ಬೆಂಗಳೂರಿನಲ್ಲಿ ಸಹಕಾರ ಭವನ ನಿರ್ಮಾಣ: ಮಹದೇವಪ್ರಸಾದ್
ಮೈಸೂರು: ಸಹಕಾರ ಕ್ಷೇತ್ರದ ಪುನಶ್ಚೇತನಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಮ್ಮ ಇಲಾಖೆ ಜಾಗದಲ್ಲಿ ಹಳೆ ಕಟ್ಟಡ ಕೆಡವಿ ಸಹಕಾರ ಭವನ ನಿರ್ಮಿಸುವುದಾಗಿ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಹೇಳಿದರು.
ದಿ ಬೆಂಗಳೂರು ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಲಿ.ನಿಂದ ಮೈಸೂರಿನ ಕುವೆಂಪುನಗರದಲ್ಲಿ ಆರಂಭಿಸಲಾದ ರಾಜ್ಯದ 18ನೇ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ 7 ಎಕರೆ ಜಾಗದಲ್ಲಿ ಸಹಕಾರ ಅಕಾಡೆಮಿ ಸ್ಥಾಪಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಎಲ್ಲಾ ಆಗು ಹೋಗುಗಳನ್ನು ಮೈಸೂರು ಕೇಂದ್ರದಿಂದಲೇ ನಿಯಂತ್ರಿಸುವ ತಂತ್ರಜ್ಞಾನ ಇದಾಗಿದೆ. ಜತೆಗೆ ಸಹಕಾರಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಸದ್ಯ 209 ಪತ್ತಿನ ಸಹಕಾರ ಸಂಘಗಳಿದ್ದು, 25 ರೋಗಗ್ರಸ್ತವಾಗಿವೆ. ಈ ಎಲ್ಲಾ ಬ್ಯಾಂಕುಗಳಿಂದ ವಾರ್ಷಿಕ 413 ಕೋಟಿ ನಿವ್ವಳ ಲಾಭ ಲಭಿಸಿದ್ದು, 873 ಕೋಟಿ ಷೇರು ಬಂಡವಾಳ ದಾಖಲಾಗಿದೆ. 11024 ಠೇವಣಿ ಬಂಡವಾಳ, 12400 ಕೋಟಿ ದುಡಿಮೆಯ ಬಂಡವಾಳ, 11000 ಕೋಟಿ ಸಾಲ ನೀಡಲಾಗಿದೆ. ಪರಸ್ಪರ ಸಹಕಾರದೊಂದಿಗೆ ಕ್ಷೇತ್ರ ಬೆಳೆಯುತ್ತಿದೆ. ನಮ್ಮ ಸರ್ಕಾರ ಸಾಮಾನ್ಯ ಜನರಿಗೆ ಸಹಕಾರ ಸಂಘಗಳ ಮೂಲಕ ಸೌಲತ್ತು ಕಲ್ಪಿಸಲು ಯಶಸ್ವಿನಿ ಯೋಜನೆಯನ್ನು ಹಳ್ಳಿಗಾಡಿನಿಂದ ನಗರಕ್ಕೆ ವಿಸ್ತರಿಸಲಾಗಿದೆ. ಅಂಗವಿಕಲರಿಗೆ ಆಶಾಕಿರಣ ಹಾಗೂ ಮಹಿಳೆಯರಿಗೆ ಪ್ರಿಯದರ್ಶಿನಿ ಯೋಜನೆ ಪ್ರಕಟಿಸಿದ್ದೇವೆ. ಈಗಾಗಲೇ 35 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ನ್ಯೂನತೆ ತಿದ್ದುಪಡಿ: ಸಹಕಾರ ಕ್ಷೇತ್ರದ ನ್ಯೂನತೆಯುಳ್ಳ ಕಾಯಿದೆಗಳಿಗೆ ತಿದ್ದುಪಡಿ ತರಲಾಗುತ್ತಿದ್ದು, ಸೌಹಾರ್ದ ಸ್ವತಂತ್ರ ಕಾಯಿದೆ ರಚಿಸಲಾಗಿದೆ. ಇದನ್ನೆಲ್ಲ ಬಳಸಿಕೊಂಡು ಸಹಕಾರ ಸಂಘಗಳು ಉನ್ನತಿ ಹೊಂದಬೇಕು. 107 ವರ್ಷಗಳ ಹಿಂದೆ ಆರಂಭವಾದ ದಿ ಬೆಂಗಳೂರು ಸಿಟಿ ಕೋ- ಆಪರೇಟಿವ್ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ. ಅಧ್ಯಕ್ಷರಾದವರು ತಮ್ಮ ಶ್ರಮ ಧಾರೆ ಎರೆದಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಬ್ಯಾಂಕು ಕೂಡ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತ ಹೆಜ್ಜೆ ಹಾಕಿದರು ಸಮಾಜ ಸುಧಾರಣೆಯಾಗುತ್ತದೆ ಎಂದು ಅವರು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಆವಲಹಳ್ಳಿ ಆರ್. ಚಂದ್ರಪ್ಪ, ಕಳೆದ ಮೇ ತಿಂಗಳ ಅಂತ್ಯಕ್ಕೆ ಬ್ಯಾಂಕಿನ ಪ್ರಗತಿ ಚೆನ್ನಾಗಿದೆ. ನಮ್ಮ ಬ್ಯಾಂಕು ಈವರೆಗೆ 53.09 ಕೋಟಿ ಷೇರು ಬಂಡವಾಳ ಹೊಂದಿದ್ದು, 81.11 ಕೋಟಿ ಆಪದ್ಧನ ಇಟ್ಟಿದೆ. 114.07 ಕೋಟಿ ಠೇವಣಿ ಹಣವಿದ್ದು, ಒಟ್ಟು ದುಡಿಯುವ ಬಂಡವಾಳ 127.49 ಕೋಟಿ ಹೊಂದಿದೆ ಎಂದರು.
ಸ್ಪಟಿಕಪುರಿ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ, ಶಾಸಕ ಎಂ.ಕೆ. ಸೋಮಶೇಖರ್, ಪಾಲಿಕೆ ಸದಸ್ಯ ನಂದೀಶ್ ಪ್ರೀತಂ, ಬಿಬಿಬಿಎಂ ಸದಸ್ಯ ಕೆ.ದೊಡ್ಡಣ್ಣ, ಬ್ಯಾಂಕಿನ ಉಪಾಧ್ಯಕ್ಷ ಆಂಜನಪ್ಪ, ನಿರ್ದೇಶಕರಾದ ದಾ.ಟಿ.ಎಂ. ದೇವರಾಜ್, ಕೆ.ಕೃಷ್ಣಪ್ಪ, ಕೆ.ಸಿ. ಚಿಕ್ಕಣ್ಣಯ್ಯ, ಕೆ.ಪಿ. ಸುರೇಸ್, ಸಿ. ರಘುನಾಥ್, ಯು.ಪಿ. ಪುರಾಣಿಕ್, ಪಿ. ದೊಡ್ಡಯ್ಯ ಇದ್ದರು. ಪ್ರಧಾನ ವ್ಯವಸ್ಥಾಪಕ ಎನ್. ಮಂಜುನಾಥ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

