ದೇಶ ಆಳುತ್ತಿರುವವರು ಪಾಕಿಸ್ತಾನಿ ನಿಷ್ಠರು
ಕ.ಪ್ರ.ವಾರ್ತೆ ಮೈಸೂರು ಮಾ. 27
ಪಾಕಿಸ್ತಾನಕ್ಕೆ ನಿಷ್ಠರಾದವರೂ ದೇಶವನ್ನಾಳುತ್ತಿದ್ದಾರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಿ ನಮ್ಮ ಸೈನಿಕರಿಗೆ ಮತ್ತು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಕರೆ ನೀಡಿದರು.
ಶಂಕರ ಮಠ ಆವರಣದಲ್ಲಿ ಗುರುವಾರ ನಡೆದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾಲ್ವರು ಪಾಕಿಸ್ತಾನಿ ಸೈನಿಕರ ತಲೆ ಕಡಿದು ತನ್ನಿ ಎನ್ನದ ಪ್ರಧಾನಿ ಎಂದು ಟೀಕಿಸಿದ್ದು ಕೆರಳಿಸುವ ಮಾತು ಎಂದು ಕಾಂಗ್ರೆಸ್ನವರು ನನ್ನ ವಿರುದ್ಧ ದೂರು ನೀಡಿದ್ದಾರೆ. ನಾನು ಭಾರತೀಯ ಸೈನಿಕರ ತಲೆ ಕಡಿಯಿರಿ ಎಂದಿಲ್ಲ. ನಮ್ಮ ಸೈನಿಕರ ತಲೆ ಕಡಿದ ಪಾಕಿಸ್ತಾನಿ ಸೈನಿಕರ ತಲೆ ಕಡಿದು ತನ್ನಿ ಎಂದಿದ್ದೆ. ನಮ್ಮನ್ನಾಳುತ್ತಿರುವ ಸರ್ಕಾರ ಯಾರಿಗೆ ನಿಷ್ಠವಾಗಿದೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ ಎಂದರು.
ಭಾರತೀಯ ಸೈನಿಕರಿಗೆ ಸಿಗಬೇಕಾದ ಗೌರವ, ಸವಲತ್ತನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಗುಲ್ಬರ್ಗದಲ್ಲಿ ಹತ್ಯೆಯಾದ ಮಲ್ಲಿಕಾರ್ಜುನ ಬಂಡೆ ಸಾವು ಇನ್ನೂ ನಿಗೂಢವಾಗಿದೆ. ಬಂಡೆ ಪತ್ನಿ ಗೋಳಾಡಿ, ಗುಲ್ಬರ್ಗ ಜನತೆ ಬಂದ್ಗೆ ಕರೆ ನೀಡಿದ್ದರೆ, ನಮ್ಮ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿತ್ತು. ಇದು ನಮ್ಮನ್ನು ರಕ್ಷಿಸುವ ಸೇನಾಪಡೆ ಮತ್ತು ಪೊಲೀಸರನ್ನು ನಡೆಸಿಕೊಳ್ಳುವ ರೀತಿಯೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಭ್ಯರ್ಥಿ ನನ್ನನ್ನು ಪ್ರಚೋದಿಸಲು ಇದು ಫ್ರೆಂಡ್ಲಿ ಸ್ಪರ್ಧೆ, ಅವರು ಸಿಂಹ- ನಾನು ಹುಲಿ, ಅವರು ಶ್ರೀಮಂತರ ಸಿಂಹ ಎಂದೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಾನು ಬಡ ಕೃಷಿಕನ ಮಗನಾಗಿ ಹುಟ್ಟಿದ್ದೇನೆ. ಬಡವರ ಸಂಕಷ್ಟ ಪರಿಹರಿಸಲು ಬಂದಿದ್ದೇನೆ. ಜಾಫರ್ ಷರೀಫ್ ಜೆಡಿಎಸ್ನಿಂದ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಸದ್ಯ ಬಚಾವಾದೆ ಎಂದು ಧರ್ಮಸ್ಥಳ, ಕೊಲ್ಲೂರಿಗೆ ಯಾತ್ರೆ ಹೋಗಿ ಕಾಣಿಕೆ ನೀಡಿ ಬಂದಿದ್ದಾರೆ. ಇವರು ಮೂಢನಂಬಿಕೆ ಪ್ರತಿಬಂಧಕ ಕಾನೂನು ರಚಿಸುವವರು ಎಂದು ವ್ಯಂಗ್ಯವಾಡಿದರು.
ಶ್ರಮಪಟ್ಟು ಮತಕೇಳಿ: ಮಾಜಿ ಸಚಿವ ಎಸ್.ಎ. ರಾಮದಾಸ್ ಮಾತನಾಡಿ, ಈ ಬಾರಿ ಇತರೆ ಪಕ್ಷಗಳಿಗಿಂತ 21 ಸಾವಿರಕ್ಕೂ ಅಧಿಕ ಮತವನ್ನು ಬಿಜೆಪಿಗೆ ನೀಡುತ್ತೇವೆ. ಈಗ ಇರುವುದು ಕೇವಲ 456 ಗಂಟೆ, ಪ್ರತಿ ಬೂತ್ನ ಏಜೆಂಟರು ಶ್ರಮಪಟ್ಟು ಮತ ಕೇಳಬೇಕು. ಯುಗಾದಿಯಂದು ತಮಗೆ ವಹಿಸಿದ 30 ರಿಂದ 40 ಮನೆಗೆ ತೆರಳಿ ಬೇವು- ಬೆಲ್ಲ ಹಂಚಿ ಮತ ಕೇಳಬೇಕು. ಹಬ್ಬದ ದಿನ ನಾವು ಹೊಸ ಬಟ್ಟೆ ತೊಡುವಂತೆ ಈ ಬಾರಿ ತಾಯಿ ಭಾರತಾಂಬೆಗೆ ತೊಡಿಸಿರುವ ಕಾಂಗ್ರೆಸ್ನ ಹೊಲಸು ಬಟ್ಟೆ ತೆಗೆದು ಹೊಸ ಬಟ್ಟೆ ತೊಡಿಸುವ ಸಂಕಲ್ಪ ಮಾಡಬೇಕು. ಯಾರಿಗೆ ಬೇವು, ಯಾರಿಗೆ ಬೆಲ್ಲ ನೀಡಬೇಕು ಎಂಬುದನ್ನು ತಾಯಿ ಚಾಮುಂಡೇಶ್ವರಿಯೇ ನಿರ್ಧರಿಸಲಿ ಎಂದರು.
ನಗರ ಬಿಜೆಪಿ ಅಧ್ಯಕ್ಷ ಇ. ಮಾರುತಿರಾವ್ ಪವಾರ್ ಮಾತನಾಡಿ, ಭಾರತಕ್ಕೆ ಸಶಕ್ತ ಪ್ರಧಾನಿ ಬೇಕೆ ಹೊರತು, ಸೋನಿಯಾ ಗಾಂಧಿಗೆ ಹೆದರಿ ಕೂರುವ ಪ್ರಧಾನಿ ನಮಗೆ ಬೇಕಿಲ್ಲ ಎಂಬ ತೀರ್ಮಾನ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್ ಮಾತನಾಡಿ, ಪ್ರತಿಯೊಬ್ಬ ಬೂತ್ ಮಟ್ಟದ ಕಾರ್ಯಕರ್ತರೂ ತಮ್ಮ ವ್ಯಾಪ್ತಿಗೆ ಒಳಪಡುವ ಮತದಾರರ ಪಟ್ಟಿಯನ್ನು ಕಡ್ಡಾಯವಾಗಿ ಓದಬೇಕು. ಆ ಪೈಕಿ ಮನೆ ಬದಲಿಸಿರುವವರನ್ನು ಪ್ರತ್ಯೇಕ ಪಟ್ಟಿ ಮತ್ತು 18 ರಿಂದ 30 ವರ್ಷದ ಮತದಾರರದ್ದು ಮತ್ತೊಂದು ಪಟ್ಟಿ ತಯಾರಿಸಿ, ಆ ಯುವಕರನ್ನು ಗುರುತಿಸಿ ಕರೆಯುವಂತೆ ಆಗಬೇಕು. ಮನೆಯ ಎಲ್ಲಾ ಸದಸ್ಯರ ಹೆಸರು ನಿಮಗೆ ಪರಿಚಯ ಆಗಬೇಕು. ಏ.3 ರವರೆಗೆ ಮೊದಲು ಪ್ರತಾಪ್ ಸಿಂಹ ಅವರ ಪರಿಚಯ ಪತ್ರ, ಏ.4 ರಿಂದ 9 ರವರೆಗೆ ಬಿಜೆಪಿಗೆ ಏಕೆ ಮತ ಹಾಕಬೇಕು ಎಂಬ ಮಾಹಿತಿಯುಳ್ಳ ಕರಪತ್ರ ಮತ್ತು ಏ.9 ರಿಂದ 13 ರವರೆಗೆ ಬಿಜೆಪಿ ಚಿಹ್ನೆ ಮತ್ತು ಪ್ರತಾಪ್ಸಿಂಹ ಅವರ ಭಾವಚಿತ್ರ ಇರುವ ಕರಪತ್ರವನ್ನು ಮನೆ ಮನೆಗೆ ತಲುಪಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಕೆ.ಆರ್. ಕ್ಷೇತ್ರ ಬಿಜೆಪಿ ಅಧ್ಯಕ್ಷ ಸೋಮ್ಸುಂದರ್, ಪ್ರಧಾನ ಕಾರ್ಯದರ್ಶಿ ಗೋಕುಲ್, ಯುವ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಪಾಲಿಕೆ ಸದಸ್ಯರಾದ ಶಿವಕುಮಾರ್, ಬಿ.ವಿ.ಮಂಜುನಾಥ್, ಮಹದೇವಮ್ಮ, ವನಿತಾ ಪ್ರಸನ್ನ, ಮ.ವಿ. ರಾಮಪ್ರಸಾದ್, ಸ್ನೇಕ್ ಶ್ಯಾಂ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಪ್ಪಗೌಡ, ಯಶಸ್ವಿನಿ ಸೋಮಶೇಖರ್, ಸೋಮಸುಂದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

