸೂರು: ನಗರದ ಎಲ್ಲ ಸಂಚಾರ ಪೊಲೀಸ್ ಠಾಣೆಗಳಲ್ಲಿ ಏ.19ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಲಿದೆ. ಸಂಚಾರ ಠಾಣೆಯ ನಿರೀಕ್ಷಕರು, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದು, ಸಾರ್ವಜನಿಕರು ಸಂಚಾರ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ, ಸಂಚಾರವನ್ನು ಸುಗಮಗೊಳಿಸಲು ಯಾವುದೇ ಅಭಿಪ್ರಾಯ ಮಾಹಿತಿಗಳನ್ನು ಕಾನೂನಿನ ಅಡಿಯಲ್ಲಿ ಸಹಕಾರಿಯಾಗುವಂತೆ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಉತ್ತಮ ಸಲಹೆ ಇದ್ದಲ್ಲಿ ಅವುಗಳನ್ನು ಅನುಷ್ಠಾನಗೊಳಿಸಲಾಗುದು. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಕೋರಿದ್ದಾರೆ.

ವಿದ್ಯಾಭಿನವ ಸ್ವಾಮಿಗಳ ಆರಾಧನೆ
ಮೈಸೂರು: ಶ್ರೀ ವಿದ್ಯಾಭಿನವ ವಾಲುಕೇಶ್ವರ ಸ್ವಾಮೀಗಳವರ 78ನೇ ಆರಾಧನಾ ಮಹೋತ್ಸವವು ಶುಕ್ರವಾರ ಸದ್ಗುರು ಸೇವಾ ಮಂಡಲ ವತಿಯಿಂದ ನಡೆಯಿತು.
ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಂಸ್ಕೃತ ಪಾಠಶಾಲೆಯ ಪಕ್ಕದ ಆವರಣದಲ್ಲಿನ ದತ್ತಾತ್ರೇಯ ದೇವಸ್ಥಾನ ಹಾಗೂ ವಿದ್ಯಾಭಿನವ ಶ್ರೀಗಳ ಆಲಯದಲ್ಲಿ ಬೆಳಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಿತು.
ನಂತರ ಸಂಜೆ ಭಕ್ತರ ಸತ್ಸಂಗ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಮಂಡಲದ ಗೌರವ ಕಾರ್ಯದರ್ಶಿ ಎಚ್.ಎಸ್. ಬಾಲಚಂದ್ರ ಶಾಸ್ತ್ರಿ ಮತ್ತಿತರ ಪದಾಧಿಕಾರಿಗಳು ಇದ್ದರು.

ಮುಕ್ತ ಚುನಾವಣೆಗೆ ಮನವಿ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಆಡಳಿತ ಮಂಡಳಿಯ ಚುನಾವಣೆ ಏ.20 ರಂದು ನಿಗದಿಯಾಗಿದೆ. ಆದರೆ ಸದಸ್ಯ ಸಹಕಾರ ಸಂಘಗಳ ಪ್ರತಿನಿಧಿಗಳ ನಮೂನೆಗಳನ್ನು ಸಲ್ಲಿಸುವ ವೇಳೆ ಕಾರ್ಯನಿರತವಲ್ಲದ ಸಹಕಾರ ಸಂಘದವರು ಪ್ರತಿನಿಧಿಗಳ ನಮೂನೆಗಳನ್ನು ಸಲ್ಲಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ಶ್ರೀ ವಿಜಯ ಗಣಪತಿ ಬಳಕೆದಾರರ ಸಹಕಾರ ಸಂಘ ತಿಳಿಸಿದೆ. ಇತ್ತೀಚೆಗೆ ಆಡಳಿತಾಧಿಕಾರಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮೈಸೂರು ಉಪ ವಿಭಾಗ, ಅವರು ಅಧಿಕಾರ ವಹಿಸಿಕೊಂಡಿರುವುದರಿಂದ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಮಾತ್ರ ಅವಕಾಶ ನೀಡಿ ಮುಕ್ತ ಚುನಾವಣೆಗೆ ನಡೆಸಿಕೊಡುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.