ಮೈಸೂರು

ಸರ್ಕಾರಿ ಬಸ್-ಬೈಕ್ ಡಿಕ್ಕಿ: ಇಬ್ಬರ ಸಾವು

Published On :

ಕೆ.ಆರ್. ನಗರ: ಬೈಕ್ ಮತ್ತು ಸಾರಿಗೆ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ತಾಲೂಕಿನ ಶ್ರೀರಾಮಪುರ ಗ್ರಾಮದ ಬಳಿ  ಭಾನುವಾರ ಜರುಗಿದೆ.
ಸಿದ್ದಾಪುರ ಗ್ರಾಮದ ಕೃಷ್ಣೇಗೌಡ ಎಂಬವರ ಪುತ್ರ ಮಂಜುನಾಥ್ (35) ಮತ್ತು ಚನ್ನಪಟ್ಟಣದ ಅಪ್ಪಗೆರೆ ಗ್ರಾಮದ ಕೆಂಡದಾಸಯ್ಯ ಎಂಬವರ ಪುತ್ರ ರಮೇಶ್ (33) ಮೃತಪಟ್ಟ  ದುರ್ದೈವಿಗಳು. ಇವರು ಮೈಸೂರಿನ ವಿಪ್ರೋ ಸಂಸ್ಥೆಯ ಉದ್ಯೋಗಿಗಳು.
ಚುಂಚನಕಟ್ಟೆಯಲ್ಲಿ ಪರಿಚಯದವರ ಮದುವೆಗೆ ಆಗಮಿಸಿ, ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಕೆ.ಆರ್. ನಗರದ ಕಡೆಯಿಂದ  ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದಾಗ ಈ ಘಟನೆ ನಡೆದಿದೆ.
ಅಪಘಾತದ ತೀವ್ರತೆ: ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಮೃತಪಟ್ಟವರು ಘಟನೆ ನಡೆದ ಸ್ಥಳದಿಂದ ಸುಮಾರು 15 ಅಡಿ ದೂರಕ್ಕೆ ಎಸೆಯಲ್ಪಟ್ಟಿದೆ. ಮೃತನ ಒಬ್ಬನ ತಲೆ ಒಡೆದು ಮೆದುಳು ರಸ್ತೆಯ ಮಧ್ಯಭಾಗದಲ್ಲಿ  ಬಿದಿದ್ದು ಅಪಘಾತದ ತೀವ್ರತೆ ತೋರಿಸಿಸುತ್ತಿತ್ತು.
ಅಪಘಾತವಾಗುತ್ತಿದ್ದಂತೆಯೇ ಅಪಘಾತಕ್ಕೆ ಕಾರಣವಾದ ಬಸ್‌ನ್ನು ಪೊಲೀಸರು ಚುಂಚನಕಟ್ಟೆ ಠಾಣೆಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರು ಮತ್ತು ಮೃತನ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿ ಬಸ್ ಸ್ಥಳಕ್ಕೆ ತರುವಂತೆ ಡಿಪೋ ವ್ಯವಸ್ಥಾಪಕ ಕೃಷ್ಣಮೂರ್ತಿ ಮತ್ತು ಎಸ್‌ಐಗಳಾದ ಷಣ್ಮುಗಂ, ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡು, ಮತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟಿಸಿದರು.
ಮೈಸೂರು ಗ್ರಾಮಾಂತರ ಡಿವೈಎಸ್ಪಿ ಶ್ರೀಹರಿಬರಗೂರು ಮತ್ತು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.  
ಇದರಿಂದ ಮೂರು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ಬದಲಿ ರಸ್ತೆಯಲ್ಲಿ ಚಲಿಸಿದವು. ಘಟನೆಯ ಸುದ್ದಿ ತಿಳಿದು ಮೈಸೂರಿನಿಂದ ಸ್ಥಳಕ್ಕೆ ಆಗಮಿಸಿದ ಶಾಸಕ ಸಾ.ರಾ. ಮಹೇಶ್ ಬಸ್‌ನ್ನು ಘಟನಾ ಸ್ಥಳದಿಂದ ಚುಂಚನಕಟ್ಟೆ ಪೊಲೀಸ್ ಠಾಣೆಗೆ  ಕಳುಹಿಸಿದ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ, ಅಪಘಾತಕ್ಕೆ ಕಾರಣವಾದ ಬಸ್‌ನ್ನು ಮತ್ತೆ ಸ್ಥಳಕ್ಕೆ ತಂದು ಪೊಲೀಸರಿಂದ ಮಹಜರು ನಡೆಸಿದರು.
ನಂತರ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ ಶಾಸಕರು, ಮೃತರ ಕುಟುಂಬಕ್ಕೆ ಕೆ.ಆರ್. ನಗರ ಬಸ್ ಡಿಪೋ ಘಟಕದಿಂದ ತಲಾ ರು. 50 ಸಾವಿರ ಪರಿಹಾರ ಕೊಡಿಸುವ ಭರವಸೆ ನೀಡಿ, ಸ್ಥಳದಲ್ಲಿಯೇ ರು.15 ಸಾವಿರ ಗಳ ನೀಡಿ, ಸರ್ಕಾರದ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡದ ನಂತರ ಪ್ರತಿಭಟನಾಕರರು ಮತ್ತು ಸಂಬಂಧಿಕರು ಶವಗಳನ್ನು  ಕೆ.ಆರ್. ನಗರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಸಮ್ಮತಿಸಿದರು. ಈ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.