ಜವಳಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ
ಮೈಸೂರು: ಜವಳಿ ಮಂತ್ರಾಲಯದ ಜವಳಿ ಸಮಿತಿಯು ಸಂಶೋಧನೆ ಗಟ್ಟಿಗೊಳಿಸುವ ಸಂಬಂಧ ಆಯೋಜಿಸಿರುವ ಎರಡು ದಿನಗಳ ಕಾರ್ಯಾಗಾರ ನಗರದಲ್ಲಿ ಸೋಮವಾರ ಆರಂಭವಾಯಿತು.
ದಕ್ಷಿಣ ವಲಯ ವ್ಯಾಪ್ತಿಯ ಜವಳಿ ಸಮಿತಿ ಪದಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಸಮಿತಿಯ ಕಾರ್ಯದರ್ಶಿ ಡಾ.ಪಿ.ನಾಯಕ್ ಕಾರ್ಯಾಗಾರ ಉದ್ಘಾಟಿಸಿದರು.
ಮುಖ್ಯ ಭಾಷಣ ಮಾಡಿದ ಸಮಿತಿಯ ಜಂಟಿ ನಿರ್ದೇಶಕ ಜೆ.ಡಿ.ಬರ್ಮನ್, ಪ್ರಗತಿ ಹೊಂದಿದಂತೆಲ್ಲಾ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆ ಆಗುತ್ತಿದೆ. ಅಂತೆಯೇ ಜವಳಿ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನದಿಂದಾಗಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆ ಆಗಿದೆ.
ಆದ್ದರಿಂದ ನಾವು ಸಂಗ್ರಹಿಸುವ ಮಾಹಿತಿ ನೀತಿ ನಿರೂಪಣೆಗೆ ಸಹಕಾರಿ ಆಗಲಿದೆ ಎಂದು ಹೇಳಿದರು. ಸಮಿತಿಯ ಲ್ಯಾಬ್ ವಿಭಾಗದ ಜಂಟಿ ನಿರ್ದೇಶಕ ಡಾ.ಕೆ.ಎಸ್. ಮುರಳೀಧರ ಮಾತನಾಡಿ, ಇತ್ತೀಚೆಗೆ ಸಮಿತಿಯು ಅತ್ಯುತ್ತಮ ಪ್ರಯೋಗಾಲಯ ಹೊಂದಿದೆ. 16 ಪ್ರಯೋಗಾಲಯಗಳು ಐಎಸ್ಒ ಮಾನ್ಯತೆ ಹೊಂದಿವೆ ಎಂದು ತಿಳಿಸಿದರು. ಸಮಿತಿಯ ಉಪ ನಿರ್ದೇಶಕ ಟಿ.ಕೆ.ರೂಟ್, ಎಂಆರ್ಒ ಎಂ. ವಿನಯ ರಾಜ್ ಇದ್ದರು.
ಸಂಸ್ಕೃತ ಕಲಿಯುವವರ ಸಂಖ್ಯೆ ಹೆಚ್ಚಾಗಲಿ: ಭಟ್
ಮೈಸೂರು: ಸಂಸ್ಕೃತ ಕಲಿಯುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಎನ್.ರಾಧಾಕೃಷ್ಣ ಭಟ್ ಹೇಳಿದರು.
ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಪದವಿ ಕಾಲೇಜು ಸಂಸ್ಕೃತ ಅಧ್ಯಾಪಕರ ಸಂಘಟನೆಯು ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂಸ್ಕೃತ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಮಹತ್ವ ಹೊಂದಿರುವ ಸಂಸ್ಕೃತವನ್ನು ಅಭ್ಯಸಿಸುವುದು ಅವಶ್ಯಕ. ಇಂತಹ ಸಂಘಟನೆಗಳಿಂದ ಸಂಸ್ಕೃತ ಕಲಿಯುವವರ ಸಂಖ್ಯೆಯೂ ಅಧಿಕವಾಗಲಿ. ಮಂಗಳೂರಿನ ಸಂಸ್ಕೃತ ಸಂಘದ ಸಂಘಟನಾ ಕಾರ್ಯವನ್ನು ಮಾದರಿಯಾಗಿ ಇರಿಸಿಕೊಂಡು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಸುಧರ್ಮಾ ದಿನಪತ್ರಿಕೆಯ ಸಂಪಾದಕ ಕೆ.ಎನ್.ಸಂಪತ್ ಅಯ್ಯಂಗಾರ್ ಮುಖ್ಯ ಅತಿಥಿಯಾಗಿದ್ದರು. ಮಹಾರಾಣಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ಎಂ. ಸುಶೀಲಾ ಸಂಘಕ್ಕೆ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಹ ಪ್ರಾಧ್ಯಾಪಕಿ ಡಿ.ಶೀಲಾ ಕುಮಾರಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಸಂಘಕ್ಕೆ ಆಯ್ಕೆ: ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಡಿ.ಶೀಲಾ ಕುಮಾರ್, ಉಪಾಧ್ಯಕ್ಷರಾಗಿ ಡಾ.ಕೆ.ಆರ್. ಗಾಯತ್ರಿ, ಖಜಾಂಚಿಯಾಗಿ ಪ್ರೊ.ಎನ್. ದೇವೇಂದ್ರಕುಮಾರ್, ಕಾರ್ಯದರ್ಶಿಯಾಗಿ ಡಾ.ಸಿ.ಎಚ್. ಗುರುರಾಜ ರಾವ್, ಸಹ ಕಾರ್ಯದರ್ಶಿಯಾಗಿ ಪ್ರೊ.ಎಚ್.ವಿ ಲೀಲಾಂಬಿಕ, ಸದಸ್ಯರಾಗಿ ಡಾ.ಎಸ್. ಶಿವರಾಜಪ್ಪ, ಡಾ.ಎನ್.ನಾಗಲಕ್ಷ್ಮೀ, ಪ್ರಭುದೇವ್, ಬಿ.ಪಿ. ಷಡಕ್ಷರಿ ಆಯ್ಕೆಯಾಗಿದ್ದಾರೆ. ಡಾ.ಎಚ್.ವಿ. ನಾಗರಾಜ ರಾವ್, ಡಾ.ರಾಧಾಕೃಷ್ಣ ಭಟ್, ಡಾ.ಎಂ. ವೀರಭದ್ರಸ್ವಾಮಿ, ಡಾ.ಟಿ.ವಿ. ಸತ್ಯನಾರಾಯಣ ಮತ್ತು ಪ್ರೊ.ಗಂಗಾಧರ ವಿ ಭಟ್ ಒಳಗೊಂಡ ಸಮಿತಿ ರಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

