ಮೈಸೂರು

ನಾಡ ಕಚೇರಿಯಿಂದ ಗ್ರಾಮಗಳತ್ತ ಕಂದಾಯ ಸೇವೆ

Published On :

ಮೈಸೂರು: ಭೂಮಿಗೆ ಸಂಬಂಧಿಸಿದ ಖಾತೆ, ಜಾತಿ ಆದಾಯ ಪ್ರಮಾಣ ಪತ್ರ, ನಾಡ ಕಚೇರಿ ಕೆಲಸಗಳು ಹಾಗೂ ಕಾಗದ ಪತ್ರಗಳಿಗೆ ಸಂಬಂಧಿಸಿದ ಕಂದಾಯ ಸೇವೆಯನ್ನು ನಾಡ ಕಚೇರಿಯಿಂದ ಗ್ರಾಮಗಳತ್ತ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದ್ದು, ಇದರ ಪ್ರಥಮ ಹಂತದ ನಾಲ್ಕು ಸೇವೆಗಳಿಗೆ ಮೈಸೂರಿನಲ್ಲಿ ವಿದ್ಯುಕ್ತವಾಗಿ ಮಂಗಳವಾರ ಚಾಲನೆ ನೀಡಲಾಯಿತು.
ಜಿಪಂ ಸಭಾಂಗಣದಲ್ಲಿ ಆನ್‌ಲೈನ್ ಮುಖಾಂತರ ನಾಡ ಕಚೇರಿ ಪ್ರಮಾಣ ಪತ್ರಗಳು, ಕಾಗದ ರಹಿತ ಪ್ರಮಾಣ ಪತ್ರಗಳ ವ್ಯವಸ್ಥೆ, ಯುಪಿಆರ್ ಯೋಜನೆಯಲ್ಲಿ ಸ್ವಯಂ ಚಾಲಿತ ಖಾತಾ ಬದಲಾವಣೆ ಮತ್ತು ಅಂತಿಮ ಪಿಆರ್ ಕಾರ್ಡ್ ವಿತರಣೆ ಕಾರ್ಯಕ್ರಮಗಳನ್ನು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಉದ್ಘಾಟಿಸಿದರು.
ಆನ್‌ಲೈನ್ ಸೇವೆ: ಇನ್ನು ಮುಂದೆ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ 25 ವಿವಿಧ ಬಗೆಯ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮುಖಾಂತರವೇ ವಿತರಿಸಲಾಗುತ್ತದೆ. ಹೊಸ ವ್ಯವಸ್ಥೆಯಡಿ ಅಂತರ್ಜಾಲ ಸಂಪರ್ಕ ಹೊಂದಿರುವ ಯಾವುದೇ ವ್ಯಕ್ತಿ ತನ್ನ ಮನೆಯಿಂದ ಅಥವಾ ಪ್ರಪಂಚದ ಯಾವುದೇ ಭಾಗದಿಂದ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು. ಅಂತಿಮ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮುಖಾಂತರ ತಲುಪಿಸಲಾಗುತ್ತದೆ. ಅರ್ಜಿ ಶುಲ್ಕವನ್ನು ಕ್ರೆಡಿಟ್ ಅಥವಾ ಡೆಬಿಟ್, ನೆಟ್ ಬ್ಯಾಂಕಿಂಗ್ ಮುಖಾಂತರ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆಯಿಂದ ನಾಡ ಕಚೇರಿಗೆ ಅಲೆಯುವ ಕಾಟ ತಪ್ಪಿದಂತಾಗಿದೆ. ಸರ್ಕಾರಕ್ಕೆ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ.
ಕಾಗದ ರಹಿತ ಪ್ರಮಾಣ ಪತ್ರ: ಈ ಸೇವೆಯಡಿ ಸಾರ್ವಜನಿಕರು ಗಣಕೀಕೃತವಾಗಿ ಅನುಮೋದಿಸಲ್ಪಟ್ಟ ಪ್ರಮಾಣ ಪತ್ರ ಬದಲಿಗೆ ಪ್ರಮಾಣ ಪತ್ರದ ಗಣಕೀಕೃತ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ಪಡೆದುಕೊಳ್ಳಬಹುದು. ಅರ್ಜಿದಾರರು ಪ್ರಮಾಣ ಪತ್ರ ಸಲ್ಲಿಸಬೇಕಾದ ಇಲಾಖೆಗೆ ಈ ಸಂಖ್ಯೆಯನ್ನು ನೀಡಿದರೆ ಸಾಕು. ಸಂಬಂಧಪಟ್ಟ ಇಲಾಖೆಗೆ ಅಜಲ್‌ಜೀ ಜನಸ್ನೇಹಿ ಕೇಂದ್ರದಿಂದ ಗಣಕೀಕೃತ ಪತ್ರ ಲಗತ್ತಿಸಲಾಗುತ್ತದೆ. ಆ ಸಂಸ್ಥೆಯವರು ನಾಡ ಕಚೇರಿಯಿಂದ ದತ್ತಾಂಶ ಪಡೆದು ಪರಿಶೀಲಿಸಿಕೊಳ್ಳುತ್ತಾರೆ. ಜತೆಗೆ ನಕಲಿ ಪ್ರಮಾಣ ಪತ್ರಗಳನ್ನು ಕಡ್ಡಾಯಗೊಳಿಸದಂತೆ ಕಂದಾಯ ಇಲಾಖೆಯಿಂದ ಎಚ್ಚರಿಕೆ ನೀಡಲಾಗುತ್ತದೆ. ಈ ವ್ಯವಸ್ಥೆಯಿಂದ ಅರ್ಜಿದಾರರಿಗೆ ಸಮಯದ ಉಳಿತಾಯ, ನಕಲಿ ಪ್ರಮಾಣ ಪತ್ರಗಳ ಹಾವಳಿಗೆ ತಡೆ ಹಾಗೂ ದತ್ತಾಂಶ ಆಧಾರಿತ ಸೇವೆಯಿಂದ ಕೆಲಸ ಸರಾಗವಾಗಿ ಆಗುವಂತೆ ಮಾಡಲಾಗುತ್ತದೆ.
ಪಿಆರ್ ಕಾರ್ಡ್ ವಿತರಣೆ: ನಗರ ಪ್ರದೇಶದಲ್ಲಿ ವಾಸಿಸುವವರ ಮನೆ, ಜಮೀನು, ಸೈಟಿಗೆ ಸಂಬಂಧಿಸಿದಂತೆ ಖಾತೆ, ಹಕ್ಕು, ಋಣಭಾರ ಮಾಹಿತಿ, ಆಸ್ತಿ ಮೇಲಿನ ಸಾಲದ ಮಾಹಿತಿ, ಪ್ರಸ್ತುತ ಮಾಲೀಕರಿಗೆ ಆಸ್ತಿ ಲಭ್ಯವಾದ ಮಾಹಿತಿ, ಅನುಭೋಗದ ಹಕ್ಕು ಹೀಗೆ ಹಲವು ಮಾಹಿತಿಗಳುಳ್ಳ ದಂತ್ತಾಂಶ ಸಂಗ್ರಹವೇ ಪಿಆರ್ ಕಾರ್ಡ್. ಒಂದು ಬಾರಿ ಈ ಕಾರ್ಡ್ ವಿತರಿಸಿದರೆ ಸಾಕು, ಆಸ್ತಿ ಮಾಲೀಕನಿಗೆ ನಂಬಿಕೆ ಹುಟ್ಟುತ್ತದೆ. ಅಲ್ಲದೇ ಆತನ ಆಸ್ತಿಯನ್ನು ಬೇರೆಯವರು ಲಪಟಾಯಿಸಲು ಸಾಧ್ಯವಿರುವುದಿಲ್ಲ. ಗೂಗಲ್‌ನಲ್ಲಿ ಆಸ್ತಿ ಮಾಲೀಕತ್ವ ಹಾಗೂ ನಕ್ಷೆಯನ್ನು ವೀಕ್ಷಿಸಬಹುದು.

ಉತ್ತಮ ಕಾರ್ಯಕ್ರಮಗಳಿದ್ದರೂ ಅನುಷ್ಠಾನ ಕೊರತೆ
ಭೂಮಿ ಸೃಷ್ಟಿಯಾದಾಗಿಂದ ಭೂ ವಿವಾದ ಹುಟ್ಟಿಕೊಂಡಿತು. ಈ ವಿವಾದಗಳೆಲ್ಲವೂ ನಮ್ಮ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಅಧಿಕಾರಿಗಳಲ್ಲಿನ ನಿಷ್ಠೆಯ ಕೊರತೆ ಹಾಗೂ ಅನುಷ್ಠಾನದ ಕೊರತೆಯಿಂದ ಸಮಸ್ಯೆಗಳು ಹಾಗೇ ಉಳಿದಿವೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಉತ್ತಮ ಸಂಬಳ ನೀಡಿ, ಉದ್ಯೋಗ ಭದ್ರತೆ ನೀಡಿದ್ದರೂ ಬೇಡದ ಕೆಲಸ ಮಾಡಿ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ. ಒಬ್ಬ ಸಾಮಾನ್ಯ ರೈತ ಖಾತೆಗಾಗಿ, ಪಹಣಿ ಪತ್ರ ಪಡೆಯಲು ಬಂದರೆ ಅವರನ್ನು ಅಲೆದಾಡಿಸುತ್ತಾರೆ. ಲಂಚ ಕೇಳುತ್ತಾರೆ. ಸರ್ಕಾರಿ ಉದ್ಯೋಗದಲ್ಲಿದ್ದವರು ಈ ರೀತಿ ಯಾಕೆ ಮಾಡುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ. ಕೆಲವೊಮ್ಮೆ ಮಾನವೀಯತೆ ಇಲ್ಲದಿರುವುದರ ಬಗ್ಗೆ ಯೋಚಿಸಿದರೆ ನನಗೆ ನೋವಾಗುತ್ತದೆ ಎಂದು ವಿಷಾದಿಸಿದರು.
ಒಂದು ಜಿಲ್ಲೆಯಲ್ಲಿ ಡಿಸಿ, ಜಿಪಂ ಸಿಇಒ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಹೆಚ್ಚು ಜವಾಬ್ದಾರಿಗಳಿರುತ್ತವೆ. ಸರ್ಕಾರದೊಂದಿಗೆ ಅಧಿಕಾರಿಗಳು ಕೈಜೋಡಿಸಿದರೆ ಶ್ರೀಸಾಮಾನ್ಯನ ಸೇವೆ ಮಾಡಬಹುದು. ನಾನು ಕಂದಾಯ ಇಲಾಖೆ ವಹಿಸಿಕೊಂಡ ಮೇಲೆ ಹಲವು ಗುರುತರ ಬದಲಾವಣೆ ತಂದಿದ್ದೇನೆ. ಅದು ಜನರಿಗೆ ಗೊತ್ತಾಗಿಲ್ಲ. ಆದ್ದರಿಂದ ಶ್ವೇತಪತ್ರ ಹೊರಡಿಸುವ ಬಗ್ಗೆ ಚಿಂತನೆ ಇದೆ. ಇಲಾಖೆಯಲ್ಲಿ ಖಾಲಿ ಇದ್ದ ಭೂಮಾಪಕರ ಹುದ್ದೆಗಳನ್ನು ಭರ್ತಿ ಮಾಡಿದ್ದೇನೆ. ಇನ್ನಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದೇನೆ ಎಂದರು.
ಮರು ಸಮೀಕ್ಷೆಗೆ ಚಾಲನೆ: ಬೆಂಗಳೂರು ನಗರ ಒಂದರಲ್ಲೇ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 6000 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಮುಂದಿನ ದಿನಗಳಲ್ಲಾದರೂ ಈ ರೀತಿಯ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲವನ್ನೂ ಕಂಪ್ಯೂಟರೀಕರಣ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ಮರು ಸಮೀಕ್ಷೆಗೆ ಚಾಲನೆ ನೀಡಲಾಗುವುದು. ಅದಕ್ಕಾಗಿ ಕೇಂದ್ರ ಸರ್ಕಾರ 600 ಕೋಟಿ ಹಾಗೂ ರಾಜ್ಯ ಸರ್ಕಾರ 300 ಕೋಟಿ ವ್ಯಯಿಸುತ್ತಿದೆ. ಖಾತೆ ನೀಡುವಾಗ ಉತ್ಕೃಷ್ಟದ ಕಾರ್ಡ್ ಲ್ಯಾಮಿನೇಷನ್ ಮಾಡಿ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಅದೇ ರೀತಿ ಪಿಂಚಣಿ ಕಾರ್ಡುಗಳನ್ನು ಸಹ ದೀರ್ಘಾವಧಿವರೆಗೆ ಬಾಳಿಕೆ ಬರುವ ಹಾಗೆ ಮುದ್ರಿಸಿ ಕೊಡಲಾಗುವುದು ಎಂದು ತಿಳಿಸಿದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಇಲಾಖೆ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಭೂಮಿಗೆ ಸಂಬಂಧಿಸಿದ ಖಾತೆ ಸೇರಿದಂತೆ ಇನ್ನಿತರ 24 ಸೇವೆಗಳನ್ನು ನಾಡ ಕಚೇರಿಯಲ್ಲಿ ಸಿಗುವಂತೆ ಮಾಡಿದ್ದೇವೆ. ಇನ್ನು ಎಂಟು ತಿಂಗಳಲ್ಲಿ ಗ್ರಾಮಗಳ ಮಟ್ಟಿಗೆ ಕೊಂಡೊಯ್ಯಲಾಗುವುದು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜನಸಾಮಾನ್ಯರ ಹಿತರಕ್ಷಣೆ ಕಾಪಾಡಲಾಗುವುದು. ತಂತ್ರಜ್ಞಾನ ಬಳಕೆಯಿಂದ ಭ್ರಷ್ಟಾಚಾರಕ್ಕೆ ತಡೆ, ವಿಳಂಬ ನೀತಿಗೆ ಪೆಟ್ಟು ಹಾಗೂ ಗ್ರಾಮಗಳಿಗೆ ಹೋಗಿ, ಫಲಾನುಭವಿಗಳ ಮನೆ ಬಾಗಿಲಿಗೆ ಸೇವೆ ತಲುಪಿಸುವುದು ನಮ್ಮ ಇಲಾಖೆಯ ಆದ್ಯ ಕರ್ತವ್ಯವಾಗಿದೆ ಎಂದರು. ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ. ಮಹದೇವು, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ವಿ. ಪೊನ್ನುರಾಜು, ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ, ಎನ್‌ಐಸಿ ಉಪ ಮಹಾನಿರ್ದೇಶಕ ಎಂ. ವೆಂಕಟೇಶನ್, ತಾಂತ್ರಿಕ ನಿರ್ದೇಶಕಿ ಎಂ.ಸಿ. ಜಯಂತಿ ಇದ್ದರು. ಜಿಲ್ಲಾಧಿಕಾರಿ ಸಿ. ಶಿಖಾ ಸ್ವಾಗತಿಸಿದರು. ಉಪವಿಭಾಗಾಧಿಕಾರಿ  ಬಸವರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.