ಮೈಸೂರು

ವಿಶ್ವನಾಥ್, ಮಂಜುನಾಥ್ ವಿರುದ್ಧ ಕ್ರಮಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಫೆ. 7
ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬಾಡೂಟ ನಡೆಸುವ ಮೂಲಕ ಕಾನೂನು ಉಲ್ಲಂಘಿಸಿರುವ ಸಂಸದ ಎಚ್. ವಿಶ್ವನಾಥ್ ಹಾಗೂ ಶಾಸಕ ಎಚ್.ಪಿ. ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ವಕೀಲ ಪುಟ್ಟರಾಜು ಆಗ್ರಹಿಸಿದ್ದಾರೆ.
ಹುಣಸೂರು ತಾಲೂಕು ಹನಗೂಡು ಹೋಬಳಿಗೆ ಸೇರಿರುವ ಕಚುವಿನಹಳ್ಳಿ ಗ್ರಾಮ ಮೀಸಲು ಅರಣ್ಯ ಪ್ರದೇಶದಲ್ಲಿ ಫೆ. 4 ರಂದು ಸಂಸದ ಎಚ್.  ವಿಶ್ವನಾಥ್ ಅವರು ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಕುರಿ, ಕೋಳಿ ಕಡಿದು ಮಾಸದಡಿಗೆ ಮಾಡಿ ಅರಣ್ಯ ನೀತಿ ಉಲ್ಲಂಘಿಸಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅರಣ್ಯ ಇಲಾಖೆ ಅನುಮತಿ ಪಡೆಯದೆ ಸಂರಕ್ಷಿತ ಅರಣ್ಯದೊಳಗೆ ಅಕ್ರಮ ಪ್ರವೇಶಿಸಿರುವ ಎಚ್. ವಿಶ್ವನಾಥ್ ಅವರು ಚುನಾವಣೆಯ ಹರಿಕೆ ತೀರಿಸುವ ಸಲುವಾಗಿ ಅಲ್ಲಿನ ಹಂದಿಕೆರೆ ಚೌಡಮ್ಮ ದೇವರಿಗೆ ಕೋಳಿ ಮತ್ತು ಕುರಿಬಲಿ ನೀಡಿದ್ದಾರೆ. 5 ಸಾವಿರ ಮಂದಿ ಕಾರ್ಯಕರ್ತರ ಸಮಾವೇಶ ನಡೆಸಿ, ಬಾಡೂಟ ಹಾಗೂ ಮದ್ಯಸೇವನೆಗೆ ಕಾರಣರಾಗಿದ್ದಾರೆ. ನೂರಾರು ವಾಹನಗಳಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗಿದೆ. ನಿಷೇಧಿತ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಸಿ ಪರಿಸರವನ್ನು ಕಲುಷಿತಗೊಳಿಸಿದ್ದಾರೆ ಎಂದು ಅವರು ದೂರಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಕಲಂ 27 ರಲ್ಲಿ ಯಾವುದೇ ವ್ಯಕ್ತಿ ಸಂರಕ್ಷಿತ ಪ್ರದೇಶವನ್ನು ಪ್ರವೇಶ ಮಾಡಬಾರದು ಎಂದಿದ್ದರೆ,  ಕಲಂ 51 ರ ಪ್ರಕಾರ ಸಂರಕ್ಷಿತ ಮತ್ತು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ನಿಷೇಧ ಉಲ್ಲಂಘಿಸಿದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದಿದೆ. ಆದರೂ ಈವರೆಗೂ ನಿಷೇಧಿತ ಅರಣ್ಯ ಪ್ರದೇಶ ಪ್ರವೇಶಿಸಿದವರ  ವಿರುದ್ಧ ಕಾನೂನು ಕ್ರಮಕ್ಕೆ ಯಾವ ಅರಣ್ಯಾಧಿಕಾರಿ ಮುಂದಾಗಿಲ್ಲ ಎಂದರು. ಈ ಸಂಬಂಧ ಮುಖ್ಯಮಂತ್ರಿ. ಅರಣ್ಯ ಸಚಿವರು,  ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ಜಿಲ್ಲಾಧಿಕಾರಿ, ಹುಲಿ ಯೋಜನೆ ನಿರ್ದೇಶಕರು,  ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಅಂಚೆ ಮೂಲಕ ದೂರು ಸಲ್ಲಿಸಲಾಗಿದೆ. ಆದ್ದರಿಂದ  ಸಂಸದ ಎಚ್. ವಿಶ್ವನಾಥ್ ಹಾಗೂ ಶಾಸಕ ಎಚ್.ಪಿ. ಮಂಜುನಾಥ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಅರಣ್ಯ ಸಚಿವರಾಗಿ, ಶಿಕ್ಷಣ ಸಚಿವರಾಗಿ ಕಾನೂನು ಅರಿವು ಹೊಂದಿರುವ ವಿಶ್ವನಾಥ್ ಅವರು ಮೂಢ ನಂಬಿಕೆ ಬಗ್ಗೆ ಭಾಷಣ ಮಾಡುತ್ತಾರೆ. ಪುಸ್ತಕ ಬರೆದಿರುವ ಸಾಹಿತಿಯೂ ಆಗಿದ್ದಾರೆ. ಇಂತವರು ಸಮಾಜಕ್ಕೆ ಮಾದರಿಯಾಗಿರಬೇಕು. ಇವರ ವಿರುದ್ಧ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮಕ್ಕೂ ಮುಂದಾಗಿಲ್ಲ. ಆದ್ದರಿಂದ ಸೋಮವಾರದೊಳಗೆ ರಾಜ್ಯ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.  ಹುಣಸೂರು ಕನ್ನಡ ಬಳಗದ ಪ್ರಧಾನ ಕಾರ್ಯದರ್ಶಿ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.