ಮೈಸೂರು

ಉದ್ಯಾನವನ, ಪಾಲಿಕೆ ಕಚೇರಿಗೆ ಸೋಲಾರ್ ಅಳವಡಿಕೆ

Published On :

- ಡಿ.ಎನ್. ಮಹೇಂದ್ರ
ಮೈಸೂರು: ಕೇಂದ್ರ ಸರ್ಕಾರದ ಮಾದರಿ ಸೋಲಾರ್ ನಗರ ಯೋಜನೆಯಡಿ ನಗರ ಪಾಲಿಕೆ ಕಚೇರಿ, ವಲಯ ಕಚೇರಿಗಳು ಮತ್ತು ಎಂಡಿಎ ಕಚೇರಿಗೆ ಸೋಲಾರ್ ಅಳವಡಿಸಲು ಪಾಲಿಕೆ ಮುಂದಾಗಿದೆ.
ಕೇಂದ್ರದ ಸೋಲಾರ್ ಮಿಷನ್ ರಾಜ್ಯದ ಮೈಸೂರು ಮತ್ತು ಹುಬ್ಬಳ್ಳಿ- ಧಾರವಾಡ ನಗರಗಳನ್ನು ಮಾದರಿ ಸೋಲಾರ್ ನಗರ ಯೋಜನೆ ವ್ಯಾಪ್ತಿಗೆ ಸೇರಿಸಿಕೊಂಡಿದೆ. 2012 ರಲ್ಲೇ ಈ ಯೋಜನೆಗೆ ಅನುಮತಿ ದೊರಕಿತಾದರೂ ಕೆಲಸ ಆರಂಭ ಆಗಿರುವುದು ಈಗ. ನಗರ ಪಾಲಿಕೆಯ ತನ್ನ ವ್ಯಾಪ್ತಿಯ ಕುಪ್ಪಣ್ಣ ಪಾರ್ಕ್, ಚಲುವಾಂಬ ಪಾರ್ಕ್, ನಗರ ಪಾಲಿಕೆ ಕಚೇರಿ, 9 ವಲಯ ಕಚೇರಿಗಳು ಮತ್ತು ಎಂಡಿಎ ಕಚೇರಿಗೆ ಸೋಲಾರ್ ಅಳವಡಿಸಲು ಮುಂದಾಗಿದೆ.
ಮೈಸೂರು ನಗರ ಪಾಲಿಕೆಯು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕುಪ್ಪಣ್ಣ ಉದ್ಯಾನವನವನ್ನು ಆಯ್ಕೆ ಮಾಡಿದೆ. ತನ್ನ ಐದು ಮಾದರಿ ಯೋಜನೆಗಳ ಪೈಕಿ ಮೊದಲ ಯೋಜನೆಯಾಗಿ ಕುಪ್ಪಣ್ಣ ಉದ್ಯಾನವನಕ್ಕೆ 8 ಕೆ.ವಿ ಸಾಮರ್ಥ್ಯದ ಸೋಲಾರ್ ಅಳವಡಿಕೆ ಕಾರ್ಯ ನಡೆದಿದೆ. ಅಂತೆಯೆ ಸದ್ಯದಲ್ಲಿಯೆ ಯಾದವಗಿರಿ ಸಮೀಪದ ಚೆಲುವಾಂಬ ಉದ್ಯಾನವನಕ್ಕೂ 8 ಕೆ.ವಿ ಸಾಮರ್ಥ್ಯದ ಸೋಲಾರ್ ಅಳವಡಿಕೆಗೆ ನಗರ ಪಾಲಿಕೆ ಯೋಜನೆ ರೂಪಿಸಿ ಅನುಮೋದನೆ ಪಡೆದುಕೊಂಡಿದೆ. ಬಳಿಕ ನಗರ ಪಾಲಿಕೆಯ ಕಚೇರಿಗೆ 60 ಕೆ.ವಿ. ಸಾಮರ್ಥ್ಯ, ಪ್ರತಿ ವಲಯ ಕಚೇರಿಗೂ 45 ಕೆ.ವಿ ಸಾಮರ್ಥ್ಯದ ಸೋಲಾರ್ ಅಳವಡಿಕೆ ಹಾಗೂ ಎಂಡಿಎ ಕಚೇರಿಗೆ 75 ಕೆ.ವಿ. ಸಾಮರ್ಥ್ಯದ ಸೋಲಾರ್ ಅಳವಡಿಸಲು ನಗರ ಪಾಲಿಕೆ ಮುಂದಾಗಿದೆ. ಬಳಿಕ ಜಿಲ್ಲಾ ಪಂಚಾಯಿತಿ ಸೇರಿದಂತೆ ಇತರ ಸರ್ಕಾರಿ ಕಚೇರಿಗೆ ಸೋಲಾರ್ ಮೂಲಕ ವಿದ್ಯುತ್ ಪೂರೈಸಲು ಉದ್ದೇಶಿಸಲಾಗಿದೆ.
ಈ ಯೋಜನೆಗೆ ನವೀಕರಿಸಬಹುದಾದ ಇಂಧನಗಳ ಸಚಿವಾಲಯವು ಶೇ. 13 ರಷ್ಟು ಸಹಾಯಧನ ನೀಡುತ್ತದೆ. ಉಳಿಕೆ ಹಣವನ್ನು ಯೋಜನೆಯ ಫಲಾನುಭವಿಗಳು ನೀಡಬೇಕು. ಈ ಯೋಜನೆಯಡಿ ಈಗಾಗಲೆ ನಗರ ಪಾಲಿಕೆ ಆವರಣದ ಕಿರು ಉದ್ಯಾನವನಕ್ಕೆ ಸೋಲಾರ್ ಅವಳವಡಿಸಲಾಗಿದೆ. ಉಳಿದಂತೆ ನಗರ ಪಾಲಿಕೆಯ ಇಡೀ ಕಟ್ಟಡಕ್ಕೆ ವಿದ್ಯುತ್ ಪೂರೈಸುವ ಯೋಜನೆ ಕೈಗೆತ್ತಿಕೊಳ್ಳಬೇಕಿದೆ.
ಈ ಎಲ್ಲಾ ಯೋಜನೆಗಳೂ ಪೂರ್ಣವಾದ ಬಳಿಕ ಉಳಿದ ಕಚೇರಿಗಳಿಗೆ ಸೋಲಾರ್ ಅಳವಡಿಸಲು ನಗರ ಪಾಲಿಕೆ ಚಿಂತಿಸಿದೆ. ಅಂದುಕೊಂಡಂತೆ ನಡೆದರೆ ನಗರದ ಎಲ್ಲಾ ಸರ್ಕಾರಿ ಕಚೇರಿಗಳೂ ಸೋಲಾರ್ ಮಯವಾಗಲಿದೆ. ಕಚೇರಿಗೆ ತಗಲುತ್ತಿದ್ದ ವಿದ್ಯುತ್ ವೆಚ್ಚದ ಪ್ರಮಾಣ ತಗ್ಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.