ಶಾಸ್ತ್ರೀಯ ನೃತ್ಯ ಕೀಳುಮಟ್ಟಕ್ಕೆ ಇಳಿಸಬಾರದು'
ಮೈಸೂರು: ಜನ ಇಷ್ಟಪಡುತ್ತಾರೆ ಎಂಬ ಕಾರಣಕ್ಕಾಗಿ ಶಾಸ್ತ್ರೀಯ ನೃತ್ಯಗಳನ್ನು ಕೀಳುಮಟ್ಟಕ್ಕೆ ಇಳಿಸಬಾರದು ಎಂದು ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಹೇಳಿದರು.
ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಂಸ್ಕೃತಿ ಸಂಸ್ಥೆಯು ಆಯೋಜಿಸಿರುವ ಎರಡು ದಿನಗಳ ಸಂಸ್ಕೃತಿ ಸಂಗಮ- 2014 (ವಿವಿಧ ನೃತ್ಯ ಶೈಲಿಗಳ ಸಂಭ್ರಮ) ಕಾರ್ಯಕ್ರಮವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮವರು ಪಾಶ್ಚಿಮಾತ್ಯ ನೃತ್ಯದತ್ತ ವಾಲುತ್ತಿದ್ದಾರೆ. ಇದರಿಂದ ನಮ್ಮ ನೃತ್ಯದಲ್ಲಿ ವ್ಯತ್ಯಾಸಗಳು ಆಗುತ್ತಿರುವುದು ಕಾಣುತ್ತಿದ್ದೇವೆ. ಬಹಳ ದೊಡ್ಡ ಕಲಾವಿದರು ಶಾಸ್ತ್ರೀಯ ನೃತ್ಯ ಜನ ಇಷ್ಟಪಡುವುದಿಲ್ಲ. ಜನರು ಇಷ್ಟಪಡುವ ರೀತಿಯಲ್ಲಿ ಬದಲಾಯಿಸಿಕೊಳ್ಳಬೇಕು ಎಂದು ಮಾತನಾಡುತ್ತಾರೆ. ದೈವಿಕ ಕಲೆಯಾದ ಶಾಸ್ತ್ರೀಯ ನೃತ್ಯವನ್ನು ಜನ ಇಷ್ಟಪಡುತ್ತಾರೆಂದು ಕೀಳುಮಟ್ಟಕ್ಕೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ಉದ್ಯಮಿ ಕೆ.ವಿ. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ನೃತ್ಯ ಕಲಾ ಪರಿಷತ್‌ನ ಕಾರ್ಯದರ್ಶಿ ಪ್ರೊ.ಕೆ. ರಾಮಮೂರ್ತಿರಾವ್ ಮುಖ್ಯ ಅತಿಥಿಯಾಗಿದ್ದರು. ಆಕಾಶವಾಣಿಯ ಮಂಜುನಾಥ್ ನಿರೂಪಿಸಿದರು. ಸಂಸ್ಕೃತಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಎಸ್. ಭುವನೇಶ್ವರಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ವಸುಂಧರಾ ಪ್ರದರ್ಶಕ ಕಲೆಗಳ ಕೇಂದ್ರದ ಕಲಾವಿದರು ಭರತನಾಟ್ಯ, ರೇಖಾ ರಾಜು ಅವರಿಂದ ಮೋಹಿನಿ ಆಟ್ಟಂ ಹಾಗೂ ಚೆನ್ನೈನ ಹಿತೈಷಿ ಧನನ್ ಅವರಿಂದ ಕುಚೂಪುಡಿ ನೃತ್ಯ ಪ್ರದರ್ಶನ ನಡೆಯಿತು.
ಮಹಿಳೆ ಶವ ಪತ್ತೆ
ಮೈಸೂರು: ವರುಣ ಹೋಬಳಿ ಅಂಚೆಹುಂಡಿ ಬಳಿಯ ರಾಮಪುರ ನಾಲೆಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಕೊಳೆತ ಶವ ಸೋಮವಾರ ಪತ್ತೆಯಾಗಿದೆ. 35 ರಿಂದ 40 ವರ್ಷದ ಮಹಿಳೆ ಶವವು ಕೊಳೆತು ಹೋಗಿದ್ದು, ಚಹರೆ ಪತ್ತೆಯಾಗಿಲ್ಲ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2444955 ಸಂಪರ್ಕಿಸಲು ಮೈಸೂರು ದಕ್ಷಿಣ ಠಾಣೆಯ ಎಸ್‌ಐ ಕೋರಿದ್ದಾರೆ.
ಹಣ ವಸೂಲಿ: ಮೂವರು ಪೇದೆ ಅಮಾನತು
ಮೈಸೂರು: ಮರಳು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಹಣ ವಸೂಲಿ ಮಾಡಿರುವ ಆರೋಪದಡಿ ಜಿಲ್ಲಾ ಅಪರಾಧ ಪತ್ತೆ ದಳದ (ಡಿಸಿಐಬಿ) ಮೂವರು ಪೇದೆಗಳನ್ನು ಮೈಸೂರು ಜಿಲ್ಲಾ ಎಸ್ಪಿ ಅಭಿನವ್ ಅಶೋಕ್ ಖರೆ ಅಮಾನತುಗೊಳಿಸಿದ್ದಾರೆ. ಡಿಸಿಐಬಿನ ಮುಖ್ಯಪೇದೆ ಪಾಂಡುರಂಗ, ಪೇದೆಗಳಾದ ಗೌರಿಶಂಕರ್ ಮತ್ತು ಮಂಜುನಾಥ್ ಅಮಾನತುಗೊಂಡವರು. ಈ ಮೂವರು ಪೊಲೀಸರು ಬನ್ನೂರು ರಸ್ತೆಯಲ್ಲಿರುವ ಹಾರೋಹಳ್ಳಿ ಬಳಿ ಮರಳು ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು ಎಂದು ಮೈಸೂರು ದಕ್ಷಿಣ ಠಾಣೆಯ ಎಸ್‌ಐ ಮಂಜುನಾಥ್ ಅವರು ಎಸ್ಪಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಅಭಿನವ್ ಖರೆ, ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

