ಮೈಸೂರು

ಅಕ್ರಮ ಪರವಾನಗಿ ನೀಡುವಾಗ ಸಿಕ್ಕಿಬಿದ್ದರು!

Published On :

ಟಿ. ನರಸೀಪುರ: ಮರಳು ಸಾಗಾಣಿಕೆ ಪರ್ಮಿಟ್ ವಿತರಣೆಯ ನಿಗದಿತ ಸಮಯ ಮುಗಿದರೂ ಅಕ್ರಮವಾಗಿ ಡಿಡಿ ಪಡೆದು, ಪರ್ಮಿಟ್ ವಿತರಣೆ ಮಾಡುತ್ತಿದ್ದ ಗುಮಾಸ್ತ ಹಾಗೂ ಸಿಬ್ಬಂದಿ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಮಂಗಳವಾರ ಸಂಜೆ ಪಟ್ಟಣದ ಲೋಕೋಪಯೋಗಿ ಕಚೇರಿಯಲ್ಲಿ ಜರುಗಿದೆ.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಕಚೇರಿಯ ಕೊಠಡಿಯೊಂದರಲ್ಲಿ ಮರಳು ಸಾಗಾಣಿಕೆ ಪರ್ಮಿಟ್ ಅನ್ನು ರಹಸ್ಯವಾಗಿ ಸಿದ್ಧಮಾಡಿಕೊಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್ಐ ಕೆ.ಆರ್. ಗೋಪಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ, ಡಿಡಿ ಪಡೆದು ಕಚೇರಿಯೊಳಗೆ ಗುಪ್ತವಾಗಿ ಪರ್ಮಿಟ್ ನೀಡಲು ಅಣಿ ಮಾಡಿಕೊಳ್ಳುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಜೇಮ್ಸ್ ರಾಜೇ ಅರಸು, ಬೆರಳಚ್ಚುಗಾರ್ತಿ ರೇಖಾ ಸಿಕ್ಕಿಬಿದ್ದಿದ್ದಾರೆ. ಸಿದ್ಧಪಡಿಸಿಡಲಾಗಿದ್ದ ಡಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ದಾಳಿಯಿಂದಾಗಿ ಲೋಕೋಪಯೋಗಿ ಇಲಾಖೆಯಲ್ಲಿ ಮರಳು ಪರ್ಮಿಟ್ ವಿತರಣೆಯಲ್ಲಿ ನಡೆಯುತ್ತಿರುವ ದಂಧೆ ಪತ್ತೆಯಾಯಿತು. ಕಚೇರಿ ಸಿಬ್ಬಂದಿ ಹಲವರಿಂದ ಹಣ ಪಡೆದು ಕಚೇರಿ ಕೆಲಸದ ಅವಧಿ ಮುಗಿದ ವೇಳೆಯಲ್ಲಿ ಪರ್ಮಿಟ್ ವಿತರಣೆ ಮಾಡುತ್ತಿದ್ದರು. ದಾಳಿ ಸಮಯದಲ್ಲಿ ಹಣ ಕೊಟ್ಟು ಅಕ್ರಮವಾಗಿ ಪರ್ಮಿಟ್ ಪಡೆಯಲು ನಿಂತಿದ್ದ ಲಾರಿ ಮಾಲೀಕರು ಪರಾರಿಯಾದರು.
ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲಿಯೇ ಕಾಳಸಂತೆಯ ವಸ್ತುವಿನಂತೆ ಹಣಕ್ಕಾಗಿ ಮರಳು ಸಾಗಾಣಿಕೆ ಪರ್ಮಿಟ್ ಬಿಕರಿಯಾಗುತ್ತಿದ್ದು, ಪ್ರತಿನಿತ್ಯ ವಿತರಣೆ ಮಾಡುವ ಪರ್ಮಿಟ್ಗಳ ಸಂಖ್ಯೆಗೆ ಮಿತಿಯೇ ಇಲ್ಲದಂತಾಗಿದೆ. ಜಿಲ್ಲಾಡಳಿತ 200 ಪರ್ಮಿಟ್ ವಿತರಣೆ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಆದರೆ ನರಸೀಪುರ ಲೋಕೋಪಯೋಗಿ ಉಪ ವಿಭಾಗದ ಕಚೇರಿಯಲ್ಲಿ ಕಾಸಿಗಾಗಿ ಪ್ರತಿನಿತ್ಯ ಸುಮಾರು 400ಕ್ಕೂ ಹೆಚ್ಚು ಪರ್ಮಿಟ್ ಮುದ್ರಣ ಮಾಡಿ, ಲಾರಿ ಮಾಲೀಕರ ಸಂಘಟನೆ ಹಾಗೂ ರಾಜಕೀಯ ಮುಖಂಡರಿಗೂ ನೀಡಲಾಗುತ್ತಿದೆ.
ದಾಳಿಯ ವೇಳೆ ಎಸ್ಐ ಕೆ.ಆರ್.ಗೋಪಿಕೃಷ್ಣ  ಅವರು ಕಂಪ್ಯೂಟರ್ನಲ್ಲಿ ದಾಖಲಾಗಿರುವ ಪರ್ಮಿಟ್ ಮಾಹಿತಿ ಕೇಳಿದಾಗ ನೀಡಲು ಸಿಕ್ಕಿಬಿದ್ದ ಗುಮಾಸ್ತ ಜೇಮ್ಸ್ ಉತ್ತರಿಸಲು ತಡವರಿಸಿದರಲ್ಲದೆ, ಕಂಪ್ಯೂಟರ್ನ ವಿದ್ಯುತ್ ಸಂಪರ್ಕವನ್ನೇ ತುಂಡರಿಸಿದರು. ಕಚೇರಿ ಬೀಗ ಜಡಿದ ಪೊಲೀಸರು, ದಾಖಲೆಗಳನ್ನು ವಶಪಡಿಸಿಕೊಂಡು ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವುದಾಗಿ ತೆರಳಿದರು.
ಅನೇಕ ಲಾರಿ ಮಾಲೀಕರು ಹೊರಗಿನ ಊರುಗಳಿಂದ ಆಗಮಿಸಿ ಮರಳು ಸಾಗಾಣಿಕೆ ಪರ್ಮಿಟ್ ಪಡೆಯಲು ವಾರದಿಂದ ಕಾದು ನಿಂತಿದ್ದರಾದರೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿಯ ಅಕ್ರಮ ಚಟುವಟಿಕೆಯಿಂದ ಅವರಿಗೆ ಪರ್ಮಿಟ್ ಸಿಗುತ್ತಿರಲಿಲ್ಲ.
ಕಾರ್ಯಾಚರಣೆಯಲ್ಲಿ ಪೇದೆಗಳಾದ ಜವರಪ್ಪ, ಶ್ರೀನಿವಾಸ್, ಸುರೇಶ್ರಾವ್ ಇದ್ದರು.

ಉಕ್ಕಲಗೆರೆ ಅಚ್ಚುಕಟ್ಟಿಗೆ ನೀರು
ಟಿ. ನರಸೀಪುರ: ನಂಜಾಪುರ ಏತ ನೀರಾವರಿಯಿಂದ ನೇರವಾಗಿ ಉಕ್ಕಲಗೆರೆ ಗ್ರಾಮದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮು ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಘಟಕ ಯೋಜನೆ ಅನುದಾನ 49 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಂಜಾಪುರ ಏತ ನೀರಾವರಿ ಯೋಜನೆ ಕೊಳವೆ ಸಂಪರ್ಕವನ್ನು ದುರಸ್ತಿಗೊಳಿಸಿ ಉಕ್ಕಲಗೆರೆ ಗ್ರಾಮದ ಸುತ್ತಮುತ್ತಲಿನ ಭೂಮಿಯಲ್ಲಿ ಒಂದು ಫಸಲು ಬೆಳೆಯಲು ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮಾಜಿ ಶಾಸಕ ಎಸ್.ಕೃಷ್ಣಪ್ಪ, ತಾಪಂ ಅಧ್ಯಕ್ಷ ನಟರಾಜು, ಮುಖಂಡ ಸುನಿಲ್ಬೋಸ್, ರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೇಗೌಡ, ಎಪಿಎಂಸಿ ಅಧ್ಯಕ್ಷ ಎಂ.ರಾಜು, ಗ್ರಾಪಂ ಉಪಾಧ್ಯಕ್ಷ ಸಿ.ನಂಜುಂಡಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.