ಗೂಡ್ಸ್ ವಾಹನ ಡಿಕ್ಕಿ: ಸೆಸ್ಕ್ ಎಂಜಿನಿಯರ್ ಸಾವು
ನಂಜನಗೂಡು: ಬೈಕ್ ಮತ್ತು ಗೂಡ್ಸ್ ವಾಹನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೆಸ್ಕ್ ಎಂಜಿನಿಯರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ಮೈಸೂರು-ನಂಜನಗೂಡು ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯಾತ್ರಿ ಭವನ್ ಮುಂಭಾಗ ಜರುಗಿದೆ.
ಮೈಸೂರಿನ ರಾಮಕೃಷ್ಣನಗರದ ನಿವಾಸಿ ಕೃಷ್ಣ ಎಂಬವರ ಪುತ್ರ ಕೀರ್ತಿಕುಮಾರ್ (31) ಮೃತಪಟ್ಟ ಎಂಜಿನಿಯರ್.
ಕಾರ್ಯನಿಮಿತ್ತ ನಂಜನಗೂಡಿಗೆ ತಮ್ಮ ಬೈಕ್ನಲ್ಲಿ ಬಂದಿದ್ದ ಅವರು, ಪಟ್ಟಣದ ಪೊಲೀಸ್ ವಸತಿ ಗೃಹದ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ, ರಾತ್ರಿ ಸುಮಾರು 9.45ರ ಸಮಯದಲ್ಲಿ ಮೈಸೂರಿಗೆ ತೆರಳುವಾಗ ಎದುರುಗಡೆ ಅತಿ ವೇಗದಿಂದ ಬಂದ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದಾಗ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಕೀರ್ತಿಕುಮಾರ್ ಬನ್ನೂರು ಸೆಸ್ಕ್ ಕಚೇರಿಯಲ್ಲಿ ಎಇ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ತಿಂಗಳಷ್ಟೇ ನಂಜನಗೂಡು ಪಟ್ಟಣ ಪೊಲೀಸೊಬ್ಬರ ಪುತ್ರಿಯೊಡನೆ ನಿಶ್ಚಿತಾರ್ಥ ನಡೆದಿದ್ದು, ಜೂ.22ರಂದು ಮೈಸೂರಿನಲ್ಲಿ ವಿವಾಹ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ. ಹೊಸ ಬಾಳಿಗೆ ಕಾಲಿಡುವ ಮುನ್ನವೇ ಮೃತಪಟ್ಟಿದ್ದರಿಂದ, ಎರಡು ಕುಟುಂಬಗಳಲ್ಲಿ ದುಃಖ ಮಡುಗಟ್ಟಿತ್ತು. ಮದುವೆ ಸಿದ್ಧತೆಯಲ್ಲಿ ತೊಡಗಿದ್ದವರು ಈ ಘಟನೆಯಿಂದ ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಎಎಸ್ಪಿ ಡಾ.ಪಿ. ರಾಜಾ, ಸರ್ಕಲ್ ಇನ್ಸ್ಪೆಕ್ಟರ್ ರಘು, ಎಸ್ಐ ರವಿಶಂಕರ್ ಸ್ಥಳಕ್ಕೆ ಭೇಟಿ ನೀಡಿ ವಾಹನ ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ನಂಜನಗೂಡು ಸೆಸ್ಕ್ ಕಚೇರಿಯಲ್ಲಿ ಎಇಇ ಆನಂದ್, ಗುರುರಾಜ್, ಸೆಸ್ಕ್ ಸಿಬ್ಬಂದಿ ಎರಡು ನಿಮಿಷ ಮೌನಾಚರಿಸಿ, ಗೌರವ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

