ಮೈಸೂರು

ಕಸಾಸುರ!

Published On :

ಮೈಸೂರು: ಮೈಸೂರು ನಗರ ಪಾಲಿಕೆಯು ಜೆ.ಪಿ. ನಗರದ ವರ್ತುಲ ರಸ್ತೆಯಲ್ಲಿರುವ ಸ್ಮಶಾನ ಆವರಣದಲ್ಲಿ ನಿರ್ಮಿಸಿರುವ ಶೂನ್ಯಕಸ ನಿರ್ವಹಣಾ ಘಟಕವಿದೆ. ಇದು ನರ್ಮ್ ಯೋಜನೆಯಡಿ ಲಕ್ಷಾಂತರ ರು. ವೆಚ್ಚ ಮಾಡಿ ರೂಪಿಸಿರುವ ಯೋಜನೆ. ಆದರೆ ಇಂದು ಅದು ಯಾವುದೇ ಕಾರ್ಯಕ್ಕೂ ಮುಂದಾಗದೆ ನಿಷ್ಕ್ರಿಯವಾಗಿದೆ.
ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಈ ಘಟಕವು, ಪಾಲಿಕೆಯ ವಿವಿಧ ವಾರ್ಡ್‌ಗಳಲ್ಲಿ ಸಂಗ್ರಹಿಸುವ ತ್ಯಾಜ್ಯ ಸಂಸ್ಕರಿಸಿ ಅದರಿಂದ ಗೊಬ್ಬರ ತಯಾರಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಅಲ್ಲದೆ ತ್ಯಾಜ್ಯದಲ್ಲಿ ಬರುವ ಪ್ಲಾಸ್ಟಿಕ್, ಕಬ್ಬಿಣ, ಗಾಜು ಮುಂತಾದ ವಸ್ತುಗಳನ್ನು ಬೇರ್ಪಡಿಸಿ ಅದು ಮಣ್ಣಿನೊಂದಿಗೆ ಬೆರೆತು ಪರಿಸರಕ್ಕೆ ಹಾನಿಯಾಗದಂತೆ ತಡೆಯುವುದು ಸಹ ಇದರ ಸದುದ್ದೇಶವಾಗಿದೆ.
ವಲಯ 2ರ ವ್ಯಾಪ್ತಿಗೆ ಸೇರಿರುವ ವಾರ್ಡ್ 7- ಕೃಷ್ಣಮೂರ್ತಿಪುರಂ,  8- ಜಯನಗರ, 9- ಅಶೋಕಪುರಂ, 10- ವಿದ್ಯಾರಣ್ಯಪುರಂ, 11- ವಿಶ್ವೇಶ್ವರನಗರ, 12- ಜೆ.ಪಿ.ನಗರ, 13 ಶ್ರೀರಾಂಪುರ 2ನೇ ಹಂತ, 14- ಅರವಿಂದನಗರ ಸೇರಿದಂತೆ ಆ ಘಟಕದ ವ್ಯಾಪ್ತಿಗೆ 8 ವಾರ್ಡ್‌ಗಳು ಸೇರಲಿವೆ. 22 ಸಾವಿರಕ್ಕೂ ಹೆಚ್ಚಿನ ಮನೆಗಳು, 1.9 ಲಕ್ಷಕ್ಕೂ ಅಧಿಕ ಜನಸಂಖ್ಯೆ, 1300 ಕ್ಕೂ ಹೆಚ್ಚಿನ ಉದ್ದಿಮೆಗಳು ಈ ವ್ಯಾಪ್ತಿಯಲ್ಲಿವೆ.
ಈ ಭಾಗದಲ್ಲಿ ಕೈಗಾರಿಕಾ ಪ್ರದೇಶವೂ ಇರುವುದರಿಂದ ತ್ಯಾಜ್ಯ ಪ್ರಮಾಣ ಸ್ವಲ್ಪ ಜಾಸ್ತಿ. ಅಲ್ಲದೆ ಹೊಟೇಲ್, ಅಂಗಡಿ ಮತ್ತಿತರ ವಾಣಿಜ್ಯ ಕೇಂದ್ರಗಳಿಂದಲೂ ಕಸ ಸಂಗ್ರಹವಾಗುತ್ತಿದೆ. ಮನೆ ಮನೆಯಿಂದ ಆಟೋ ಟಿಪ್ಪರ್ ಮೂಲಕ ಕಸವನ್ನು ಸಂಗ್ರಹಿಸಿ ಶೂನ್ಯ ಕಸ ನಿರ್ವಹಣಾ ಘಟಕಕ್ಕೆ ತಂದು ಹಾಕಬೇಕಾದದು ಪಾಲಿಕೆಯ ಕೆಲಸ. ಆ ನಂತರ ಗುತ್ತಿಗೆ ಪಡೆದ ಸಂಸ್ಥೆಯು ಆ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರ ತಯಾರಿಸುವ ಕೆಲಸ ಮಾಡಬೇಕಿದೆ. ಆದರೆ ಈ ಕಾರ್ಯಕ್ಕಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಸ್ವಯಂ ಸೇವಾ ಸಂಸ್ಥೆಯು, ಘಟಕ ಆರಂಭವಾದ ಹೊಸದರಲ್ಲಿ ಕೇವಲ 6 ತಿಂಗಳು ಮಾತ್ರ ಕಾರ್ಯನಿರ್ವಹಿಸಿ ನಂತರ ಕಾರ್ಯ ಸ್ಥಗಿತಗೊಳಿಸಿದೆ. ಇದರಿಂದಾಗಿ ಇಲ್ಲಿ ಯಾವುದೇ ಚಟುವಟಿಕೆಯೂ ನಡೆಯುತ್ತಿಲ್ಲ.
ಸೌಲಭ್ಯವಿದ್ದರೂ ಸಾಧ್ಯವಾಗಿಲ್ಲ: ವಿದ್ಯುತ್, ನೀರು ಮುಂತಾದ ಎಲ್ಲಾ ರೀತಿಯ ಸೌಲಭ್ಯವನ್ನು ಘಟಕದಲ್ಲಿ ಕಲ್ಪಿಸಲಾಗಿದೆ. ಅಲ್ಲದೆ ಮನೆಯಿಂದಾಗಲಿ ಅಥವಾ ಉದ್ದಿಮೆಗಳಿಂದಾಗಲಿ ತ್ಯಾಜ್ಯ ಸಂಗ್ರಹಿಸುವ ಹೊಣೆಯನ್ನು ನಗರ ಪಾಲಿಕೆಯೇ ಹೊತ್ತು ಕಸವನ್ನು ಘಟಕಕ್ಕೆ ತಂದು ಸುರಿಯುವ ಕೆಲಸ ಮಾಡಲಿದೆ. ಆದರೂ ಗುತ್ತಿಗೆ ಪಡೆದ ಸಂಸ್ಥೆಗಳು ಹಿಂದೇಟು ಹಾಕುತ್ತಿವೆ. ಕಸವನ್ನು ಬೇರ್ಪಡಿಸಿ ಸಂಸ್ಕರಣೆ ಮಾಡಲು ಬೇಕಾದ ಸಿಬ್ಬಂದಿ ವೆಚ್ಚ ಅಧಿಕವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಮುಂದಾಗುತ್ತಿಲ್ಲ. ವಲಯ 1 ಹಾಗೂ 2 ರ ವ್ಯಾಪ್ತಿಯ ಹೆಚ್ಚುವರಿ ಕಸವನ್ನು ಜೆ.ಪಿ. ನಗರದ ಎಕ್ಸೆಲ್ ಪ್ಲಾಂಟ್‌ನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ರವಾನಿಸಲಾಗುತ್ತಿದ್ದು, ಇದರಿಂದಾಗಿ ಅಲ್ಲಿ ಕಸದ ರಾಶಿ ಮತ್ತಷ್ಟು ಬೃಹದಾಕಾರವಾಗಿ ಬೆಳೆಯಲು ಕಾರಣವಾಗಿದೆ. ಅಲ್ಲದೆ ಸಮರ್ಪಕವಾಗಿ ತ್ಯಾಜ್ಯದ ಸಂಸ್ಕರಣೆ ಆಯಾ ಕಾಲಕ್ಕೆ ನಿರ್ವಹಿಸದೆ ಇರುವುದರಿಂದ ದುರ್ನಾತ ಬೀರುವಂತಾಗಿದೆ.
ಶೂನ್ಯಕಸ ನಿರ್ವಹಣಾ ಘಟಕವನ್ನು ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ವಹಿಸಲಾಗಿತ್ತು. ಆದರೆ ಅವರು 6 ತಿಂಗಳ ಕಾಲ ಕಾರ್ಯನಿರ್ವಹಿಸಿದ ನಂತರ ಸಿಬ್ಬಂದಿ ವೇತನಕ್ಕೆ ಆರ್ಥಿಕ ನೆರವನ್ನು ಪಾಲಿಕೆ ನೀಡಬೇಕೆಂದು ಹೇಳಿ ಚಟುವಟಿಕೆಯನ್ನು ಸ್ಥಗಿತಗೊಳಿಸಿ 3 ತಿಂಗಳಾಗಿದೆ. ಈಗ ಮತ್ತೊಂದು ಸ್ವಯಂ ಸೇವಾ ಸಂಸ್ಥೆಯು ಮುಂದೆ ಬಂದಿದ್ದು, ಯಾವುದೇ ಆರ್ಥಿಕ ನೆರವು ಇಲ್ಲದಿದ್ದರೂ ನಿರ್ವಹಿಸುವುದಾಗಿ ಭರವಸೆ ನೀಡಿದೆ. ಅದಕ್ಕೆ ಘಟಕದ ನಿರ್ವಹಣೆ ವಹಿಸುವ ಸಂಬಂಧ ಚರ್ಚಿಸಲಾಗಿದೆ.
ಟಿ ಮಮತಾ ಶ್ರೇಣಿ, ಪರಿಸರ ಎಂಜಿನಿಯರ್, ವಲಯ 2, ಮೈಸೂರು ನಗರ ಪಾಲಿಕೆ

 ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.