ಮೈಸೂರು

ಇನ್ನಷ್ಟು ತಾಂತ್ರಿಕ ಸಂಶೋಧನೆ ಅಗತ್ಯ: ಸಾವಿತ್ರಿ

Published On :

ಮೈಸೂರು: ಸಂವಹನ ನ್ಯೂನತೆಗೆ ಸಂಬಂಧಿಸಿದ ಪರಿಕರಗಳನ್ನು ಕಂಡು ಹಿಡಿಯಲು ತಾಂತ್ರಿಕ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ ಎಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಸ್.ಆರ್. ಸಾವಿತ್ರಿ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ಎಸ್‌ಜೆಸಿಇನಲ್ಲಿ ಸೋಮವಾರ ಏರ್ಪಡಿಸಿದ್ದ ಬೋಧನಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಹನ ನ್ಯೂನತೆಗೆ ಈಗ ಬಳಸುತ್ತಿರುವ ಪರಿಕರಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಮೂಹ ಹಾಗೂ ಪರಿಣಿತರು ಅಂತಹ ಉಪಕರಣಗಳನ್ನು ಇಲ್ಲಿಯೇ ಸಂಶೋಧಿಸಿದರೆ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ಆ ಕೆಲಸ ಆಗಬೇಕಿದೆ ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಶೈಕ್ಷಣಿಕ ವಿಭಾಗದ ಜಂಟಿ ನಿರ್ದೇಶಕ ಡಾ.ಬಿ.ಜಿ. ಸಂಗಮೇಶ್ವರ ಮಾತನಾಡಿ, ತಾಂತ್ರಿಕ ಸಂಶೋಧನೆಯಲ್ಲಿ ಭಾರತ ಜಾಗತಿಕವಾಗಿ ಎತ್ತರಕ್ಕೆ ಬೆಳೆಯುವ ಅವಶ್ಯಕತೆ ಇದೆ. ಜಾಗತಿಕವಾಗಿ ಶೇ 0.3 ರಷ್ಟು ತಂತ್ರಾಂಶಗಳ ಮೇಲಿನ ಪೇಟೆಂಟ್‌ನ್ನು ನಮ್ಮ ದೇಶವನ್ನು ಪಡೆದಿದೆ. ತಾಂತ್ರಿಕ ಸಂಶೋಧನೆಗಳ ಪ್ರಕಟಣೆಗಳಲ್ಲಿ ಜಾಗತಿಕವಾಗಿ ಶೇ. 3.5ರಷ್ಟು ಮಾತ್ರ ಭಾರತ ಪಾಲು ಹೊಂದಿದೆ. ಆದರೆ, ನೆರೆಯ ಚೀನಾದ ಪಾಲು ಶೇ 21 ರಷ್ಟಿದೆ ಎಂದರು.
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮಹಾಪ್ರಬಂಧಗಳು ಗುಣಮಟ್ಟದಿಂದ ಕೂಡಿಲ್ಲ. ಇದಕ್ಕೆ ಆಗಿಂದಾಗ್ಗೆ ನಡೆಸುವ ವಿಚಾರ ಸಂಕಿರಣ, ಸಮ್ಮೇಳನಗಳು ಪರಿಹಾರವಲ್ಲ. ಈ ನಿಟ್ಟಿನಲ್ಲಿ ಪರಿಣಿತರು ಸಂಶೋಧನಾ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಗುರುತರ ಬೆಳವಣಿಗೆಗೆ ಮುಂದಾಗಬೇಕು. ಇದರ ಲಾಭ ಸಮಾಜಕ್ಕೆ ಧಕ್ಕುವಂತಾಗಲಿ ಎಂದು ಅವರು ಆಶಿಸಿದರು. ಐದು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರೊಸೆಸರ್ ಎಆರ್‌ಎಂ7 ಮತ್ತು ಸಿಗ್ನಲ್ ಪ್ರೊಸೆಸರ್ ಟಿಎಂಎಸ್ 320ಸಿ6713ರ ಕುರಿತ ತಜ್ಞರು ಚರ್ಚಿಸುವರು. ರಾಜ್ಯದ ಮಂಡ್ಯ, ಬೆಂಗಳೂರು, ಹಾಸನ ಹಾಗೂ ಇತರೆ ಪ್ರದೇಶಗಳಿಂದ ಸುಮಾರು 35ಕ್ಕೂ ಹೆಚ್ಚು ಮಂದಿ ಪರಿಣಿತರು ಭಾಗವಹಿಸಿದ್ದರು. ಎಸ್‌ಜೆಸಿಇ ಪ್ರಾಂಶುಪಾಲ ಪ್ರೊ. ಸೈಯದ್ ಶಕೀಬ್ ಉರ್ ರೆಹಮಾನ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.