ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ಅವಶ್ಯ
ಮೈಸೂರು: ಸಮಾಜದಲ್ಲಿ ತೀರಾ ಶೋಷಿತರಾಗಿರುವ ಪೌರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವುದು ಅವಶ್ಯಕ ಎಂದು ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್ ಹೇಳಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಶೋಷಿತರಲ್ಲಿ ತೀರ ಶೋಷಿತರೆಂದರೆ ಅದುವೇ ಪೌರಕಾರ್ಮಿಕರು. ಇಂದು ಪ್ರತಿ ಗ್ರಾಮದಲ್ಲಿ ನಾಲ್ಕಾರು ಮಂದಿ ನೆಲೆಸಿದ್ದು, ಅವರು ಅನೇಕ ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡು ಊರಿನ ಸೇವೆ ಮಾಡುತ್ತಿದ್ದರೂ, ಅವರಿಗೆ ಒಂದು ಮನೆ ಇರವುದಿಲ್ಲ. ಸರಿಯಾದ ಸವಲತ್ತು ಲಭ್ಯವಾಗಿರುವುದಿಲ್ಲ. ಆದ್ದರಿಂದ ಮೊದಲು ಅಂಥವರ ಸಮಸ್ಯೆಗೆ ದಲಿತ ಸಂಘಟನೆಗಳು ನೆರವಾಗಬೇಕು ಎಂದರು.
ಲೋಪ ದೋಷ: ದಲಿತರಿಗೆ ವಿಶೇಷ ಘಟಕ ಯೋಜನೆಯಡಿ ಸರ್ಕಾರ 15 ಸಾವಿರ ಕೋಟಿ ಮೀಸಲಿರಿಸಿದೆ. ಈ ಹಿಂದಿನ ಸರ್ಕಾರ ಕೇವಲ 6.5 ಸಾವಿರ ಕೋಟಿ ಮೀಸಲಿರಿಸಿತ್ತು. ಇದು ಸರಿಯಾಗಿ ಅನುಷ್ಠಾನವಾಗಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ನ್ಯೂನತೆಗಳಿವೆ. ಆ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಅನೇಕ ಲೋಪದೋಷಗಳಿವೆ ಅದನ್ನು ಸರಿಪಡಿಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು. ಶೋಷಿತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆ ತೆರೆದಿದ್ದು, ಅಲ್ಲಿ ಗುಣಮಟ್ಟದ ಶಿಕ್ಷಣ ಲಭ್ಯವಿದೆ. ಅಂತೆಯೇ ಮೊರಾರ್ಜಿ ವಸತಿ ಶಾಲೆ ಇದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳ ಬದುಕು ರೂಪಿಸಬೇಕು ಎಂದರು. ಕಾರ್ಯಕ್ರಮವನ್ನು ಬೆಂಗಳೂರು ವಿವಿಯ ಡಾ.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿದ್ದಲಿಂಗಯ್ಯ ಉದ್ಘಾಟಿಸಿದರು. ಸಮಿತಿ ಹೊರತಂದಿರುವ ಕಿರುಹೊತ್ತಿಗೆಯನ್ನು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ನ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಬಿಡುಗಡೆಗೊಳಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ರುದ್ರಪ್ಪ ಹನಗವಾಡಿ, ಆರ್.ನಾಗರಾಜ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭಾ ಕಟ್ಟಿಮನಿ ಮುಖ್ಯ ಅತಿಥಿಗಳಾಗಿದ್ದರು. ರಾಜಶೇಖರ ಕೋಟೆ ನಿರೂಪಿಸಿದರು. ಬೆಲವತ್ತ ರಾಮಚಂದ್ರ ಸ್ವಾಗತಿಸಿದರು. ನಂತರ ವಿಚಾರ ಸಂಕಿರಣ ನಡೆಯಿತು.
ಅಂತರ್ಜಾತಿ ವಿವಾಹ: ಈ ಸಂದರ್ಭದಲ್ಲಿ ನಂಜನಗೂಡು ತಾಲೂಕಿನ ಮಲ್ಲಹಳ್ಳಿಯ ದಲಿತ ಸಮುದಾಯದ ನಾಗರತ್ನ ಹಾಗೂ ತಮಿಳುನಾಡಿನ ಮಧುರೈನ ವಾಸಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿರುವ ಸೆಲ್ವಕುಮಾರ್ ಅವರ ಅಂತರ್ಜಾತಿ ವಿವಾಹವನ್ನು ವೇದಿಕೆಯಲ್ಲಿ ನೆರವೇರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

