ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಐವರ ಸೆರೆ
ಮೈಸೂರು: ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಕೇರಳ ಮೂಲದ ಐವರನ್ನು ನಗರ ಸಿಸಿಬಿ ಘಟಕದ ಪೊಲೀಸರು ಬಂಧಿಸಿ, ಮಾರಕಾಸ್ತ್ರ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ನಿವಾಸಿಗಳಾದ ಪಿ.ಬಿ.ಪ್ರಮೋದ್ (42), ಸಾಜಿ ವರ್ಗೀಸ್ (36), ಮನು ಮಾಧವನ್ (24), ಮಾಯೀನ್ ಅಬೂಬಕರ್ ಸಿದ್ದಿಕ್ (32) ಮತ್ತು ಸಾದಿಕ್ ಅಲಿ (26) ಬಂಧಿತ ಆರೋಪಿಗಳು.
ಸಿಸಿಬಿ ಪೊಲೀಸರು ಭಾನುವಾರ ವಿಶೇಷ ಗಸ್ತಿನಲ್ಲಿದ್ದಾಗ ಜಿಆರ್ಎಸ್ ಫ್ಯಾಂಟಸಿ ಪಾರ್ಕ್ ಬಳಿಯ ಹೊರ ವರ್ತುಲ ರಸ್ತೆಯ ಪಕ್ಕದ ತೋಟದ ಪಾಳು ಕಟ್ಟಡದಲ್ಲಿ ಡಕಾಯಿತಿಗೆ ಸಂಚು ರೂಪಿಸುತ್ತಿದ್ದ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಶದಲ್ಲಿದ್ದ ಕಬ್ಬಿಣದ ಲಾಂಗ್, ಡ್ಯಾಗರ್, ಮಚ್ಚು, ಆಕ್ಸಾ ಬ್ಲೇಡಿನ ತುಂಡು, ಸ್ಕ್ರೂ ಡ್ರೈವರ್, ಖಾರದ ಪುಡಿಯ ಪೊಟ್ಟಣಗಳು ಹಾಗೂ ಡಕಾಯಿತಿ ನಂತರ ಪರಾರಿಯಾಗಲು ತಂದಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳ ಪೈಕಿ ಪ್ರಮೋದ್ ಮತ್ತು ಸಾಜಿ ವರ್ಗೀಸ್ ಎಂಬವರು ಈ ಹಿಂದೆ ಮೈಸೂರು, ಬೆಂಗಳೂರು, ಹಾಸನ, ಕೇರಳದ ತ್ರಿಶೂರ್ ಸೇರಿದಂತೆ ವಿವಿಧೆಡೆ ಕಾರು ಕಳವು ಪ್ರಕರಣ ಭಾಗಿಯಾಗಿ, ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವುದು ತಿಳಿದು ಬಂದಿದೆ.
ಜೂಜಾಟ: 10 ಮಂದಿ ಬಂಧನ
ಮೈಸೂರು: ಜೂಜಾಡುತ್ತಿದ್ದ 10 ಮಂದಿಯನ್ನು ಉದಯಗಿರಿ ಠಾಣೆ ಪೊಲೀಸರು ಬಂಧಿಸಿ, ಪಣಕ್ಕಿಟ್ಟಿದ್ದ 24,530 ವಶಪಡಿಸಿಕೊಂಡಿದ್ದಾರೆ. ಕ್ಯಾತಮಾರನಹಳ್ಳಿ ನಿವಾಸಿಗಳಾದ ಸತೀಶ, ಸುನಿಲ್, ಶಿವಣ್ಣ, ಬಣ್ಣಪ್ಪ, ವೆಂಕಟೇಶ, ರವಿ, ನಾಗರಾಜು, ಶಿವಮೂರ್ತಿ, ಕುಮಾರ ಮತ್ತು ಮಹದೇವಸ್ವಾಮಿ ಬಂಧಿತರು. ಇವರು ಕ್ಯಾತಮಾರನಹಳ್ಳಿಯ 12ನೇ ಕ್ರಾಸ್ ಅಶ್ವತ್ಥಕಟ್ಟೆ ರಸ್ತೆಯಲ್ಲಿ ಜೂಜಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ದೇವರಾಜ ಉಪ ವಿಭಾಗದ ಎಸಿಪಿ ಜಯಮಾರುತಿ ಮಾರ್ಗದರ್ಶನದಲ್ಲಿ ಉದಯಗಿರಿ ಠಾಣೆಯ ಇನ್ಸ್ಪೆಕ್ಟರ್ ಆರ್.ಶ್ರೀಕಾಂತ್, ಎಸ್ಐ ಎಸ್.ಎಲ್. ಸಾಗರ್ ಮತ್ತು ಸಿಬ್ಬಂದಿ ಬಸವರಾಜು, ಗೋವಿಂದನಾಯಕ, ಷಣ್ಮುಗಂ, ಪೊನ್ನಪ್ಪ, ಮಹದೇವಸ್ವಾಮಿ, ಬಸವರಾಜು, ಜನಾರ್ಧನ್ರಾವ್, ಅಶೋಕ್, ಪುರುಷೋತ್ತಮ್ಮ, ದೊರೆಸ್ವಾಮಿ ಈ ದಾಳಿ ನಡೆಸಿದ್ದಾರೆ.
ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು
ಮೈಸೂರು: ಕೆ.ಆರ್. ವೃತ್ತದಲ್ಲಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಲ್ತಾಫ್ (30) ಎಂಬವರು ಮೃತಪಟ್ಟಿದ್ದಾರೆ. ಮೃತರ ವಿಳಾಸ ತಿಳಿದು ಬಂದಿಲ್ಲ. ಚಹರೆ- 5.7 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ಮೈಮೇಲೆ ಯಾವುದೇ ಬಟ್ಟೆ ಇಲ್ಲ.
ಅಪರಿಚಿತೆ ಸಾವು: ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆ ದಾಖಲಾಗಿದ್ದ ಅಪರಿಚಿತ ಯುವತಿ ಮೃತಪಟ್ಟಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಣಕಲು ದೇಹ, ಕೆಂಪು ಡಿಸೈನ್ ಸೀರೆ, ಗೆರಯುಳ್ಳ ಕಾಫಿ ಬಣ್ಣದ ಶರ್ಟ್ ಧರಿಸಿದ್ದಾರೆ. ಈ ಇಬ್ಬರು ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಸೆರೆ
ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮೈಸೂರು ತಾಲೂಕು ದೊಡ್ಡಕಾನ್ಯ ನಿವಾಸಿ ಚಿಕ್ಕೂಸಯ್ಯ ಎಂಬವರ ಪುತ್ರ ನಾರಾಯಣಸ್ವಾಮಿ (25) ಬಂಧಿತ ಆರೋಪಿ. ಈತನಿಗೆ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಇತ್ತೀಚೆಗೆ ದೊಡ್ಡಕಾನ್ಯ ಗ್ರಾಮದ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಆಕೆಯ ಮೇಲೆ ನಾರಾಯಣಸ್ವಾಮಿ ಅತ್ಯಾಚಾರ ಎಸಗಿ, ಕುಟುಂಬ ಸಮೇತ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ದಕ್ಷಿಣ ಠಾಣೆ ಪೊಲೀಸರು ಆರೋಪಿ ನಾರಾಯಣಸ್ವಾಮಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ನಾರಾಯಣಸ್ವಾಮಿಗೆ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಗಡಿನಾಡು ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೈಸೂರು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಆರ್.ಶಕುಂತಲಾದೇವಿ ಸಿಂಧುವಳ್ಳಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

