ಮೈಸೂರು

ಪುಂಡರ ಹಾವಳಿ ತಪ್ಪಿಸಿ, ನೆಮ್ಮದಿ ಕಲ್ಪಿಸಿ

Published On :

ಮೈಸೂರು: ನಗರದಲ್ಲಿ ಸಂಜೆ ವೇಳೆಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಮನವಿ ಮಾಡಿದ್ದಾರೆ.
ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಭಾನುವಾರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಈ ಕೋರಿಕೆ ಸಲ್ಲಿಸಿದ್ದಾರೆ.
ಕೆ.ಆರ್. ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ, ಬಾರ್‌ಗಳನ್ನು ಸರಿಯಾದ ಸಮಯಕ್ಕೆ ಬಂದ್ ಮಾಡುತ್ತಿಲ್ಲ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಬಾರ್ ಮುಚ್ಚಿಸಿ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ನಿವಾಸಿಯೊಬ್ಬರು ಮನವಿ ಮಾಡಿದರು.
ಚಾಮುಂಡಿಬೆಟ್ಟದಲ್ಲಿರುವ ದೇವಸ್ಥಾನಕ್ಕೆ ಹೋಗುವಾಗ ಮತ್ತು ಬರುವಾಗ ಕೆಲವು ಕಡೆ ಪುಂಡರ ಹಾವಳಿ ಹೆಚ್ಚಾಗಿದೆ. ಪ್ರೇಮಿಗಳನ್ನು ಅಡ್ಡಗಟ್ಟಿ ದೋಚುತ್ತಿದ್ದಾರೆ. ಚಾಮುಂಡಿಬೆಟ್ಟಕ್ಕೆ ಗರುಡ ವಾಹನ ಗಸ್ತು ಹೆಚ್ಚಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ನಾಗರಿಕರೊಬ್ಬರು ಕೋರಿದರು.
ವಿದ್ಯಾರ್ಥಿನಿಯರಿಗೆ ಕೀಟಲೆ: ಅಗ್ರಹಾರ 101 ಗಣಪತಿ ದೇವಸ್ಥಾನದಿಂದ ನಂಜುಮಳಿಗೆ ವೃತ್ತದವರೆಗೆ ಇರುವ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡುವ ಮೂಲಕ ವಾಹನ ಚಾಲಕರು ಮತ್ತು ನಾಗರಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು. ಹಾಗೂ ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿನಿಯರನ್ನು ಕೀಟಲೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.
ಪ್ರಶ್ನಿಸುವವರ ವಿರುದ್ಧವೇ ಕಿಡಿ: ಸಾರ್ವಜನಿಕರ ಅಹವಾಲುಗಳನ್ನು ಕೇಳಿದ ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ಅವರು, ಪರಿಶೀಲಿಸಿ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು. ಕೆ.ಆರ್. ಠಾಣೆಯ ಇನ್ಸ್‌ಪೆಕ್ಟರ್ ಎಚ್. ಪರಶುರಾಮಪ್ಪ, ಎಸ್‌ಐ ಪಿ. ಗೌರಿಶಂಕರ್ ಮತ್ತು ಸಿಬ್ಬಂದಿ ಇದ್ದರು.
ವಿಜಯನಗರದ ಕೆಲವು ಭಾಗಗಳಲ್ಲಿ ಸಂಜೆ ವೇಳೆ ವಾಕಿಂಗ್ ಹೋಗುವಾಗ ಪುಂಡರು ಗುಂಪು ಕಟ್ಟಿಕೊಂಡು ತೊಂದರೆ ನೀಡುತ್ತಿದ್ದಾರೆ. ಕೆಲವರು ಮಹಿಳೆಯರನ್ನು ರೇಗಿಸುತ್ತಿದ್ದಾರೆ. ಇದನ್ನು ಪ್ರಶ್ನಿಸುವವರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಈ ಸಮಸ್ಯೆ ಪರಿಹರಿಸುವಂತೆ ನಾಗರಿಕರು ಕೋರಿದರು.
ಗಸ್ತು ಹೆಚ್ಚಳ: ಪುಂಡರ ಹಾವಳಿ ತಪ್ಪಿಸಲು ಸಂಜೆ ವೇಳೆ ಗಸ್ತು ಹೆಚ್ಚಿಸುವುದಾಗಿ ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಸಿ.ವಿ. ರವಿ ಭರವಸೆ ನೀಡಿದರು.
ಅಲ್ಲದೆ, ದೇವರಾಜ ಉಪ ವಿಭಾಗದ ದೇವರಾಜ, ಲಷ್ಕರ್, ನಜರ್‌ಬಾಜ್, ಉದಯಗಿರಿ ಠಾಣೆ, ನರಸಿಂಹರಾಜ ಉಪ ವಿಭಾಗದ ನರಸಿಂಹರಾಜ, ಮಂಡಿ, ವಿವಿ ಪುರಂ, ಮೇಟಗಳ್ಳಿ, ಜಯಲಕ್ಷ್ಮಿಪುರಂ, ಕೃಷ್ಣರಾಜ ಉಪ ವಿಭಾಗದ ಲಕ್ಷ್ಮಿಪುರಂ, ಅಶೋಕಪುರಂ, ವಿದ್ಯಾರಣ್ಯಪುರಂ, ಸರಸ್ವತಿಪುರಂ ಮತ್ತು ಕುವೆಂಪುನಗರ ಪೊಲೀಸ್ ಠಾಣೆಗಳಲ್ಲೂ ಸಹ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಯಿತು.
ಈ ಸಭೆಯಲ್ಲಿ ಹಾಜರಿದ್ದ ಇನ್ಸ್‌ಪೆಕ್ಟರ್, ಎಸ್‌ಐ ಮತ್ತು ಸಿಬ್ಬಂದಿ ಸಾರ್ವಜನಿಕರು ಅಹವಾಲುಗಳು ಸ್ವೀಕರಿಸಿ ಪರಿಹರಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.