ಸಚಿವ ಡಾ. ಮಹದೇವಪ್ಪ ಪುತ್ರನಿಂದ ಮರಳು ದಂಧೆ
ಮೈಸೂರು: ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಅಕ್ರಮ ಮರಳು ದಂಧೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ಮೈಸೂರು ನಗರಾಧ್ಯಕ್ಷ ರಾಜಣ್ಣ ಆರೋಪಿಸಿದರು.
ನದಿಪಾತ್ರದಿಂದ ಮರಳು ತೆಗೆಯಲು ಅಧಿಕೃತವಾಗಿ ಟೆಂಡರ್ ಪಡೆದು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಇನ್ನೂ ಕೆಲವರು ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ. ಇದರಲ್ಲಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಮಕ್ಕಳು ಸಹ ಭಾಗಿಯಾಗಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಈ ಮರಳು ದಂಧೆಯಿಂದ ನಗರ ಮತ್ತು ಜಿಲ್ಲೆಯ ಬಡವರಿಗೆ ಸುಲಭವಾಗಿ ಮರಳು ದೊರೆಯುತ್ತಿಲ್ಲ. ಮರಳಿಗಾಗಿ ಹೆಚ್ಚಿನ ಹಣ ನೀಡುವ ಪರಿಸ್ಥಿತಿ ಎದುರಾಗಿದೆ. ಈ ಸಂಬಂಧ ಸೂಕ್ತ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಟೀಕೆಯೊಂದೇ ಸಾಧನೆ: ನಗರಪಾಲಿಕೆ ಮಾಜಿ ಉಪ ಮೇಯರ್ ಟಿ. ದೇವರಾಜ್ ಮಾತನಾಡಿ, ಸಂಸದ ಎಚ್. ವಿಶ್ವನಾಥ್ ಅವರು ಟೀಕೆ ಮಾಡುತ್ತಲೆ ಕಾಲಹರಣ ಮಾಡಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಯೇ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಮೈಸೂರಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಕಿಡಿ ಕಾರಿದರು.
ನರ್ಮ್ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಅಕ್ರಮ ನಡೆದಿದೆ. ಫೋಟೋ ಬದಲಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಪಡಿತರ ಚೀಟಿ ನೀಡುವುದರಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸಂಬಂಧಪಟ್ಟವರು ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಗರಪಾಲಿಕೆ ಸದಸ್ಯರಾದ ಬಿ.ಎಂ. ನಟರಾಜ್, ಫೈರೋಜ್ ಖಾನ್, ಮುಖಂಡರಾದ ಎಸ್.ಬಿ.ಎಂ. ಮಂಜು, ಮುದ್ದುರಾಜು ಇದ್ದರು.
ಹರಕೆ ನೆಪದಲ್ಲಿ ಸಂಸದರಿಂದ ಪ್ರಾಣಿಗಳ ಬಲಿ
ಸಂಸದ ಎಚ್. ವಿಶ್ವನಾಥ್ ಅವರು ಅರಣ್ಯ ಪ್ರದೇಶದಲ್ಲಿ ಸಾವಿರಾರು ಜನಕ್ಕೆ ಬಾಡೂಟ ಹಾಕಿಸುವ ಮೂಲಕ ತಮ್ಮ ಹರಕೆ ತೀರಿಸಿದ್ದಾರೆ. ಚುನಾವಣೆಗೂ ಮುನ್ನವೇ ಮಾಡಿರುವುದು ಅನುಮಾನ ಮೂಡಿಸಿದೆ. ಚುನಾವಣೆ ಗೆದ್ದಾಗಲೇ ಹರಕೆ ತೀರಿಸಬಹುದಿತ್ತು. ಚುನಾವಣೆ ಹತ್ತಿರವಾಗುತ್ತಿರುವಾಗ ಹರಕೆಯ ಹೆಸರಿನಲ್ಲಿ ಬಾಡೂಟ ಹಾಕಿಸಿದ್ದಾರೆ. ಬಾಡೂಟಕ್ಕೆ ಯಾವ್ಯಾವ ಪ್ರಾಣಿ ಬಲಿ ನೀಡಿದ್ದಾರೋ ಗೊತ್ತಿಲ್ಲ ಎಂದರು. ಅರಣ್ಯ ಪ್ರದೇಶದಲ್ಲಿ ಬಾಡೂಟ ವ್ಯವಸ್ಥೆ ಮಾಡಿಸಲು ಅವಕಾಶ ನೀಡಿದ ಅರಣ್ಯಾಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಮರಳು ದಂಧೆ, ಕಾಡಿನಲ್ಲಿ ಬಾಡೂಟ ಸೇರಿದಂತೆ ಇತರೆ ಅಂಶಗಳನ್ನು ಮುಂದಿಟ್ಟುಕೊಂಡು ಜೆಡಿಎಸ್ ವತಿಯಿಂದ ಹೋರಾಟ ನಡೆಸುವುದಾಗಿ ಅವರು ಹೇಳಿದರು. ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಶಾಸಕ ರಾದ ಎಸ್. ಚಿಕ್ಕಮಾದು, ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಸಂದೇಶ್ ನಾಗರಾಜ್ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷದ ವರಿಷ್ಠರು ಅಭ್ಯರ್ಥಿಯನ್ನು ಆಯ್ಕೆ ಮಾಡುವರು ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

