ಜನಪ್ರತಿನಿಧಿಗಳಿಗೆ ಕಾನೂನು ಅರಿವು ಅವಶ್ಯ
ಮೈಸೂರು: ಯಾವುದೇ ಜನಪ್ರತಿನಿಧಿಗೆ ಕಾನೂನು ಅರಿವು ಅವಶ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಸಾರ್ವಜನಿಕ ವೇದಿಕೆಯು ಎಂಜಿನಿಯರಗಳ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ವಕೀಲ ಬಿ. ದೊಡ್ಡವೀರೇಗೌಡ ಅವರ ನೆನಪಿನ ಕಾರ್ಯಕ್ರಮದಲ್ಲಿ ದಿವಂಗತರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡಿದರು.
ಶಾಸಕಾಂಗದಲ್ಲಿ ಕಾರ್ಯನಿರ್ವಹಿಸುವ ಶಾಸಕರಿಗಾಗಲಿ ಅಥವಾ ಸಂಸದರಿಗಾಗಲಿ ಯೋಜನೆಗಳನ್ನು ಜಾರಿಗೊಳಿಸುವಾಗ ಕಾನೂನಿನ ತಿಳಿವಳಿಕೆ ಇದ್ದರೆ ಸಹಕಾರಿಯಾಗಲಿದೆ. ನಾನು ಚಿಕ್ಕ ವಯಸ್ಸಿಗೆ ಲೋಕಸಭೆ ಪ್ರವೇಶಿಸಿದ ಸಂದರ್ಭದಲ್ಲಿ ಅಲ್ಲಿನ ಚರ್ಚೆಗಳನ್ನು ನೋಡಿದಾಗ ಕಾನೂನು ಓದಬೇಕಾಗಿತ್ತು ಎನಿಸಿದ್ದುಂಟು. ರಾಜಕಾರಣಿಗಳಿಗೆ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಇರುವಂಥವರಿಗೂ ಕಾನೂನು ಅರಿವು ಅವಶ್ಯಕ ಎಂದರು.ಹುಟ್ಟು ಆಕಸ್ಮಿಕ. ಸಾವು ಖಚಿತ. ಆದರೆ ಸತ್ತ ಎಲ್ಲಾ ವ್ಯಕ್ತಿಗಳನ್ನು ಸ್ಮರಿಸುವುದಿಲ್ಲ. ಸಮಾಜಕ್ಕೆ ಕೊಡುಗೆ ನೀಡಿದ ಕೆಲವೇ ಮಂದಿಯನ್ನು ನೆನಪಿಸಿಕೊಳ್ಳುತ್ತೇವೆ. ಅಂಥವರಲ್ಲಿ ದೊಡ್ಡವೀರೇಗೌಡರೂ ಒಬ್ಬರು. ವಕೀಲ ವೃತ್ತಿಯಲ್ಲಿ ಸಮಾಜಮುಖಿ ಚಿಂತನೆ ನಡೆಸುವ ಮೂಲಕ ಜನಾನುರಾಗಿದ್ದರು. ಅವರ ಅಲೋಚನೆ ಹಾಗೂ ದೂರದೃಷ್ಟಿ ಸಾಕಾರಗೊಳ್ಳಲಿ ಎಂದು ಆಶಿಸಿದರು.
ಅಪರೂಪದ ವ್ಯಕ್ತಿ: ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಮೈಸೂರು ನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಟ್ಟ ಕೀರ್ತಿ ಕಾನೂನು ಸಲಹೆಗಾರರಾಗಿದ್ದ ದೊಡ್ಡವೀರೇಗೌಡರಿಗೆ ಸಲ್ಲುತ್ತದೆ. ಕಕ್ಷಿದಾರರಿಗೆ ನ್ಯಾಯವನ್ನು ಒದಗಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ ಎಂದು ಸ್ಮರಿಸಿದರು.
ಸಂಸದ ಎಚ್. ವಿಶ್ವನಾಥ್, ಹಿರಿಯ ವಕೀಲ ಎಂ.ಎ. ಸಂಪತ್ ಅಯ್ಯಂಗಾರ್, ಕರ್ನಾಟಕ ವಕೀಲರ ಸಂಘದ ಸದಸ್ಯರಾದ ಸಿ.ಅಪ್ಪಾಜಿಗೌಡ, ಸಿ.ಎಂ. ಜಗದೀಶ್ ಹಾಗೂ ಕಕ್ಷಿದಾರರಾದ ನಿಂಗೇಗೌಡ ಹಾಗೂ ಮಹದೇವಮ್ಮ ಅವರು ದಿವಂಗತರ ಕುರಿತು ಮಾತನಾಡಿದರು.
ಹೈಕೋರ್ಟ್ ನಿವೃತ್ತ ನ್ಯಾ.ಹಾಗೂ ಮಾಜಿ ಉಪಲೋಕಾಯುಕ್ತ ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಅಧ್ಯಕ್ಷ ಬಿ.ಪಿ. ಸುರೇಶ್, ಒಣಭೂಮಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಆರ್. ಮೋಹನ್ಕುಮಾರ್ ಇದ್ದರು. ವಕೀಲರು ಹಾಗೂ ದೊಡ್ಡವೀರೇಗೌಡರ ಕುಟುಂಬದ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

