ಮೈಸೂರು

ಹಳ್ಳಿ ಮಕ್ಳಿಗೆ ನಾಟಕ ಹೇಳಿಕೊಡುವಲ್ಲಿ 'ಭಾಗಿ'

Published On :

-ಧರ್ಮಾಪುರ ನಾರಾಯಣ್
ಹುಣಸೂರು: ಗ್ರಾಮೀಣ ಪ್ರದೇಶದಲ್ಲಿ ಅರಳಿ ದೂರದ ಅಸ್ಸಾಂನಲ್ಲಿ ತನ್ನ ಅಪೂರ್ವ ರಂಗ ಕಲಾ ಪ್ರತಿಭೆಯಿಂದ ಕನ್ನಡದ ಕೀರ್ತಿ ಬೆಳಗುತ್ತಿರುವ ಕಲಾಲೋಕದ ಕುಸುಮ, ಅಪರೂಪದ ಪ್ರತಿಭೆ ಗಾವಡಗೆರೆಯ ಭಾಗೀರಥಿಬಾಯಿ ಕದಂ ಈಗ ತವರೂರಿನ ಓಂ.ಗುರುಲಿಂಗ ಜಂಗಮ ಮಠದ ವಿದ್ಯಾರ್ಥಿಗಳಿಗೆ ನಾಟಕ ಕಲಿಸಿದ್ದಾರೆ.
ತಾಲೂಕಿನ ಗಾವಡೆಗೆರೆಯ ಪಿ.ಕೆ. ಅಣ್ಣಾಜಿರಾವ್ ಮತ್ತು ಕೃಷ್ಣಾಬಾಯಿ ಅವರ ಪುತ್ರಿ ಭಾಗೀರಥಿಬಾಯಿ ಕದಂ, 1963ರಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಬಾಲ್ಯದಿಂದಲೂ ಅಭಿನಯದ ಗೀಳು ತುಂಬಿಕೊಂಡು ಅದನ್ನು ಸಾಕ್ಷಾತ್ಕರಿಸಿಕೊಳ್ಳಲು ಹಲವಾರು ಅಡೆ ತಡೆ ಎದುರಿಸಿದ ಭಾಗೀರಥಿ ಅಸ್ಸಾಂನಲ್ಲಿ ಕಲಾ ಸಾಧನೆ ಮಾಡಿದರು.
ಅಂಗನವಾಡಿ ಕಾರ್ಯಕರ್ತೆಯಾಗಿ ಜೀವನ ಸಾಗಿಸಿ, ಬಳಿಕ ಕಲಾ ಕ್ಷೇತ್ರಕ್ಕೆ ತನ್ನನ್ನು ಸಮರ್ಪಿಸಿಕೊಂಡದ್ದು ಮಾತ್ರ ಅಚ್ಚರಿಯ ವಿಷಯ. ಹೆಗ್ಗೋಡಿನ ನೀನಾಸಂ ಅಭಿನಯದ ವಿಭಾಗದಲ್ಲಿ ತರಬೇತಿ ಪಡೆದ ಭಾಗೀರಥಿ ಬಾಯಿ ಕನ್ನಡ ನಾಡನ್ನು ಸುತ್ತಿ 250ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿ ತನ್ನ ಮನೋಜ್ಞ ಅಭಿನಯದ ಪ್ರತಿಭೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ರಂಗ ನಿರ್ದೇಶಕರಾದ ಬಿ.ವಿ. ಕಾರಂತ, ಕೆ.ವಿ. ಸುಬ್ಬಣ್ಣ, ಪ್ರಸನ್ನ, ಚಿದಂಬರರಾವ್ ಜಂಬೆ, ಸತ್ಯದೇವ್, ಜಿತೇಂದ್ರ ವರ್ಮ ಮತ್ತು ಡಿ.ಆರ್. ಅಂಕುರ್ ಅವರ ನಿರ್ದೇಶನದಲ್ಲಿ ತಮ್ಮ ಪರಿಶ್ರಮ ಮೆರೆದರು. 1986ರಿಂದ 1991ರ ಅವಧಿಯಲ್ಲಿ ಪಡೆದ ಹೆಗ್ಗೋಡಿನ ರಂಗ ಶಿಕ್ಷಣ, ಅವರ ಕಲಾ ಸಾಮರ್ಥ್ಯಕ್ಕೆ ಸಾಣೆ ಹಿಡಿದು ಅವರಿಗೆ ಚೈತನ್ಯ ಧಾರೆಯಾಯಿತು. ಬಳಿಕ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದು, 1992ರಲ್ಲಿ ಲಂಡನ್ನಿನ  ತಾರಾ ಆರ್ಟ್ಸ್ ನಿರ್ಮಾಣದ ಹೇರ್ ರಾಂಜ ದೂರದರ್ಶನ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಇಂಗ್ಲೆಂಡ್, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸುಮಾರು 56 ನಾಟಕ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಮೃತ್ಯುಂಜಯ, ಪುಷ್ಪರಾಣಿ, ಮೊದಾರ್, ಅಘಾಲಿ ಅತ್ಪಾರ್ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಆರ್ಯಭಟ ಚಿತ್ರದಲ್ಲಿ ಇವರು ನಿರ್ವಹಿಸಿದ ಪಾತ್ರ ವಿಶಿಷ್ಟ ನೆನಪಾಗಿದೆ. ಭಗೀರಥಿ ಬಾಯಿ ಕನ್ನಡ, ಅಸ್ಸಾಮಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್‌ಗಳಲ್ಲಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಗಾವಡಗೆರೆಯ ಓಂ. ಗುರುಲಿಂಗ ಜಂಗಮಠದ ಶ್ರೀ ನಟರಾಜ ಸ್ವಾಮೀಜಿ ಅವರ ಮನವಿಗೆ ಸ್ಪಂದಿಸಿ ಮಠದ ಮಕ್ಕಳಿಗೆ ರವೀಂದ್ರನಾಥ ಟಾಗೋರ್ ಅವರ ಕುರಿತಾದ ಬಿ.ವಿ. ಕಾರಂತ ಅವರ ಪಂಜರದ ಗಿಳಿ ನಾಟಕವನ್ನು ಕಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.