ಹೋರಾಟಗಾರ ಹೆಸರಲ್ಲಿ ಮೊದಲು ನೆನಪಾಗುವುದು ರಾಮಲಿಂಗಂ
ಮೈಸೂರು: ಸಾಮಾಜಿಕ ಹೋರಾಟಗಾರ, ಮಾರ್ಕ್ಸಿಸ್ಟ್ವಾದಿ ಪ್ರೊ.ಎ. ರಾಮಲಿಂಗಂ ಅವರ ನಿಧನಕ್ಕೆ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್) ಸಂಸ್ಥೆಯು ಭಾನುವಾರ ನಗರದ ಮನೆಯಂಗಳದಲ್ಲಿ ನುಡಿನ ನಮನ ಕಾರ್ಯಕ್ರಮ ಏರ್ಪಡಿಸಿತ್ತು.
ರಾಮಲಿಂಗಂ ಒಡನಾಡಿಯಾಗಿದ್ದ ಹಿರಿಯ ವಿಮರ್ಶಕ ಪ್ರೊ.ಜಿ.ಎಚ್. ನಾಯಕ ಮಾತನಾಡಿ, ನಾನು ಮೈಸೂರಿಗೆ ಬಂದು 60 ವರ್ಷಗಳಾಯಿತು. ಇಷ್ಟು ದಿನಗಳಲ್ಲಿ ಹೋರಾಟಗಾರರು ಎಂದು ನೆನಪಿಸಿಕೊಂಡಾಗ ತಕ್ಷಣ ಜ್ಞಾಪಕಕ್ಕೆ ಬರುವವರೆಂದರೆ ರಾಮಲಿಂಗಂ. ಅವರೊಬ್ಬ ಹೋರಾಟದ ಹೀರೋ. ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲುವ ಯೋಗ್ಯತೆಯುಳ್ಳ ವ್ಯಕ್ತಿ ಅವರಾಗಿದ್ದರು. ಮೈಸೂರು ವಿವಿ ಕ್ಯಾಂಪಸ್ನ ಕೆಂಡ ಎಂತಲೂ ನಾವು ಕರೆಯುತ್ತಿದ್ದೆವು ಎಂದರು.
1973ರಲ್ಲಿ ಮೈಸೂರು ವಿವಿ ಸೀಟು ಹಂಚಿಕೆ ಹಗರಣವಾದಾಗ ಅದರ ವಿರುದ್ಧ ಹೋರಾಟ ಆರಂಭಿಸಿ ಮುಂದಾಳತ್ವ ವಹಿಸಿದ್ದು ಇದೇ ರಾಮಲಿಂಗಂ. ಯಾರಿಗೂ ಜಗ್ಗದೆ ಸುಮಾರು 40 ದಿನಗಳ ಕಾಲ ಸತತ ಹೋರಾಟ ನಡೆಸಿ ಗೆದ್ದರು. ಕೇವಲ ಸೀಟು ಹಂಚಿಕೆ ಪ್ರಕರಣವಲ್ಲದೆ ಇನ್ನು 32 ಪ್ರಕರಣಗಳನ್ನು ಪತ್ತೆ ಹಚ್ಚಿದರು. ಮೈಸೂರು ಸಂಪ್ರದಾಯಸ್ಥರ ಊರಾಗಿತ್ತು. ಇಂತಹ ಊರಿನಲ್ಲಿ ಡಾ. ರತಿರಾವ್ ಅವರಂತಹ ಹೆಣ್ಣು ಮಗಳ ಆ ಕಾಲದಲ್ಲೆ ಹೋರಾಟಕ್ಕೆ ಧುಮುಕ್ಕಿದ್ದು ನನಗೆ ಆಶ್ಚರ್ಯ ಮೂಡಿಸಿತು. ಸಸ್ಯಶಾಸ್ತ್ರ ವಿಭಾಗಕ್ಕೆ ಪುಂಡರು ನುಗ್ಗಿ ಗಲಾಟೆ ಮಾಡಿದಾಗಲು ಇವರಿಬ್ಬರು ಜಗ್ಗಲಿಲ್ಲ ಎಂದು ಸ್ಮರಿಸಿದರು.
ಕೃಷಿ ವಿಜ್ಞಾನಿ ಡಾ. ಮೋಹನ್ದಾಸ್ ಪೈ ಮಾತನಾಡಿ, ಜನಪರ ಹಿತ ಕಾಯುವ ಹಾಗೂ ವೈಜ್ಞಾನಿಕ ಹಿತಚಿಂತನೆಯುಳ್ಳ ವ್ಯಕ್ತಿ ರಾಮಲಿಂಗಂ. ಸೀಟು ಹಂಚಿಕೆ ಪ್ರಕರಣದ ಸಂದರ್ಭದಲ್ಲಿ ರಾಮಲಿಂಗಂ ಬರೆದ ಕರಪತ್ರವನ್ನು ನಾನು ಹಾಸ್ಟೆಲ್ನಲ್ಲಿ ಹಂಚಿದಾಗ ಪುಂಡರು ನನಗೆ ಥಳಿಸಿದರು. ಬಳಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗ ಶಿಷ್ಯವೇತನ ಬರುತ್ತಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಮಂಗಳೂರಿಗೆ ಹೋಗಿಬಿಟ್ಟೆ. ತಕ್ಷಣ ದೂರವಾಣಿ ಕರೆ ಮಾಡಿ ನನ್ನನ್ನು ಮೈಸೂರಿಗೆ ಕರೆಸಿ ಆರು ತಿಂಗಳ ಕಾಲ ಅವರ ಮನೆಯಲ್ಲಿ ಊಟ ಹಾಕಿ ಸಾಕಿದರು ಎಂದು ಭಾವುಕರಾಗಿ ನುಡಿದರು.
ಡಾ.ವಿ.ಎನ್. ಲಕ್ಷ್ಮೀನಾರಾಯಣ, ತಾರಾ. ನಟ ರಾಜು, ಪ್ರೊ.ಕಾಳಚನ್ನೇಗೌಡ, ಡಾ.ಎಸ್. ತುಕಾರಾಂ, ಡಾ. ರತಿರಾವ್, ರೂಪರಾವ್, ಮೀರಾ ನಾಯಕ್, ಪ್ರೊ. ಪಂಡಿತಾರಾಧ್ಯ, ಎಚ್. ಜನಾರ್ದನ್, ಡಾ.ಮ.ನ. ಜವರಯ್ಯ, ಕೆ. ಮುದ್ದುಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

