ಆಸ್ತಿ ಅಧಿಕಾರಿಗಳ ಕಚೇರಿ ಆರಂಭ
ಕ.ಪ್ರ.ವಾರ್ತೆ ಮೈಸೂರು ಜ. 20
ನಗರ ಪಾಲಿಕೆ ಆಸ್ತಿಗಳ ಸಂರಕ್ಷಣೆಯ ಹಿತದೃಷ್ಟಿಯಿಂದ ವಲಯ ಕಚೇರಿ 6ರ ಆವರಣದಲ್ಲಿ ಆಸ್ತಿ ಅಧಿಕಾರಿಗಳ ಕಚೇರಿಯನ್ನು ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಬೈರಪ್ಪ ಸೋಮವಾರ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯಲ್ಲಿ ಇತ್ತೀಚೆಗೆ ಖಾತೆ ನೀಡುತ್ತಿಲ್ಲ. ಬದಲಿಗೆ ಕರ ಪಾವತಿ ಹೊಣೆಗಾರಿಕೆ ಎಂಬ ಪತ್ರ ನೀಡಲಾಗುತ್ತಿದೆ. ಇದಕ್ಕೆ ಸರ್ಕಾರದ ಆದೇಶ ಇಲ್ಲ. ಒಂದು ವೇಳೆ ಆದೇಶ ಇದ್ದರೆ ಆಯುಕ್ತರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪಾಲಿಕೆಯ ಈ ಕ್ರಮದಿಂದ ಅಕ್ರಮ ಮತ್ತು ಭೂ ಮಾಫಿಯಾ ನಡೆಯುತ್ತದೆ. ಕರಪಾವತಿ ಹೊಣೆಗಾರಿಕೆ ಪತ್ರದಲ್ಲಿ ನಮೂದಿಸುವ ಷರಾ (ಆಸ್ತಿ ವಿಷಯದಲ್ಲಿನ ಯಾವುದೆ ತಕರಾರು ಅಥವಾ ವ್ಯಾಜ್ಯಕ್ಕೆ ಪಾಲಿಕೆ ಹೊಣೆಯಲ್ಲ) ಪಾಲಿಕೆಯನ್ನು ಸಂರಕ್ಷಿಸುತ್ತದೆ. ಆದರೆ ಮುಗ್ಧರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಮಂಡ್ಯ, ಬೆಂಗಳೂರಿನಲ್ಲಿ ಖಾತೆ ನೀಡಲಾಗುತ್ತಿದೆ. ಆದರೆ ಮೈಸೂರಿನಲ್ಲಿ ಏಕೆ ನೀಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ನಗರದ ಮಾಲ್ ಆಫ್ ಮೈಸೂರು 80 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಮೊತ್ತವನ್ನು 4 ಹಂತದಲ್ಲಿ ಪಾವತಿಸಲು ಒಪ್ಪಿ, 20 ಲಕ್ಷ ನೀಡಿದೆ. ಅಂತೆಯೇ ವಸ್ತು ಪ್ರದರ್ಶನ ಪ್ರಾಧಿಕಾರ ಪಾವತಿಸಬೇಕಿದ್ದ 12 ಲಕ್ಷ ಪೈಕಿ, ಈಗ 5 ಲಕ್ಷ ಪಾವತಿಸಿದೆ. ಬಿಎಸ್ಎನ್ಎಲ್ ಸಂಸ್ಥೆಯು 17 ಲಕ್ಷ ತೆರಿಗೆ ಪಾವತಿಸಬೇಕಿದ್ದು, 15 ದಿನಗಳ ಕಾಲಾವಕಾಶ ನೀಡಲಾಗಿದೆ. ಕಳೆದ ಡಿಸೆಂಬರ್ನಿಂದ 7.50 ಕೋಟಿ ಸಂಗ್ರಹವಾಗಿದೆ. ಇನ್ನೂ ರು. 30 ಕೋಟಿ ಸಂಗ್ರಹ ಆಗಬೇಕಿದೆ ಎಂದರು.
ಆಸ್ತಿ ಕಚೇರಿ ಅಧಿಕಾರಿಯಾಗಿ ಬಿ.ಎಫ್. ತಳವಾರ್ ಅವರನ್ನು ನೇಮಿಸಲಾಗಿದೆ. ಮೈಸೂರಿನ ಮೊದಲ ಆಸ್ತಿ ಕಚೇರಿ ಇದಾಗಿದೆ ಎಂದರು. ಪಾಲಿಕೆ ಸದಸ್ಯ ಎಂ.ಕೆ. ಶಂಕರ್, ಕಂದಾಯ ಇಲಾಖೆಯ ಎಒ ಜಗದೀಶ್, ಪಾರ್ವತಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

