ಸಿದ್ದಪ್ಪಾಜಿ ಪಾದ ಪ್ರತಿಷ್ಠಾಪನೆ 14ರಿಂದ
ಮೈಸೂರು: ನಗರದ ಜಯನಗರ ಸಮೀಪದಲ್ಲಿರುವ ಚಿಕ್ಕಹರದನಹಳ್ಳಿ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಆ.14 ಮತ್ತು 15 ರಂದು ಸಿದ್ದಪ್ಪಾಜಿ ಪಾದ ಪ್ರತಿಷ್ಠಾಪನಾ ಸಮಾರಂಭ ನಡೆಯಲಿದೆ. ಆ.14ರ ಸಂಜೆ 6.30ಕ್ಕೆ ಗಣಪತಿ ಪೂಜೆ, ಪುಣ್ಯಾಹ, ವಾಸ್ತು ಹೋಮ, ದಾನ್ಯದವಸ, ಪಂಚದ್ರವ್ಯ ಪೂಜೆ ಜರಗಲಿದೆ. ಆ.15ರ ಬೆಳಗ್ಗೆ 7ಕ್ಕೆ ಗಣಪತಿ ಪೂಜೆ, ಕಳಸಾರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿ, ಪಂಚಾಮೃತ ಅಭಿಷೇಕ, ಅಲಂಕಾರ ನಂತರ ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ ನೆರವೇರಲಿದೆ. ಈ ಪೂಜಾ ಮಹೋತ್ಸವದಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಚಿಕ್ಕಹರದನಹಳ್ಳಿ ನಿವಾಸಿಗಳು ಕೋರಿದ್ದಾರೆ.
ದಸರಾ ಉದ್ಘಾಟನೆಗೆ ಕಾರ್ನಾಡ: ಸ್ವಾಗತ
ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಉದ್ಘಾಟನೆಗೆ ಸಮಸಮಾಜ ಚಿಂತಕ, ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸುವ ರಾಜ್ಯ ಸರ್ಕಾರದ ತೀರ್ಮಾನವನ್ನು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ. ರಾಜು ಸ್ವಾಗತಿಸಿದ್ದಾರೆ. ಕೆಲವು ಪಟ್ಟಭದ್ರ ರಾಜಕಾರಣಿಗಳು ಇವರ ಆಹ್ವಾನಕ್ಕೆ ಅಡ್ಡಗಾಲು ಹಾಕುವ ಹುನ್ನಾರ ನಡೆಸಿ ಡಾ.ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸುವಂತೆ ಒತ್ತಡ ಹೇರುತ್ತಿರುವುದು ಖಂಡನಿಯ. ದಸರಾ ವಿಶ್ವವಿಖ್ಯಾತಿ ಪಡೆದಿದ್ದು, ಎಲ್ಲ ಧರ್ಮದವರು ಭಾಗವಹಿಸುವ ದಸರಾವನ್ನು ಜಾತ್ಯತೀತ ಮನೋಭಾವದವರೆ ಉದ್ಘಾಟಿಸಿದರೆ ಗೌರವ ಎಂದು ತಿಳಿಸಿದ್ದಾರೆ. ಕ್ಷುಲ್ಲಕ ರಾಜಕಾರಣಿಗಳು ಕೀಳು ಮಟ್ಟದಲ್ಲಿ ಯೋಚಿಸದೆ ನಾಡಿನ ಹಿರಿಮೆ ಸಾರುವ ದಸರಾ ವಿಘ್ನಕ್ಕೆ ಕೈ ಹಾಕದೆ ನಾಡಿನ ಮರ್ಯಾದೆ ಕಾಪಾಡಬೇಕು. ಇಂತಹ ಕ್ಷುಲ್ಲಕ ರಾಜಕಾರಣಿಗಳ ಮಾತಿಗೆ ಕಿವಿಗೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ರೇಖಾಗೆ ಡಾಕ್ಟರೇಟ್
ಮೈಸೂರು: ಡಾ.ವೈ,ಎನ್. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಎ.ರೇಖಾ ಅವರು ಮೃಸೂರು ನಗರದ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಲ್ಲಿ ಬಹು ಬುದ್ಧಿವಂತಿಕೆ, ಸೃಜನಶೀಲತೆ ಮತ್ತು ಸಾಧನೆ ಸ್ಫೂರ್ತಿ- ಒಂದು ಅಧ್ಯಯನ ಕುರಿತ ಸಾದರಪಡಿಸಿದ ಮಾನವಶಾಸ್ತ್ರ ವಿಷಯದ ಮಹಾಪ್ರಬಂಧವನ್ನು ಮೈಸೂರು ವಿವಿ ಪಿಎಚ್.ಡಿ ಪದವಿಗೆ ಅಂಗಿಕರಿಸಿದೆ.
ಕಟ್ಟಡ ಉದ್ಘಾಟನೆ ಇಂದು
ಮೈಸೂರು: ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್, ಎಲೆಕ್ಟ್ರಿಕಲ್ ವಿಭಾಗದ ಕಟ್ಟಡದ ಉದ್ಘಾಟನಾ ಸಮಾರಂಭ ಆ.4 ರಂದು ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಡಾ. ಬಸವರಾಜ್ ಹೇಳಿದರು. ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಲ್. ಅರುಣ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ವಾಸು, ಸಾ.ರಾ. ಮಹೇಶ್, ಗೋ. ಮಧುಸೂದನ್, ಡಿಸಿ ಎಸ್. ಪಾಲಯ್ಯ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಬಂಧ ಸ್ಪರ್ಧೆ
ಮೈಸೂರು: ಜಿಎಸ್ಎಸ್ ಯೋಗ ಸಂಶೋಧನಾ ಪ್ರತಿಷ್ಠಾನವು ರಕ್ಷಾಬಂಧನ ಅಂಗವಾಗಿ ನಗರದ ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ. ರಕ್ಷಾಬಂಧನ ರಾಷ್ಟ್ರೀಯ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ದಾರಿ ಎಂಬ ವಿಷಯ ಕುರಿತು ಕನ್ನಡ ಅಥವಾ ಇಂಗ್ಲಿಷ್ನಲ್ಲಿ 500 ಪದಗಳಿಗೆ ಮೀರದಂತೆ ಪ್ರಬಂಧವನ್ನು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೆ ರಚಿಸಬಹುದು. ಕೌಟಿಲ್ಯ ವಿದ್ಯಾಲಯ, ನಂ.9 1, 13ನೇ ಮುಖ್ಯರಸ್ತೆ, ಜೆ ಬ್ಲಾಕ್, ಕನಕದಾಸನಗರ, ದಟ್ಟಗಳ್ಳಿ 3ನೇ ಹಂತ, ಮೈಸೂರು ಇಲ್ಲಿಗೆ ತಲುಪಿಸಬಹುದು.
ಪರಿಶ್ರಮವೇ ಸಾಧನೆ ಮಾರ್ಗ: ಗುಂಡಪ್ಪಗೌಡ
ಮೈಸೂರು: ಪರಿಶ್ರಮ ವಹಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಹೇಳಿದರು. ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಸಂಸ್ಥೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಸಂಸ್ಥೆ ಕಟ್ಟಿ ಬೆಳೆಸಬೇಕಾದರೆ ಹಲವು ಮಹನೀಯರ ಸೇವೆ ಮತ್ತು ಪರಿಶ್ರಮ ಇರುತ್ತದೆ. ಅಂತೆಯೇ ಈ ಸಂಸ್ಥೆಯೂ ಬೆಳೆದು ಬಂದಿದೆ. ಅದೇ ರೀತಿ ಉತ್ತಮ ಸಾಧನೆ ಮಾಡಬೇಕಾದರೆ ಶ್ರದ್ಧೆ ಹಾಗೂ ಪರಿಶ್ರಮ ವಹಿಸಿದಾಗ ಯಶಸ್ಸು ಸಾಧ್ಯ. ಈ ದಿಸೆಯಲ್ಲಿ ಕಷ್ಟಪಟ್ಟು ಪದವಿ ಗಳಿಸಿ ಬದುಕು ರೂಪಿಸಿಕೊಳ್ಳಬೇಕು ಎಂದ ಅವರು ಆಶಿಸಿದರು. ವಿಟಿಯುನ ರ್ಯಾಂಕ್ ವಿಜೇತರು ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ವರ್ಷಿಂ ಅಹಮದ್ ಹಾಗೂ ಪೂಜಾ ನಾಯಕ್ ತಮ್ಮ ಶಿಕ್ಷಣದ ಸಾಧನೆ ಕುರಿತು ಮಾತನಾಡಿ ನೂತನ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ವರದಿ ಮಂಡಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ.ವಿಶ್ವನಾಥ್ ಸ್ವಾಗತಿಸಿದರು. ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಹಾಗೂ ವಿವಿಧ ವಿಭಾಗಳ ಮುಖ್ಯಸ್ಥರು ಇದ್ದರು.
ಮಹದೇಶ್ವರ ಪ್ರಾಧಿಕಾರ ರಚನೆ: ಅಭಿನಂದನೆ
ಮೈಸೂರು: ಮಲೆಮಹದೇಶ್ವರ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಸರ್ಕ್ಯೂಟ್ಗೆ ಅನುಮತಿ ನೀಡಿದ ರಾಜ್ಯ ಸರ್ಕಾರಕ್ಕೆ ಮಲೆಮಹದೇಶ್ವರ ಜಯಂತಿ ಮಹೋತ್ಸವ ಸಮಿತಿಯು ಅಭಿನಂದನೆ ಸಲ್ಲಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತು ಪ್ರಾಧಿಕಾರದ ರಚನೆಗೆ ಶ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಎಸ್. ಮಹದೇವಪ್ರಸಾದ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ವಿ. ಸೋಮಣ್ಣ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಕಾಗಿನೆಲೆ ಕ್ಷೇತ್ರದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಾಲೂರು ಮಠದ ಶ್ರೀ ಗುರುಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿಗಳನ್ನು ಸಮಿತಿಯ ಪದಾಧಿಕಾರಿಗಳಾದ ಎಚ್. ಗಂಗಾಧರನ್, ಡಿ. ಮಾದೇಗೌಡ, ಸಿ.ಪಿ. ತಮ್ಮಣ್ಣ ಅಭಿನಂದಿಸಿದ್ದಾರೆ.
ಭವಿಷ್ಯ ನಿಧಿ ವಿಶೇಷ ವಸೂಲಾತಿ ಆರಂಭ
ಮೈಸೂರು: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ಆ. 31 ರವರೆಗೆ ವಿಶೇಷ ವಸೂಲಾತಿ ಪ್ರಕ್ರಿಯೆ ಹಮ್ಮಿಕೊಂಡಿದೆ. ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಮಾಲೀಕರು ಬಾಕಿ ಇರುವ ವಂತಿಗೆಯನ್ನು ಪಾವತಿಸಬೇಕು. ತಪ್ಪಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕ್ಷೇತ್ರ ಭವಿಷ್ಯನಿಧಿ ಆಯುಕ್ತ ನವೀನ್ಕುಮಾರ್ ಖನೋಜಿಯಾ ಎಚ್ಚರಿಸಿದ್ದಾರೆ.
ಬಿ.ಪಿ.ಇಡಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಮೈಸೂರು: ಮೈಸೂರು ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದಲ್ಲಿ ಬಿ.ಪಿ.ಇಡಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆ.4 ರಿಂದ 12 ರವರೆಗೆ ವಿಶ್ವವಿದ್ಯಾನಿಲಯದ ಡಿಡಿಠಣಣಣಢಿಢಿಢಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿಣ ವೆಬ್ಸೈಟ್ನಿಂದ ಪ್ರವೇಶಾತಿಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ಆಡಳಿತಾಧಿಕಾರಿ ಕಚೇರಿ, ಸೆನೆಟ್ ಭವನ, ಮಾನಸಗಂಗೋತ್ರಿ, ಮೈಸೂರು ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಧ್ಯಕ್ಷರು, ದೈಹಿಕ ಶಿಕ್ಷಣ ಮತ್ತು ಕ್ರೀ ಡಾ ವಿಜ್ಞಾನ ಅಧ್ಯಯನ ವಿಭಾಗ, ಸ್ಪೋರ್ಟ್ಸ್ ಪೆವಿಲಿಯನ್, ಮೈಸೂರು ಇಲ್ಲಿಗೆ ಆ.12 ರೊಳಗಾಗಿ ಸಲ್ಲಿಸಬೇಕು ಎಂದು ಮೈಸೂರು ವಿವಿ ಕುಲಸಚಿವರು ತಿಳಿಸಿದ್ದಾರೆ.
ಲೆಕ್ಕಪರಿಶೋಧನೆ ಕುರಿತು ನಾಳೆ ವಿಚಾರ ಸಂಕಿರಣ
ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ಆ.5ರ ಬೆಳಗ್ಗೆ 10ಕ್ಕೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ಆಡಳಿತಾತ್ಮಕ ವಿಷಯ ಮತ್ತು ಲೆಕ್ಕಪರಿಶೋಧನೆ ಕುರಿತು ವಿಚಾರಸಂಕಿರಣ ನಡೆಯಲಿದೆ. ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ.ಟಿ.ಎನ್. ಪ್ರಭಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ಪ್ರಾದೇಶಿಕ ವಲಯದ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

