ಮಳೆಗಾಗಿ ಕಪ್ಪೆ ಹಬ್ಬ
ಪಿರಿಯಾಪಟ್ಟಣ: ಕಾಕತಾಳೀಯ ಎಂಬಂತೆ ಕೆಲವೊಮ್ಮೆ ನಾವು ಆಚರಿಸುವ ಸಾಂಪ್ರದಾಯಕ ಆಚರಣೆಗಳು ಫಲಿಸುವ ಮೂಲಕ ಜನಸಾಮಾನ್ಯರ ನಂಬಿಕೆಗಳನ್ನು ಇಮ್ಮಡಿಗೊಳಿಸುತ್ತಿರುವುದಕ್ಕೆ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಆಚರಿಸಲ್ಪಟ್ಟ ಹಟ್ಟುಗಣಿ ಹಬ್ಬ (ಕಪ್ಪೆಹಬ್ಬ) ಸಾಕ್ಷಿಯಾಗಿದೆ.
ತಾಲೂಕಿನ ಹಲವಾರು ಗ್ರಾಮಗಳಲ್ಲಿನ ಜನರಲ್ಲಿ ಒಂದೊಂದು ರೀತಿಯ ನಂಬಿಕೆಗಳಿದ್ದು, ಮಳೆ ಬಾರದಿದ್ದಲ್ಲಿ ಮಳೆರಾಯನನ್ನು ಓಲೈಸುವ ಸಲುವಾಗಿ ಕಪ್ಪೆಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಯನ್ನು ನಡೆಸಿದಲ್ಲಿ ವರುಣದೇವ ಕೃಪೆ ತೋರಿ ಮಳೆ ಬರುತ್ತದೆ ಎಂಬುದು ಗ್ರಾಮಾಂತರ ಪ್ರದೇಶದ ಜನರ ನಂಬಿಕೆಯಾಗಿದೆ. ಇದರಂತೆಯೇ ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಕಪ್ಪೆಹಬ್ಬ ಆಚರಿಸಲಾಗಿದ್ದು, ಕೆಲವೇ ಗಂಟೆಗಳಲ್ಲಿ ಮಳೆಬೀಳುವ ಮೂಲಕ ಜನರ ಸಾಂಪ್ರದಾಯಿಕ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.
ಆಚರಣೆಯ ಬಗೆ: ಗ್ರಾಮದ ಸಮೀಪವಿರುವ ಕೊಪ್ಪಲಿನಲ್ಲಿ ಬಹಳ ಹಿಂದಿನಿಂದಲೂ ಆಚರಣೆಗೆ ಬಂದಿರುವ ಕಪ್ಪೆಹಬ್ಬವನ್ನು ಆಚರಿಸಲಾಗಿದ್ದು, ಗ್ರಾಮದ ಜನರೆಲ್ಲ ತಮಗೆ ಸಾಧ್ಯವಾದಷ್ಟು ಹಣ ಹಾಗೂ ಧಾನ್ಯವನ್ನು ಸಂಗ್ರಹಿಸಿ ಗ್ರಾಮದ ಸಮೀಪವಿರುವ ಅರಳಿಮರದ ಕೆಳಗೆ ಕಳಸಪೂಜೆ ನಡೆಸಿ, ಸಂಗ್ರಹಿಸಲ್ಪಟ್ಟ ಧಾನ್ಯದಿಂದ ಅಡುಗೆ ಮಾಡಿ ಮಳೆಗಾಗಿ ದೇವರನ್ನು ಪ್ರಾರ್ಥಿಸಿ ಊರಿನ ಜನರು ಸಾಮೂಹಿಕವಾಗಿ ಊಟ ಮಾಡುತ್ತಾರೆ.
ಕಪ್ಪೆಗಳನ್ನು ಹಿಡಿದು ತಂದು ಒಂದು ದೊಡ್ಡ ಒನಕೆಯ ಮಧ್ಯೆ ಭಾಗಕ್ಕೆ ಬಟ್ಟೆಯಲ್ಲಿ ಕಟ್ಟಿ ಇಬ್ಬರು ಬಾಲಕರು ಒನಕೆಯನ್ನು ಸಾಂಪ್ರದಾಯಕ ಪೂಜಾ ವಿಧಿವಿಧಾನಗಳ ಮೂಲಕ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಮೆರವಣಿಗೆ ಮನೆಗಳ ಮುಂದೆ ಬಂದಂತೆ ಕಪ್ಪೆಗಳಿರುವ ಒನಕೆಗೆ ಹಾಗೂ ಒನಕೆ ಹೊತ್ತು ಬರುವ ಬಾಲಕರಿಗೆ ಮನೆಯವರು ನೀರನ್ನು ಹಾಕುವ ಮೂಲಕ ಸಾಂಪ್ರದಾಯಿಕ ಆಚರಣೆ ನಡೆಸುತ್ತಾರೆ.
ಪಿರಿಯಾಪಟ್ಟಣ ತಾಲೂಕಿನ ಹಲವೆಡೆ ಮಳೆ
ಪಿರಿಯಾಪಟ್ಟಣ: ಮಳೆಯಾಗದೆ ಕಂಗಾಲಾಗಿದ್ದ ತಾಲೂಕಿನ ರೈತರಿಗೆ ಶನಿವಾರ ಸುರಿದ ಮಳೆ ಸ್ವಲ್ಪಮಟ್ಟಿನ ಸಂತಸವನ್ನುಂಟು ಮಾಡಿದೆ. ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಹಾಗೂ ಜೋಳ, ಶುಂಠಿ ಬೆಳೆಗಳ ನಾಟಿ ಕಾರ್ಯ ಚುರುಕುಗೊಂಡಿದ್ದು, ತಾಲೂಕಿನ ರಾವಂದೂರು ಹೋಬಳಿಯ ಕೆಲವು ಭಾಗಗಳನ್ನು ಹೊರತುಪಡಿಸಿ, ಇತರೆ ಪ್ರದೇಶಗಳಲ್ಲಿ ಬಹುತೇಕ ಉತ್ತಮ ಮಳೆಯಾಗಿದ್ದು, ಶನಿವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚುಕಾಲ ಭಾರಿ ಮಳೆಯಾಗಿದೆ. ಶನಿವಾರ ಮಧ್ಯಾಹ್ನದ ಸಂಜೆಯ ವೇಳೆಗೆ ಅಳಲೂರು ವ್ಯಾಪ್ತಿಯಲ್ಲಿ 12 ಮಿ.ಮೀ, ಮುತ್ತೂರು ವ್ಯಾಪ್ತಿಯಲ್ಲಿ 10 ಮಿ.ಮೀ, ಬೆಟ್ಟದಪುರ ವ್ಯಾಪ್ತಿಯಲ್ಲಿ 10 ಮಿ.ಮೀ, ಬೈಲುಕುಪ್ಪೆ ವ್ಯಾಪ್ತಿಯಲ್ಲಿ 8 ಮಿ.ಮೀ, ಪಿರಿಯಾಪಟ್ಟಣದಲ್ಲಿ 4 ಮಿ.ಮೀ ಮಳೆಯಾಗಿದೆ.
82 ಮಿ.ಮೀ ಮಳೆ: ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 2.30 ರಿಂದ 2.45ರವರೆಗೆ 82 ಮಿ.ಮೀ. ಹಾಗೂ ಮೈಸೂರು ತಾಲೂಕಿನ ಹರನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ 2.15 ರಿಂದ 2.30ರವರೆಗೆ 60 ಮಿ.ಮೀ. ಮಳೆಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪಿ.ಎನ್. ಸುಬ್ರಮಣ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

