ಮೈಸೂರು

'ಆಶ್ರಮ' ಹೆಸರು ಬದಲಿಸಿ, ದುಸ್ಥಿತಿ ಸರಿಪಡಿಸಿ

Published On :

ಮೈಸೂರು: ಆಶ್ರಮ ಶಾಲೆ ಎಂಬ ಹೆಸರನ್ನು ಬದಲಿಸಬೇಕು. ರಾಜ್ಯದಲ್ಲಿರುವ 118 ಆಶ್ರಮ ಶಾಲೆಗಳ ದುಸ್ಥಿತಿಯನ್ನು ಸರಿಪಡಿಸಬೇಕು.
- ಇದು ಕರ್ನಾಟಕ ಅರಣ್ಯಮೂಲ ಬುಡಕಟ್ಟುಗಳ ಒಕ್ಕೂಟವು ಬುಡಕಟ್ಟು ಉಳಿವಿಗಾಗಿ ನಮ್ಮ ನಡೆ ಆಂದೋಲನದ ಭಾಗವಾಗಿ ಮೈಸೂರಿನ ಕಲಾಮಂದಿರದ ಅಂಗಳದಲ್ಲಿ ಗುರುವಾರ ಏರ್ಪಡಿಸಿದ್ದ ಬುಡಕಟ್ಟು ಆಶ್ರಮ ಶಾಲೆಗಳ ಸ್ಥಿತಿಗತಿ ಕುರಿತು ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಕೇಳಿ ಬಂದ ಕೂಗು.
ಆಶ್ರಮ ಶಾಲೆ ಎನ್ನುವುದರಲ್ಲಿಯೇ ಗತಿ ಇಲ್ಲದ ಮಕ್ಕಳು, ಆಶ್ರಯ ಕೇಳುವ ಮಕ್ಕಳು ಎಂಬುದು ಧ್ವನಿಸುತ್ತದೆ. ಹೀಗಾಗಿ ಹೆಸರು ಬದಲಾಯಿಸಬೇಕು. ಶಾಲೆಗಳಲ್ಲಿರುವ ದುಸ್ಥಿತಿ ಸರಿಪಡಿಸಿ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಶ್ರಮ ಶಾಲೆಯ ಮಕ್ಕಳ ಪೋಷಕರು, ಸಮುದಾಯ ಪ್ರತಿನಿಧಿಗಳು, ಶಿಕ್ಷಕರು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಬುಡಕಟ್ಟು ಸಂಶೋಧಕ ಮನೋಜ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ 12 ಆಶ್ರಮ ಶಾಲೆಗಳಿವೆ. ಬಹುಪಾಲು ಶಾಲೆಗಳು ಅವ್ಯವಸ್ಥೆಯಿಂದ ಕೂಡಿವೆ. ಸರಿಯಾದ ಪಾಠ ಮಾಡುವವರಿಲ್ಲ.ಪೌಷ್ಟಿಕ ಆಹಾರ ನೀಡುತ್ತಿಲ್ಲ. ಹಂಗಾಮಿ ಮತ್ತು ದಿನಗೂಲಿ ಲೆಕ್ಕದ ಮೇಲೆ ಶಿಕ್ಷಕರು ಹಾಗೂ ಅಡುಗೆಯವರನ್ನು ನೇಮಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಆಶ್ರಮ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದರು.
ಸಮುದಾಯ ಪ್ರತಿನಿಧಿ ಭೂರಾಜ್ ಮಾತನಾಡಿ, ಹಾಸನ ಜಿಲ್ಲೆಯ ಹಗರೆ ಆಶ್ರಮ ಶಾಲೆಯಲ್ಲಿ ಸ್ವಂತ ಕಟ್ಟಡವಿಲ್ಲ. ಹೋರಾಟದಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯಿತು. ಆದರೆ, 9 ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿಗೆ ವರ್ಗಾಯಿಸಲಾಗಿದೆ ಎಂದು ಶಾಲೆಯನ್ನು ಮುಚ್ಚಲಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿದು, ಶಾಲೆಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಎಚ್.ಡಿ. ಕೋಟೆ ತಾಲೂಕಿನ ಜಕ್ಕಹಳ್ಳಿ ಗಿರಿಜನರ ಆಶ್ರಮ ಶಾಲೆಯ ಸಮುದಾಯ ಶಿಕ್ಷಕ ಸಿ. ರಾಜು, ಮಂಗಳೂರು ತಾಲೂಕಿನ ಮಧ್ಯಪಾದವೋ ಗ್ರಾಮದ ಭಟ್ಯ, ಚಾಮರಾಜನಗರ ಜಿಲ್ಲೆಯ ಜೀರಿಗೆ ಗದ್ದೆಯ ಗಿರಿಜನ ಆಶ್ರಮ ಶಾಲೆಯ ಶಿಕ್ಷಕ ಮುತ್ತಯ್ಯ ಅವರು ಆಶ್ರಮ ಶಾಲೆಗಳ ದುಸ್ಥಿತಿ ಕುರಿತು ಮಾತನಾಡಿದರು.ಇದೇ ವೇಳೆ ಆಶ್ರಮ ಶಾಲೆಗಳ ವಾಸ್ತವ ಸ್ಥಿತಿ ಕುರಿತ ಸಂಗ್ರಹಿತ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಣ ತಜ್ಞರಾದ ಡಾ. ನಿರಂಜನಾರಾಧ್ಯ, ಬುಡಕಟ್ಟು ಶಿಕ್ಷಣ ತಜ್ಞ ಪ್ರೊ.ವಾಸವಿ, ಎಚ್.ಡಿ. ಕೋಟೆ ತಾಲೂಕು ಬಸವನಗಿರಿ ಆಶ್ರಮ ಶಾಲೆಯ ಶಿಕ್ಷಕ ಮಾರ ಜೇನುಕುರುಬ, ಮುಖಂಡರಾದ ಸುಶೀಲ ಕೊರಗನಾಡ, ಧನಂಜಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.