ಶ್ರದ್ಧಾ ಕೆಲಸದಿಂದ ಸಮೃದ್ಧಿ ರಾಷ್ಟ್ರ
ಕ.ಪ್ರ. ವಾರ್ತೆ, ಸುತ್ತೂರು, ಜೂ.16
ಸ್ವಯಂ ಸೇವೆ ಎಂಬುದು ಸೀಮಾತೀತವಾದುದು, ವಿವೇಕ ಸಹಿತ. ಆದರೆ ವೇತನ ರಹಿತವಾದುದು ಎಂದು ಅದರ ವ್ಯಾಪ್ತಿ ಹಾಗೂ ಗುಣವಿಶೇಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಬಣ್ಣಿಸಿದರು.
ವೀರಸಿಂಹಾಸನ ಮಹಾಸಂಸ್ಥಾನ ಮಠ, ಶಿವರಾತ್ರಿ ಧಾರ್ಮಿಕ ದತ್ತಿ ಮತ್ತು ಜೆಎಸ್ಎಸ್ ಮಹಾವಿದ್ಯಾಪೀಠದ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಯಂ ಸೇವಕರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೊಣೆಗಾರಿಕೆಯನ್ನು ಪ್ರಜ್ಞಾವಂತಿಕೆಯಿಂದ ಸಮರ್ಥವಾಗಿ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವವನೆ ಸ್ವಯಂಸೇವಕ. ಅವನಿಗೆ ಉದಾಸೀನ, ಉಪೇಕ್ಷೆ, ಅಂಜಿಕೆ, ಅವಸರ, ಮೇಲು-ಕೀಳು, ಮೆಚ್ಚುಗೆಯ ನಿರೀಕ್ಷೆ ಇವೆಲ್ಲ ಸಲ್ಲದು. ಪ್ರತಿಯೊಬ್ಬರೂ ಒಪ್ಪಿಕೊಂಡದ್ದನ್ನು ಒಪ್ಪವಾಗಿ ಅರ್ಪಣಾ ಮನೋಭಾವದಿಂದ ನಿರ್ವಹಿಸಿದಾಗ ಮಾತ್ರ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ. ಪೂರ್ಣ ಪ್ರೀತಿಯಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ನಮ್ಮ ಶಕ್ತಿ ಸಾಮರ್ಥ್ಯವನ್ನು ಸಾಂಘಿಕವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿದಾಗ ಕೆಲಸ ಸುಗಮವಾಗಿ ನಡೆಯುತ್ತದೆ. ಮಿಗಿಲಾಗಿ ಆತ್ಮತೃಪ್ತಿ ಲಭಿಸುತ್ತದೆ. ಆಯಾ ಸನ್ನಿವೇಶಕ್ಕೆ ತಕ್ಕ ಹಾಗೆ ಕಾರ್ಯ ರೂಪಿಸಿಕೊಳ್ಳುವುದು ಮುಖ್ಯ. ಸಮಯ ಪ್ರಜ್ಞೆಯೊಂದಿಗೆ ಕಾರ್ಯಪ್ರವೃತ್ತನಾಗುವುದು ಸ್ವಯಂ ಸೇವಕನ ಲಕ್ಷಣ. ವಿದೇಶಗಳಲ್ಲಿ ಸ್ವಯಂ ಸೇವೆ ಪ್ರತಿಫಲಕ್ಕಾಗಿ ಮಾಡಿದರೆ, ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ವಹಿಸುವುದೇ ಭಾರತೀಯ ಸಂಸ್ಕೃತಿ ಎಂದರು.
ಜೀವನವೂ ಹಸಿರು: ವಿಜಾಪುರ ಜ್ಞಾನಯೋಗಾಶ್ರವುದ ನಿರಾಭಾರಿ ಚರಮೂರ್ತಿಗಳಾದ ಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ನಿಸರ್ಗದೊಂದಿಗಿನ ಬದುಕಿನಿಂದಾಗಿ ಜೀವನವೂ ಹಸಿರಾಗುತ್ತದೆ. ಅನುಭವಿಗಳನ್ನು ನೋಡುವ, ಅವರ ನುಡಿಗಳನ್ನು ಕೇಳುವ ಇಂಥ ಅವಕಾಶದಿಂದ ಜೀವನ ಸಮೃದ್ಧವಾಗುತ್ತದೆ. ಶಿಬಿರಾರ್ಥಿಗಳ ಆನಂದ ಪುಷ್ಪ ಎಂದಿಗೂ ಬಾಡದಿರಲಿ ಎಂದು ಆಶಿಸಿದರು. ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರೇರಣೆ ದೊರೆತಿದೆ. ನಮಗಾಗಿ ಮತ್ತು ಇತರರಿಗಾಗಿ ನಾವು ಕೆಲಸ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರು ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಎಸ್.ಆರ್. ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತರರು ಅಸಾಧ್ಯವೆಂದು ಬಿಟ್ಟ ಕೆಲಸಗಳನ್ನು ತಾನು ಸಾಧ್ಯವೆಂದು ಛಲದಿಂದ ಮಾಡುವುದು ಪರಾಕ್ರಮಿಯ ಕೆಲಸ. ಸಾಮಾಜಿಕ ಪರಿವರ್ತನೆಯ ದಿಸೆಯಲ್ಲಿ ಚಿಂತನೆ ಮಾಡುವುದು ಅವಶ್ಯಕ. ಮನುಷ್ಯ ಸ್ವಭಾವವನ್ನು ಸುಸಂಸ್ಕೃತಗೊಳಿಸಬೇಕಾಗಿದೆ. ಉದಾತ್ತ ಗುರಿಗಳ ಸಾಧನೆಗೆ ತಮ್ಮ ಬದುಕನ್ನೇ ತ್ಯಾಗ ಮಾಡುವವರಿದ್ದಾರೆ. ಈಗಿನಂತೆ ಹಿಂದಿನವರು ಎಲ್ಲ ಕೆಲಸಗಳಿಗೂ ಸರ್ಕಾರವನ್ನೇ ಅವಲಂಬಿಸುತ್ತಿರಲಿಲ್ಲ ಎಂದು ತಿಳಿಸಿದರು.
ಸಾಹಿತಿ ಮನು ಬಳಿಗಾರ ಶಿಬಿರಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು. ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ ಮಂಜುನಾಥ್, ಎಸ್.ಶಿವಕುಮಾರ ಸ್ವಾಮೀಜಿ, ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಗೌರವ ಸಹಾಯಕ ಆಡಳಿತಾಧಿಕಾರಿ ಎಸ್.ಪಿ.ಉದಯಶಂಕರ್ ಹಾಗೂ ಶಿಬಿರದ ಸಂಚಾಲಕರಾದ ಪ್ರೊ.ಪಿ.ಎಂ. ಮಹಾದೇವಸ್ವಾಮಿ, ಡಾ.ಬಿ.ಎಂ.ಸದಾಶಿವಮೂರ್ತಿ, ಜಿ.ಎಲ್. ತ್ರಿಪುರಾಂತಕ, ಎನ್. ರಮೇಶ್ ಇದ್ದರು. ಶಿಬಿರಾರ್ಥಿಗಳಾದ ಕಾವ್ಯಶ್ರೀ, ಜಗದೀಶ್, ಹೊನ್ನೇಗೌಡ ತಮ್ಮ ಅನಿಸಿಕೆ ಹಂಚಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

