ಮೈಸೂರು

ಉದ್ಯೋಗ ಕಲ್ಪಿಸುವಲ್ಲಿ ಮಹಿಳಾ ಸಮಖ್ಯಾ ಮುಂದು

Published On :

ಹುಣಸೂರು: ಸ್ವಯಂ ಹಾಗೂ ಸರ್ಕಾರಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹಿಳಾ ಸಮುಖ್ಯಾ-ಕರ್ನಾಟಕ ಕಾರ್ಯನಿರ್ವಹಿಸುತ್ತಿದೆ ಎಂದು ಡೀಡ್ ಸಂಸ್ಥೆಯ ಶಾರದಾ ವಳಗೆರೆ ಹೇಳಿದರು.
ಪಟ್ಟಣದ ಡೀಡ್ ಸಂಸ್ಥೆ ಆವರಣದಲ್ಲಿನ ಕೇಂದ್ರ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಮಹಿಳಾ ಶಿಕ್ಷಣ ಕೇಂದ್ರದ ಪ್ರೌಢಾಶಾಲಾ ವಿದ್ಯಾರ್ಥಿನಿಯರು ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ-ಕೌಶಲ್ಯ ಅಡಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳ ಭವಿಷ್ಯ ಹಾಳು ಮಾಡಬಾರದೆಂದು ತಿಳಿಸಿದರು.
ಮಹಿಳಾ ಸಮಖ್ಯ ಜಿಲ್ಲಾ ಸಂಯೋಜಕಿ ಲೋಚನಾ ಮಾತನಾಡಿ, ಹೆಣ್ಣು ಮಕ್ಕಳು ಅಭ್ಯುದಯಕ್ಕಾಗಿರುವ ಈ ಕೇಂದ್ರಕ್ಕೆ ಎಲ್ಲಾ ಧರ್ಮ, ಜಾತಿ ಬಡವರು ಸೇರಬಹುದಾಗಿದೆ ಎಂದರು. ಶಾಲೆಯಲ್ಲಿ 9 ಮತ್ತು 10ನೇ ತರಗತಿಯಲ್ಲಿ 32 ಮಕ್ಕಳಿದ್ದು, ಇಲ್ಲೇ ಪಾಠ-ಪ್ರವಚನ, ಆಟ-ಊಟ, ಕರಾಟೆ, ಸಂಗೀತ, ಕಂಪ್ಯೂಟರ್ ಕಲಿಕೆ ಹೇಳಿ ಕೊಡಲಾಗುತ್ತಿದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಶೇ.70ರಷ್ಟು ಫಲಿತಾಂಶ ಬಂದಿದೆ. ಕೆಲವರು ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ಪ್ರಗತಿಗೆ ಮಹಿಳಾ ಸಮಖ್ಯಾ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಹೇಳಿದರು.
ಈ ಶಾಲೆಯಲ್ಲಿ ಕಲಿತದ್ದನ್ನು ಪ್ರದರ್ಶಿಸಲು ವಾರ್ಷಿಕೋತ್ಸವ ಸಮಾರಂಭಕ್ಕೆ ಕೇಂದ್ರವೇ ವೇದಿಕೆ ಕಲ್ಪಿಸಿತ್ತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಳೆಯ ನಡುವೆಯು ಚಿತ್ರ ಗೀತೆಗಳಿಗೆ ನೃತ್ಯಗಳು, ರಾಷ್ಟ್ರಗೀತೆ, ಜಾನಪದ ಹಾಡುಗಳು, ಕಾರ್ಯಕ್ರಮದ ನಿರೂಪಣೆ, ಸ್ವಾಗತ, ವಂದನಾರ್ಪಣೆ ಸೇರಿದಂತೆ ಈ ಮಕ್ಕಳು ನಿರ್ವಹಿಸುವ ಮೂಲಕ ತಾವು ಯಾರಿಗೇನು ಕಮ್ಮಿ ಇಲ್ಲದಂತೆ ಗಮನ ಸೆಳೆಯುವ ಕಾರ್ಯಕ್ರಮ ನೀಡಿದರು. ಕಿತ್ತೂರು ರಾಣಿ ಚನ್ನಮ್ಮ ಶಾಲಾ ಮುಖ್ಯ ಶಿಕ್ಷಕಿ ರೇಖಾ, ಕರಾಟೆ ಶಿಕ್ಷಕ ರಮೇಶ್, ಸಂಪನ್ಮೂಲ ವ್ಯಕ್ತಿ ಮರ್ಸಿ, ವಾರ್ಡನ್ ಶಕುಂತಲಾ ಮಾತನಾಡಿದರು.

ಮೂಲ ಸೌಕರ್ಯ ವಂಚಿತ ಚುಂಚನಕಟ್ಟೆ ಪ್ರವಾಸಿ ಮಂದಿರ
ಕೆ.ಆರ್. ನಗರ: ಎರಡು ವರ್ಷದ ಹಿಂದೆ ಆಧುನಿಕರಣಗೊಂಡಿರುವ ತಾಲೂಕಿನ ಚುಂಚನಕಟ್ಟೆಯಲ್ಲಿ ಪ್ರವಾಸಿ ಮಂದಿರದಲ್ಲಿ ಯಾವುದೇ ಮೂಲ ಸವಲತ್ತುಗಳಿಲ್ಲದೆ ಸಾರ್ವಜನಿಕರ ಬಳಕೆಗೆ ಬಾರದಂತಾಗಿದೆ.
1899ರಲ್ಲಿ ಮೈಸೂರು ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ನಿರ್ಮಾಣಗೊಂಡಿರುವ ಪ್ರವಾಸಿ ಮಂದಿರ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಒಂದು ಶತಮಾನ ಕಳೆದಿದ್ದರೂ ಕೆಲ ವರ್ಷಗಳ ಹಿಂದೆ ಸಂಪೂರ್ಣವಾಗಿ ಶಿಥಿಲಗೊಂಡ್ಡಿದ ಈ ಪ್ರವಾಸಿ ಮಂದಿರವನ್ನು ಶಾಸಕ ಸಾ.ರಾ. ಮಹೇಶ್ ಸರ್ಕಾರದಿಂದ 5 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದರು.
ಪ್ರವಾಸಿ ಮಂದಿರದಲ್ಲಿ ಮುರುಕಲು ಮಂಚ, ಹರಿದ ಹಾಸಿಗೆ, ದಿಂಬು, ರಗ್ಗು, ತಿರುಗದ ಫ್ಯಾನ್‌ಗಳು,  ಅಶುಚಿತ್ವದ ಶೌಚಾಲಯದ ಜತೆಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲಿ ಮರಿಚಿಕೆಯಾಗಿರುವುದು ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ.
ಪ್ರವಾಸಿ ಮಂದಿರಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಪುರುಷ ಮೇಟಿಯನ್ನು ನೇಮಕಮಾಡಿ ಮುಜರಾಯಿ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯವರಿಗೆ ಹಸ್ತಾಂತರಿಸಿ, ಪ್ರವಾಸಿಗರಿಂದ ದೂರವಾಗಿರುವ ಮಂದಿರವನ್ನು ಅಭಿವೃದ್ಧಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.